ಭಟ್ಕಳ ತಟ್ಟೆ ಹಕ್ಕಲು ನದಿಯಲ್ಲಿ ದುರಂತ:11 ಮಂದಿ ಜಲಸಮಾಧಿ:ಪ್ರಧಾನಿ ಪರಿಹಾರ ಘೋಷಣೆ
ಕಾರವಾರ, 24 ಮೇ (ಹಿ.ಸ.): ಆ್ಯಂಕರ್: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ತಟ್ಟೆ ಹಕ್ಕಲು ನದಿಯಲ್ಲಿ ನಡೆದ ಭೀಕರ ದುರಂತ ಕರಾವಳಿ ಭಾಗದ ಜನರನ್ನು ಬೆಚ್ಚಿಬೀಳಿಸಿದೆ. ಜೀವನೋಪಾಯಕ್ಕಾಗಿ ಕಪ್ಪೆಚಿಪ್ಪು ಹೆಕ್ಕಲು ನದಿಗಿಳಿದ 14 ಮಂದಿಯಲ್ಲಿ 11 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನ
ಭಟ್ಕಳ ತಟ್ಟೆ ಹಕ್ಕಲು ನದಿಯಲ್ಲಿ ದುರಂತ:11 ಮಂದಿ ಜಲಸಮಾಧಿ:ಪ್ರಧಾನಿ ಪರಿಹಾರ ಘೋಷಣೆ


ಕಾರವಾರ, 24 ಮೇ (ಹಿ.ಸ.):

ಆ್ಯಂಕರ್:

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ತಟ್ಟೆ ಹಕ್ಕಲು ನದಿಯಲ್ಲಿ ನಡೆದ ಭೀಕರ ದುರಂತ ಕರಾವಳಿ ಭಾಗದ ಜನರನ್ನು ಬೆಚ್ಚಿಬೀಳಿಸಿದೆ. ಜೀವನೋಪಾಯಕ್ಕಾಗಿ ಕಪ್ಪೆಚಿಪ್ಪು ಹೆಕ್ಕಲು ನದಿಗಿಳಿದ 14 ಮಂದಿಯಲ್ಲಿ 11 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಭವಿಸಿದೆ.

ಮೃತರಲ್ಲಿ ಬಹುತೇಕರು ಮಹಿಳೆಯರಾಗಿದ್ದು, ಈ ದುರಂತದಿಂದ ಶಿರಾಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಭಾನುವಾರ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿರುವ ಹಿನ್ನೆಲೆ, ಹೆಚ್ಚಿನ ಪ್ರಮಾಣದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ತಂಡವೊಂದು ನದಿಯತ್ತ ತೆರಳಿತ್ತು. ಇಬ್ಬರು ಪುರುಷರನ್ನು ಹೊರತುಪಡಿಸಿ ಉಳಿದವರು ಮಹಿಳೆಯರೇ ಆಗಿದ್ದರು. ಇವರು ಸಾಂಪ್ರದಾಯಿಕ ಮೀನುಗಾರರಲ್ಲದ ಕಾರಣ ನದಿಯ ನೀರಿನ ಏರಿಳಿತ ಹಾಗೂ ಉಬ್ಬರದ ಬಗ್ಗೆ ಸೂಕ್ತ ಅರಿವು ಇರಲಿಲ್ಲ ಎಂದು ತಿಳಿದುಬಂದಿದೆ.

ಮೊದಲಿಗೆ ಎದೆಮಟ್ಟದ ನೀರಿನಲ್ಲಿ ಇಳಿದು ಕಪ್ಪೆಚಿಪ್ಪು ಸಂಗ್ರಹಿಸಿದ ತಂಡಕ್ಕೆ ಎರಡು-ಮೂರು ಬುಟ್ಟಿಗಳಷ್ಟು ಚಿಪ್ಪು ಸಿಕ್ಕಿತ್ತು. ಇದರಿಂದ ಮತ್ತಷ್ಟು ಒಳಭಾಗಕ್ಕೆ ತೆರಳಿ ಸಂಗ್ರಹಿಸುವ ವೇಳೆ ದುರಂತ ಸಂಭವಿಸಿದೆ. ಅಷ್ಟರಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು, ನೀರಿನ ಪ್ರವಾಹದ ದಿಕ್ಕು ಬದಲಾಗಿತ್ತು. ನೀರಿನ ಆಳ ಮತ್ತು ಹರಿವಿನ ತೀವ್ರತೆಯನ್ನು ಅಂದಾಜಿಸಲು ಸಾಧ್ಯವಾಗದೆ ಎಲ್ಲರು ನದಿಯಲ್ಲಿ ಮುಳುಗಿದ್ದಾರೆ.

ಸ್ಥಳೀಯರು ಹಾಗೂ ಗಂಗೊಳ್ಳಿಯ ರಕ್ಷಣಾ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸ್ವಯಂಸೇವಕ ದಿನೇಶ್ ಖಾರ್ವಿ ನೇತೃತ್ವದ ತಂಡ ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯದಲ್ಲಿ ತೊಡಗಿತ್ತು. “ಒಬ್ಬರಿಗೆ ಈಜು ಬರುವವರಿದ್ದರೂ ಹಲವರನ್ನು ರಕ್ಷಿಸಬಹುದಾಗಿತ್ತು. ಆದರೆ ಇಳಿತದ ಸಮಯದಲ್ಲಿ ನೀರಿಗೆ ಇಳಿದವರು, ಉಬ್ಬರದ ಹೊತ್ತಿಗೆ ದಾರಿ ತಪ್ಪಿ ಸಂಕಷ್ಟಕ್ಕೀಡಾದರು” ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

ಕರಾವಳಿ ಭಾಗದಲ್ಲಿ ನಿರಂತರ ಮಳೆಯಿಂದ ನದಿಗಳ ನೀರಿನ ಮಟ್ಟದಲ್ಲಿ ಕ್ಷಣಕ್ಷಣಕ್ಕೂ ಬದಲಾವಣೆ ಉಂಟಾಗುತ್ತಿದೆ. ಅರೆ ಗಂಟೆಯಲ್ಲೇ ನೀರಿನ ಮಟ್ಟ ಏರಿಕೆಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದೇ ಕಾರಣದಿಂದ ನೀರಿನ ಅಂದಾಜು ತಪ್ಪಿ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, “ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ದುರಂತ ಸಾವು ನೋವುಗಳ ಸುದ್ದಿ ತುಂಬಾ ದುಃಖಕರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ” ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೂಡಾ ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. “ಕರ್ನಾಟಕದ ಕಾರವಾರ ಭಾಗದಲ್ಲಿ ಸಂಭವಿಸಿದ ದುರಂತದ ಸುದ್ದಿ ಆಘಾತ ತಂದಿದೆ. ಮೃತರ ಕುಟುಂಬಗಳಿಗೆ ಸಂತಾಪಗಳು ಎಂದು ತಿಳಿಸಿದ್ದಾರೆ.

ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ” ಎಂದು ತಿಳಿಸಿದ್ದು, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande