
ಓಸ್ಲೋ, 06 ಜೂನ್ (ಹಿ.ಸ.) :
ಆ್ಯಂಕರ್ : ಭಾರತದ ಯುವ ಚದುರಂಗ ತಾರೆ ಆರ್. ಪ್ರಜ್ಞಾನಂದ ಅವರು ನಾರ್ವೆ ಚೆಸ್-2026 ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ಭಾರತೀಯ ಚದುರಂಗ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.
ಅಂತಿಮ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಮಣಿಸಿದ ಪ್ರಜ್ಞಾನಂದ, ಪ್ರತಿಷ್ಠಿತ ನಾರ್ವೆ ಚೆಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಅಪೂರ್ವ ಸಾಧನೆ ಮಾಡಿದ್ದಾರೆ.
ಟೂರ್ನಿಯ ಅಂತಿಮ ದಿನದ ಆರಂಭದಲ್ಲಿ 15 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದ 20 ವರ್ಷದ ಪ್ರಜ್ಞಾನಂದ, ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸಿ ಒಟ್ಟು 18 ಅಂಕಗಳನ್ನು ಕಲೆ ಹಾಕಿದರು. ಇದರೊಂದಿಗೆ ಅವರು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡರು.
ಟೂರ್ನಿಯ ಆರಂಭಿಕ ಹಂತದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಪ್ರಜ್ಞಾನಂದ, ನಂತರದ ಸುತ್ತುಗಳಲ್ಲಿ ಅದ್ಭುತ ಆಟದ ಮೂಲಕ ಎಲ್ಲರ ಗಮನ ಸೆಳೆದರು. ವಿಶೇಷವಾಗಿ ವಿಶ್ವದ ನಂ.1 ಆಟಗಾರ ಹಾಗೂ ನಾರ್ವೆ ಚೆಸ್ನ ಏಳು ಬಾರಿಯ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಎರಡು ಬಾರಿ ಸೋಲಿಸಿ ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದರು.
ಪ್ರಶಸ್ತಿಗಾಗಿ ನಡೆದ ಪೈಪೋಟಿಯಲ್ಲಿ ಅಮೆರಿಕದ ವೆಸ್ಲಿ ಸೊ ಕೂಡ ಪ್ರಮುಖ ಸ್ಪರ್ಧಿಯಾಗಿದ್ದರು. ಅಂತಿಮ ಸುತ್ತಿಗೂ ಮುನ್ನ 15.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದ ಅವರು, ಫ್ರಾನ್ಸ್ನ ಅಲಿರೇಝಾ ಫಿರೋಜ್ಜಾ ವಿರುದ್ಧದ ಪಂದ್ಯವನ್ನು ಸಮಬಲದಲ್ಲಿ ಮುಗಿಸಿದ ಕಾರಣ ಟೈ-ಬ್ರೇಕರ್ಗೆ ತೆರಳಬೇಕಾಯಿತು. ಟೈ-ಬ್ರೇಕರ್ನಲ್ಲಿ ಜಯ ಗಳಿಸಿದರೂ ಅವರಿಗೆ ಕೇವಲ 1.5 ಅಂಕಗಳು ಮಾತ್ರ ಲಭಿಸಿದವು. ಪರಿಣಾಮವಾಗಿ ಅವರ ಒಟ್ಟು ಅಂಕಗಳು 17ಕ್ಕೆ ತಲುಪಿತು.
ಇದೇ ವೇಳೆ ಪ್ರಜ್ಞಾನಂದ ಅವರು ವಿನ್ಸೆಂಟ್ ಕೀಮರ್ ವಿರುದ್ಧ ಗೆಲುವು ಸಾಧಿಸಿ 18 ಅಂಕಗಳನ್ನು ಗಳಿಸಿದರು. ಇದರಿಂದ ವೆಸ್ಲಿ ಸೊ ಅವರನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅಲಿರೇಝಾ ಫಿರೋಜ್ಜಾ 15.5 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು.
ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್ ಕೂಡ ಪ್ರಶಸ್ತಿಯ ಸ್ಪರ್ಧೆಯಲ್ಲಿ ಇದ್ದರೂ, ಅಂತಿಮ ಹಂತದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದ ಕಾರಣ ಚಾಂಪಿಯನ್ ಪಟ್ಟದ ರೇಸ್ನಿಂದ ಹೊರಬಿದ್ದರು.
ವಿಶ್ವನಾಥನ್ ಆನಂದ್ ಅವರ ನಂತರ ಜಾಗತಿಕ ಚದುರಂಗ ವೇದಿಕೆಯಲ್ಲಿ ಭಾರತದ ಪ್ರಭಾವವನ್ನು ಮತ್ತಷ್ಟು ಬಲಪಡಿಸಿರುವ ಪ್ರಜ್ಞಾನಂದ ಅವರ ಈ ಸಾಧನೆ ಭಾರತೀಯ ಚದುರಂಗಕ್ಕೆ ಮಹತ್ವದ ಮೈಲುಗಲ್ಲಾಗಿದೆ. ವಿಶ್ವದ ಅತ್ಯುತ್ತಮ ಆಟಗಾರರ ನಡುವೆ ನಡೆದ ಕಠಿಣ ಪೈಪೋಟಿಯಲ್ಲಿ ಚಾಂಪಿಯನ್ ಆಗುವ ಮೂಲಕ ಪ್ರಜ್ಞಾನಂದ ಭಾರತೀಯ ಕ್ರೀಡಾ ಇತಿಹಾಸದಲ್ಲಿ ತಮ್ಮ ಹೆಸರನ್ನು ಚಿನ್ನದ ಅಕ್ಷರಗಳಲ್ಲಿ ಬರೆದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.