
ಹುಬ್ಬಳ್ಳಿ, 24 ಮೇ (ಹಿ.ಸ.) :
ಆ್ಯಂಕರ್ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಉದ್ದೇಶಿತ ಅಣು ಚಾಲಿತ ವಿದ್ಯುತ್ ಯೋಜನೆ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿನ ಪರಿಸರ ಹಾನಿಕಾರಕ ಯೋಜನೆಗಳನ್ನು ವಿರೋಧಿಸಿ ಮೇ 25 ರಂದು “ಸಾಗರ್ ಚಲೋ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಕ್ಕ ಫೌಂಡೇಶನ್ ಟ್ರಸ್ಟ್ ಮತ್ತು “ಪರಿಸರಕ್ಕಾಗಿ ನಾವು” ಧಾರವಾಡ ಜಿಲ್ಲಾ ಘಟಕ ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿಯಿಂದ ಸಾಗರದತ್ತ ತೆರಳಲಿರುವ ಪ್ರತಿಭಟನಾ ತಂಡವು ಮಲೆನಾಡು ಅಣು ಸ್ಥಾವರ ವಿರೋಧಿ ಹೋರಾಟ ಸಮಿತಿ ಆಯೋಜಿಸಿರುವ ಸರದಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಲಿದೆ. ಬಳಿಕ ಮುಖ್ಯಮಂತ್ರಿಗಳಿಗೆ ಸಾಗರ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಗುವುದು. ಜೊತೆಗೆ ಪ್ರಧಾನಮಂತ್ರಿಗಳಿಗೆ ಪತ್ರ ರವಾನಿಸುವುದಾಗಿ ಸಂಘಟನೆಗಳು ತಿಳಿಸಿವೆ.
ಸಾಗರ ತಾಲ್ಲೂಕಿನ ಆವಿನಹಳ್ಳಿ ಹೋಬಳಿಯ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಸೂರು ಪ್ರದೇಶದಲ್ಲಿ ಕೇಂದ್ರ ಸರ್ಕಾರ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಸ್ಥಳ ಗುರುತಿಸಿದೆ ಎನ್ನಲಾಗಿದೆ. ಈ ಪ್ರದೇಶವು ಶರಾವತಿ ಹಿನ್ನೀರು ಹಾಗೂ ಅಪಾರ ಜೀವವೈವಿಧ್ಯ ಹೊಂದಿರುವ ಪಶ್ಚಿಮ ಘಟ್ಟದ ಅರಣ್ಯ ವಲಯವಾಗಿದ್ದು, ಯೋಜನೆಯಿಂದ ಪರಿಸರ ವ್ಯವಸ್ಥೆಗೆ ಭಾರೀ ಹಾನಿಯಾಗುವ ಸಾಧ್ಯತೆ ಇದೆ ಎಂದು ಆರೋಪಿಸಲಾಗಿದೆ.
“ಅಣು ವಿದ್ಯುತ್ ಸ್ಥಾವರ ನಿರ್ಮಾಣವೆಂದರೆ ಕೇವಲ ವಿದ್ಯುತ್ ಉತ್ಪಾದನೆ ಮಾತ್ರವಲ್ಲ; ಅದು ಅರಣ್ಯ ನಾಶ, ನೀರಿನ ಮಾಲಿನ್ಯ, ವಿಕಿರಣ ತ್ಯಾಜ್ಯ, ಜೀವ ವೈವಿಧ್ಯ ಕುಸಿತ ಹಾಗೂ ಜನರ ಆರೋಗ್ಯದ ಮೇಲೆ ದೀರ್ಘಕಾಲದ ಅಪಾಯವನ್ನು ಉಂಟು ಮಾಡುವ ಯೋಜನೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.