
ಬೆಂಗಳೂರು, 06 ಜೂನ್ (ಹಿ.ಸ.) :
ಆ್ಯಂಕರ್ : ಮಕ್ಕಳ ಮನರಂಜನೆ ಹಾಗೂ ಮೌಲ್ಯಾಧಾರಿತ ಕಥಾಹಂದರವನ್ನು ಒಳಗೊಂಡಿರುವ ಕನ್ನಡ ಚಿತ್ರ ‘ಅಂಬರ ಗುಡ್ಡ’ ಚಿತ್ರದ ಆಡಿಯೋ ಹಾಗೂ ಟೈಟಲ್ ಬಿಡುಗಡೆ ಸಮಾರಂಭವು ನಾಳೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಎಸ್ಆರ್ವಿ ಥಿಯೇಟರ್ನಲ್ಲಿ ನಡೆಯಲಿದೆ.
ಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿರುವ ವಿಷ್ಣು ತೇಜ ಅವರ ಕನಸಿನ ಯೋಜನೆಯಾಗಿರುವ ‘ಅಂಬರ ಗುಡ್ಡ’ ಈಗಾಗಲೇ ಸಿನಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಿಸಲಾಗಿರುವ ಈ ಚಿತ್ರವು ಮನರಂಜನೆಯ ಜೊತೆಗೆ ಉತ್ತಮ ಸಂದೇಶವನ್ನು ಹೊತ್ತು ತರುವ ನಿರೀಕ್ಷೆ ಮೂಡಿಸಿದೆ.
ಮಧ್ಯಾಹ್ನ 2.30ಕ್ಕೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಹಿರಿಯ ನಟ ವಿನೋದ್ ರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಖ್ಯಾತ ಸಾಹಿತಿ ಹಾಗೂ ಗೀತರಚನಾಕಾರ ಡಾ. ವಿ. ನಾಗೇಂದ್ರ ಪ್ರಸಾದ್ ವಿಶೇಷ ಅತಿಥಿಯಾಗಿ ಉಪಸ್ಥಿತರಿರಲಿದ್ದಾರೆ ಎಂದು ಚಿತ್ರದ ಪ್ರಚಾರ ಸಂಸ್ಥೆ ಪಿಂಕ್ ಟಿಕೆಟ್ ಉಸ್ತುವಾರಿ ಪವಿತ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.