
ಹುಬ್ಬಳ್ಳಿ, 24 ಮೇ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದ ಕಾರ್ಮಿಕರೊಂದಿಗೆ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೇರೆ ನಗರಗಳಿಗೆ ತೆರಳಲು ಬಂದಿದ್ದ ನೂರಾರು ಕಾರ್ಮಿಕರನ್ನು ಬಲವಂತವಾಗಿ ಅಶುಚಿಯಾದ ನೆಲದ ಮೇಲೆ ಕೂರಿಸಿ, ನೈತಿಕ ಪೊಲೀಸರಂತೆ ವಿಚಾರಣೆ ನಡೆಸಿರುವುದು ಖಂಡನೀಯ ಘಟನೆ ಎಂದು ಆರೋಪಿಸಿದರು.
“ಒಬ್ಬ ಜನಪ್ರತಿನಿಧಿಯಾಗಿ ಬಡ ಕಾರ್ಮಿಕರೊಂದಿಗೆ ಈ ರೀತಿ ಅಸಭ್ಯ ಹಾಗೂ ಅಮಾನವೀಯವಾಗಿ ನಡೆದುಕೊಳ್ಳುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಇದು ಸಮಾಜ ತಲೆತಗ್ಗಿಸುವಂತಹ ನಾಚಿಕೆಗೇಡಿನ ಸಂಗತಿ,” ಎಂದು ಅವರು ಕಿಡಿಕಾರಿದರು.
ಕಾರ್ಮಿಕ ವರ್ಗದವರನ್ನು ಕೀಳಾಗಿ ಕಾಣುವ ರಾಜಕಾರಣವನ್ನು ಪ್ರಶ್ನಿಸಿದ ಅವರು, “ಹುಬ್ಬಳ್ಳಿಯ ರಸ್ತೆ ನಿರ್ಮಾಣ, ಕೈಗಾರಿಕೆಗಳ ಕೆಲಸ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿರುವವರು ಕಾರ್ಮಿಕರೇ. ಅವರ ಬೆವರಿನಿಂದಲೇ ದೇಶ ಕಟ್ಟಲಾಗುತ್ತಿದೆ. ಅವರ ಗೌರವವನ್ನು ಮಣ್ಣು ಮಾಡುವ ಅಧಿಕಾರ ಯಾರಿಗೂ ಇಲ್ಲ,” ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಮತ್ತು ಶಾಸಕ ಮಹೇಶ ಟೆಂಗಿನಕಾಯಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ರಾಜಕೀಯ ಲಾಭಕ್ಕಾಗಿ ಬೂಟಾಟಿಕೆಯ ರಾಜಕಾರಣ ಮಾಡುತ್ತಿರುವವರು ನಾಳೆ ಬಂದು ಈ ಕಠಿಣ ಪರಿಶ್ರಮದ ಕೆಲಸಗಳನ್ನು ಮಾಡುತ್ತಾರೆಯೇ?” ಎಂದು ಪ್ರಶ್ನಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.