
ವಾಷಿಂಗ್ಟನ್, 24 ಮೇ (ಹಿ.ಸ.) :
ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಒಪ್ಪಂದ ಕುರಿತ ಮಾತುಕತೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ವೈಟ್ ಹೌಸ್ ಸಮೀಪ ಶನಿವಾರ ಸಂಜೆ ನಡೆದ ಭಾರೀ ಗುಂಡಿನ ದಾಳಿಯಿಂದ ವಾಷಿಂಗ್ಟನ್ ನಗರದಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಯಿತು. ಘಟನೆಯ ಬಳಿಕ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಸಂಪೂರ್ಣ ಪ್ರದೇಶವನ್ನು ಭದ್ರತಾ ವಲಯಕ್ಕೆ ಒಳಪಡಿಸಿದರು.
ಅಮೆರಿಕದ ಪ್ರಮುಖ ಸುದ್ದಿವಾಹಿನಿಗಳ ವರದಿ ಪ್ರಕಾರ, ವೈಟ್ ಹೌಸ್ ಸಮೀಪದ ಐಸನ್ಹೋವರ್ ಕಾರ್ಯಾಲಯ ಕಟ್ಟಡದ ಬಳಿ 17ನೇ ರಸ್ತೆ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ ಪ್ರದೇಶದಲ್ಲಿ ಸುಮಾರು 15ರಿಂದ 30 ಸುತ್ತು ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಒಬ್ಬ ಶಂಕಿತ ವ್ಯಕ್ತಿ ಮತ್ತು ದಾರಿಹೋಕರೊಬ್ಬರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಗುಂಡಿನ ಸದ್ದು ಕೇಳಿಬಂದ ಕೂಡಲೇ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ವೈಟ್ ಹೌಸ್ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಿದರು. ಭದ್ರತಾ ಕಾರಣಗಳಿಂದ ಕೆಲಕಾಲ ವೈಟ್ ಹೌಸ್ ಪ್ರವೇಶವನ್ನೂ ನಿರ್ಬಂಧಿಸಲಾಯಿತು. ಅಲ್ಲದೆ, ವೈಟ್ ಹೌಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಪತ್ರಕರ್ತರನ್ನು ತಕ್ಷಣ ಪ್ರೆಸ್ ಬ್ರೀಫಿಂಗ್ ಕೊಠಡಿಗೆ ಸ್ಥಳಾಂತರಿಸಲಾಯಿತು.
ಸ್ಥಳದಲ್ಲಿದ್ದ ಪತ್ರಕರ್ತೆ ಎಮ್ಮಾ ನಿಕೋಲ್ಸನ್ ಮಾತನಾಡಿ, “ನಾವು ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಏಕಾಏಕಿ ಹಲವು ಸುತ್ತು ಗುಂಡಿನ ಸದ್ದು ಕೇಳಿಸಿತು. ತಕ್ಷಣ ನೆಲಕ್ಕುರುಳಿದೆವು. ಬಳಿಕ ಭದ್ರತಾ ಸಿಬ್ಬಂದಿ ನಮ್ಮನ್ನು ಒಳಗೆ ಕರೆದೊಯ್ದರು,” ಎಂದು ತಿಳಿಸಿದ್ದಾರೆ.
ವೈಟ್ ಹೌಸ್ ವಕ್ತಾರ ಸ್ಟೀವನ್ ಚ್ಯೂಂಗ್ ಮಾಹಿತಿ ನೀಡಿ, ಸಂಜೆ ನಾಲ್ಕು ಗಂಟೆಯವರೆಗೆ ಅಧ್ಯಕ್ಷ ಟ್ರಂಪ್ ವೈಟ್ ಹೌಸ್ನಲ್ಲೇ ಇದ್ದರು ಎಂದು ಹೇಳಿದ್ದಾರೆ. ಬಳಿಕವೂ ಅವರು ಅಧಿಕೃತ ನಿವಾಸದಲ್ಲೇ ಇದ್ದರು ಎಂಬುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.
