ಅನ್ಯ ಧರ್ಮಗಳ ಬಗ್ಗೆ ಗೌರವ ಇರಲಿ : ಸಿಪಿಐ ಬಿ.ವೈ. ನ್ಯಾಮಗೌಡ
ಗದಗ, 24 ಮೇ (ಹಿ.ಸ.) : ಆ್ಯಂಕರ್ : ಯಾವುದೇ ಸಮುದಾಯವಾಗಿರಲಿ, ಹಬ್ಬಗಳ ಆಚರಣೆ ವೇಳೆ ಅನ್ಯ ಧರ್ಮಗಳ ಬಗ್ಗೆ ತಾತ್ಸಾರ ಮನೋಭಾವ ತೋರದೆ ಶಾಂತಿ, ಸಹನೆ ಹಾಗೂ ಪರಸ್ಪರ ಗೌರವದಿಂದ ನಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆ ಉಳಿಯಲು ಸಾಧ್ಯವಾಗುತ್ತದೆ ಎಂದು ಸಿಪಿಐ ಬಿ.ವೈ. ನ್ಯಾಮಗೌಡ ಹೇ
ಫೋಟೋ


ಗದಗ, 24 ಮೇ (ಹಿ.ಸ.) :

ಆ್ಯಂಕರ್ : ಯಾವುದೇ ಸಮುದಾಯವಾಗಿರಲಿ, ಹಬ್ಬಗಳ ಆಚರಣೆ ವೇಳೆ ಅನ್ಯ ಧರ್ಮಗಳ ಬಗ್ಗೆ ತಾತ್ಸಾರ ಮನೋಭಾವ ತೋರದೆ ಶಾಂತಿ, ಸಹನೆ ಹಾಗೂ ಪರಸ್ಪರ ಗೌರವದಿಂದ ನಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆ ಉಳಿಯಲು ಸಾಧ್ಯವಾಗುತ್ತದೆ ಎಂದು ಸಿಪಿಐ ಬಿ.ವೈ. ನ್ಯಾಮಗೌಡ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಲಕ್ಷೇಶ್ವರ ಪಟ್ಟಣವು ಎಲ್ಲ ಧರ್ಮದವರ ಸಹಬಾಳ್ವೆ, ಪರಸ್ಪರ ನಂಬಿಕೆ ಹಾಗೂ ಸೌಹಾರ್ದತೆಯ ಸಂಕೇತವಾಗಿದ್ದು, ಈ ಉತ್ತಮ ಪರಂಪರೆ ಮುಂದಿನ ದಿನಗಳಲ್ಲಿಯೂ ಮುಂದುವರಿಯಬೇಕು ಎಂದು ಆಶಿಸಿದರು.

ಹಬ್ಬಗಳು ಜನರನ್ನು ಒಗ್ಗೂಡಿಸುವ ಕಾರ್ಯ ಮಾಡಬೇಕು ಹೊರತು ಭಿನ್ನಾಭಿಪ್ರಾಯ ಸೃಷ್ಟಿಸುವಂತಾಗಬಾರದು. ಪ್ರತಿಯೊಬ್ಬರೂ ಕಾನೂನು ಹಾಗೂ ಶಾಂತಿ ಸುವ್ಯವಸ್ಥೆಗೆ ಬದ್ಧರಾಗಿ ನಡೆದುಕೊಂಡು ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಮಾತನಾಡಿದ ಹಿರಿಯ ಮುಖಂಡರಾದ ಪೂರ್ಣಾಜಿ ಖರಾಟೆ ಹಾಗೂ ಸಿ.ಆರ್. ಗೋಕಾವಿ, “ಬಕ್ರೀದ್ ಹಬ್ಬವು ತ್ಯಾಗ, ಬಲಿದಾನ ಹಾಗೂ ಮಾನವೀಯ ಮೌಲ್ಯಗಳ ಸಂಕೇತವಾಗಿದೆ. ಎಲ್ಲ ಧರ್ಮಗಳೂ ಒಳ್ಳೆಯ ವಿಚಾರಗಳನ್ನೇ ಸಾರುತ್ತವೆ. ಪ್ರತಿವರ್ಷದಂತೆ ಈ ಸಲವೂ ಲಕ್ಷೇಶ್ವರದಲ್ಲಿ ಎಲ್ಲಾ ಸಮಾಜದವರು ಪರಸ್ಪರ ಸಹೋದರತ್ವ, ಪ್ರೀತಿ ಹಾಗೂ ಸಹಕಾರದಿಂದ ಹಬ್ಬ ಆಚರಿಸಲಿದ್ದಾರೆ” ಎಂದು ಹೇಳಿದರು.

ಸಭೆಯಲ್ಲಿ ಹಬ್ಬದ ಆಚರಣೆ ಸಂಬಂಧ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಯಿತು. ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವುದು, ಅನ್ಯ ಧರ್ಮಗಳ ಬಗ್ಗೆ ಗೌರವಭಾವ ಉಳಿಸಿಕೊಳ್ಳುವುದು, ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡದಿರುವುದು ಹಾಗೂ ಸಹೋದರತ್ವ ಮತ್ತು ಸಹಬಾಳ್ವೆಯ ಸಂದೇಶವನ್ನು ಸಮಾಜದಲ್ಲಿ ಬಲಪಡಿಸುವ ಕುರಿತು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಪಿಎಸ್ಐ ಟಿ.ಕೆ. ರಾಥೋಡ, ದೂದನಾನಾ ದರ್ಗಾ ಕಮಿಟಿ ಅಧ್ಯಕ್ಷ ಸುಲೇಮಾನ್ ಕಣಕೆ, ಹುಸೇನಸಾಬ ಗೂಡೂರ, ಅಬ್ದುಲ್ಸಾಬ್ ಬೆಟಗೇರಿ, ಇಸ್ಮಾಯಿಲ್ ಆಡೂರ, ಸುರೇಶ ಹಟ್ಟಿ, ಅನಂತ ತೇಲಂಗ, ಎನ್.ಎಂ. ಬಾಡಗಿ, ದಾದಾಪೀರ ಕಾರಡಗಿ, ರಫೀಕ್ ಕಲಬುರ್ಗಿ, ಡಿ.ಬಿ. ನಾಗರಾಜ ಗಡದ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande