
ರಾಜೌರಿ, 24 ಮೇ (ಹಿ.ಸ.) :
ಆ್ಯಂಕರ್ : ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಪೀರ್ ಪಂಜಾಲ್ ಪರ್ವತ ಶ್ರೇಣಿಯ ಗಂಬೀರ್ ಮುಗ್ಲಾನ್ ಅರಣ್ಯ ಪ್ರದೇಶದಲ್ಲಿ ಭಾರಿ ಪ್ರಮಾಣದ ಉಗ್ರ ವಿರೋಧಿ ಕಾರ್ಯಾಚರಣೆ ಮುಂದುವರಿದಿದೆ. ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭಾನುವಾರ ಗುಂಡಿನ ಚಕಮಕಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆ (ಸಿಆರ್ಪಿಎಫ್) ಸಂಯುಕ್ತವಾಗಿ ನಡೆಸುತ್ತಿರುವ ಗುಪ್ತಚರ ಆಧಾರಿತ ಸುತ್ತುವರೆದು ಶೋಧ ಕಾರ್ಯಾಚರಣೆ ಎರಡನೇ ದಿನಕ್ಕೂ ಮುಂದುವರಿದಿದೆ.
ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಮಾಹಿತಿ ಪ್ರಕಾರ, ಶನಿವಾರದಿಂದಲೇ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಸುಮಾರು 11.30ರ ವೇಳೆಗೆ ಉಗ್ರರೊಂದಿಗೆ ಸಂಪರ್ಕ ಸಾಧನೆಯಾಗಿ ಗುಂಡಿನ ಚಕಮಕಿ ಆರಂಭವಾಯಿತು. ದಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರು ಅಥವಾ ಮೂವರು ಶಂಕಿತ ಉಗ್ರರು ಸಿಲುಕಿಕೊಂಡಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರು ತಪ್ಪಿಸಿಕೊಳ್ಳದಂತೆ ಸುತ್ತಮುತ್ತಲಿನ ಪರ್ವತ ಪ್ರದೇಶಗಳಲ್ಲಿ ಭದ್ರತಾ ವಲಯವನ್ನು ಬಿಗಿಗೊಳಿಸಲಾಗಿದ್ದು, ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ. ಗಂಬೀರ್ ಮುಗ್ಲಾನ್ ಅರಣ್ಯ ಪ್ರದೇಶವು ದುರ್ಗಮ ಬೆಟ್ಟಗುಡ್ಡಗಳು ಮತ್ತು ದಟ್ಟ ಕಾಡುಗಳಿಂದ ಕೂಡಿರುವುದರಿಂದ ಶೋಧ ಕಾರ್ಯಾಚರಣೆ ಭದ್ರತಾ ಪಡೆಗಳಿಗೆ ಸವಾಲಾಗಿದೆ.
ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ವಾಹನಗಳು ಮತ್ತು ಪಾದಚಾರಿಗಳ ಮೇಲ್ವಿಚಾರಣೆಯನ್ನು ಹೆಚ್ಚಿಸಲಾಗಿದೆ. ಸ್ಥಳೀಯ ನಿವಾಸಿ ಆಕಿಬ್ ಖಾನ್ ಮಾತನಾಡಿ, ಶಂಕಿತ ಉಗ್ರರ ಚಟುವಟಿಕೆ ಕುರಿತು ಮಾಹಿತಿ ದೊರೆತ ನಂತರದಿಂದಲೇ ಭದ್ರತಾ ಪಡೆಗಳು ಪ್ರದೇಶದಲ್ಲಿ ಬಿಗಿ ನಿಗಾವಹಿಸಿದ್ದವು ಎಂದು ತಿಳಿಸಿದ್ದಾರೆ.
ಮತ್ತೊಬ್ಬ ಸ್ಥಳೀಯ ನಿವಾಸಿ ಮೊಹಮ್ಮದ್ ಜಾವೇದ್, ದಟ್ಟ ಕಾಡು ಮತ್ತು ಕಠಿಣ ಪರ್ವತ ಪ್ರದೇಶಗಳಿಂದ ಕಾರ್ಯಾಚರಣೆ ತುಂಬಾ ಸಂಕೀರ್ಣವಾಗಿದೆ ಎಂದು ಹೇಳಿದ್ದಾರೆ. ಸ್ಥಳೀಯರು ಭದ್ರತಾ ಪಡೆಗಳಿಗೆ ಸಹಕಾರ ನೀಡುತ್ತಿದ್ದು, ಪರಿಸ್ಥಿತಿ ಶೀಘ್ರ ಸಾಮಾನ್ಯವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.