ಮೂಲಗಳ ಪ್ರಕಾರ, ಶಂಕಿತರು ಸೀಕ್ರೆಟ್ ಸರ್ವಿಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಲು ಯತ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಭದ್ರತಾ ಸಿಬ್ಬಂದಿಯೂ ಗುಂಡಿನ ದಾಳಿ ನಡೆಸಿದರು. ಈ ವೇಳೆ ಒಬ್ಬ ಶಂಕಿತ ಗಾಯಗೊಂಡಿದ್ದಾನೆ. ಘಟನೆಯ ಸಂದರ್ಭದಲ್ಲೇ ಅಲ್ಲಿಂದ ತೆರಳುತ್ತಿದ್ದ ದಾರಿಹೋಕರೊಬ್ಬರೂ ಗುಂಡೇಟಿಗೆ ಒಳಗಾಗಿದ್ದಾರೆ.
ಅಮೆರಿಕದ ತನಿಖಾ ಸಂಸ್ಥೆಯ ನಿರ್ದೇಶಕ ಕಾಶ್ ಪಟೇಲ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿ, “ಮಾಹಿತಿ ದೊರಕುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಶಂಕಿತ ವ್ಯಕ್ತಿ ಭದ್ರತಾ ಕಚೇರಿಯತ್ತ ಗುಂಡು ಹಾರಿಸಿದ್ದಾನೆ. ಪ್ರತಿದಾಳಿಯಲ್ಲಿ ಒಬ್ಬ ಶಂಕಿತ ಗಾಯಗೊಂಡಿದ್ದಾನೆ,” ಎಂದು ತಿಳಿಸಿದ್ದಾರೆ.
ಸೀಕ್ರೆಟ್ ಸರ್ವಿಸ್ ವಕ್ತಾರ ಆಂಥನಿ ಗುಗ್ಲಿಯೆಲ್ಮಿ ಮಾತನಾಡಿ, “ಶಂಕಿತರ ದುರುದ್ದೇಶವನ್ನು ಭದ್ರತಾ ಸಿಬ್ಬಂದಿ ವಿಫಲಗೊಳಿಸಿದ್ದಾರೆ,” ಎಂದು ಹೇಳಿದ್ದಾರೆ.
ಘಟನೆಯ ನಂತರ ವೈಟ್ ಹೌಸ್ ಉತ್ತರ ಲಾನ್ ಪ್ರದೇಶವನ್ನು ಸಂಪೂರ್ಣ ಖಾಲಿ ಮಾಡಲಾಗಿತ್ತು. ಸುಮಾರು ಒಂದು ಗಂಟೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಮತ್ತೆ ಪ್ರವೇಶ ನೀಡಲಾಯಿತು.
ಇದೇ ವೇಳೆ, ಕೆಲವು ವಾರಗಳ ಹಿಂದೆ ನಡೆದ ವೈಟ್ ಹೌಸ್ ವರದಿಗಾರರ ಔತಣಕೂಟದ ಸಂದರ್ಭದಲ್ಲಿಯೂ ಗುಂಡಿನ ದಾಳಿ ನಡೆದಿತ್ತು ಎಂಬ ಮಾಹಿತಿ ಮತ್ತೆ ಚರ್ಚೆಗೆ ಬಂದಿದೆ. ಆ ವೇಳೆ ಸಹ ಭದ್ರತಾ ಸಿಬ್ಬಂದಿ ಅಧ್ಯಕ್ಷರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದರು.
ಪ್ರಾಥಮಿಕ ತನಿಖೆಯ ಪ್ರಕಾರ, ಕೋಲ್ ಥಾಮಸ್ ಅಲೆನ್ ಎಂಬ ಶಂಕಿತ ವ್ಯಕ್ತಿ ಶಾಟ್ಗನ್ ಹಿಡಿದು ಭದ್ರತಾ ತಪಾಸಣಾ ಕಚೇರಿಯಿಂದ ಓಡುತ್ತಾ ಸೀಕ್ರೆಟ್ ಸರ್ವಿಸ್ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಅಧ್ಯಕ್ಷ ಟ್ರಂಪ್ ಹತ್ಯೆ ಯತ್ನದ ಆರೋಪದಡಿ ತನಿಖೆ ಮುಂದುವರಿದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.