
ಭಟ್ಕಳ, 24 ಮೇ (ಹಿ.ಸ.) :
ಆ್ಯಂಕರ್ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ತಟ್ಟೆಹಕ್ಕಲು ನದಿಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ನದಿಗೆ ಇಳಿದಿದ್ದ ಒಂದೇ ಕುಟುಂಬದ ಎಂಟು ಮಂದಿ ನೀರುಪಾಲಾಗಿದ್ದಾರೆ. ಘಟನೆಯಲ್ಲಿ ನಾಲ್ವರನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಮಾಹಿತಿಯ ಪ್ರಕಾರ, ಪಡುಶಿರಾಲಿ ಶಾರದಹೊಳೆ ನಿವಾಸಿಗಳಾದ ಒಟ್ಟು 14 ಮಂದಿ ಇಂದು ಬೆಳಗ್ಗೆ ಕಪ್ಪೆಚಿಪ್ಪು ತೆಗೆಯಲು ತಟ್ಟೆಹಕ್ಕಲು ನದಿಗೆ ತೆರಳಿದ್ದರು. ಎಲ್ಲರೂ ನದಿಯಲ್ಲಿ ಕಪ್ಪೆಚಿಪ್ಪು ಸಂಗ್ರಹಿಸುತ್ತಿದ್ದ ವೇಳೆ ಏಕಾಏಕಿ ನೀರಿನ ಹರಿವು ಹೆಚ್ಚಾಗಿ, ಭಾರಿ ಸುಳಿಗೆ ಸಿಲುಕಿ ಹಲವರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ದುರಂತದಲ್ಲಿ ಮೃತಪಟ್ಟವರಲ್ಲಿ ಒಬ್ಬ ಪುರುಷ ಹಾಗೂ ಏಳು ಮಹಿಳೆಯರು ಸೇರಿದ್ದಾರೆ. ಮೃತರನ್ನು ಲಕ್ಷ್ಮೀ ಮಾದೇವ ನಾಯ್ಕ್ (38), ಲಕ್ಷ್ಮೀ ಶಿವರಾಮ ನಾಯ್ಕ್ (39), ಮಾಲತಿ ಜಟ್ಟಪ್ಪ ನಾಯ್ಕ್ (38), ಮಾಸ್ತಮ್ಮ ಮಂಜುನಾಥ ನಾಯ್ಕ್ (43), ಲಕ್ಷ್ಮೀ ನಾಯ್ಕ್, ಲಕ್ಷ್ಮೀ ಅಣ್ಣಪ್ಪ ನಾಯ್ಕ್ (44), ಜ್ಯೋತಿ ನಾಯ್ಕ್ (37) ಹಾಗೂ ಉಮೇಶ್ ಮಂಜುನಾಥ ನಾಯ್ಕ್ (42) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ನಾಲ್ವರನ್ನು ಸ್ಥಳೀಯರು ಹಾಗೂ ಮೀನುಗಾರರ ಸಹಾಯದಿಂದ ರಕ್ಷಣೆ ಮಾಡಲಾಗಿದ್ದು, ಇನ್ನೂ ನಾಪತ್ತೆಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.
ಪತ್ತೆಯಾದ ಎಂಟು ಮೃತದೇಹಗಳನ್ನು ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಭಟ್ಕಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳೀಯ ಮೀನುಗಾರರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು ನದಿಯಲ್ಲಿ ಶೋಧ ಕಾರ್ಯ ಮುಂದುವರೆಸಿವೆ.
ಈ ದುರಂತದಿಂದ ಪಡುಶಿರಾಲಿ ಪ್ರದೇಶದಲ್ಲಿ ಶೋಕ ಮಡುಗಟ್ಟಿದ್ದು, ಒಂದೇ ಕುಟುಂಬದ ಹಲವರ ಸಾವಿನಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.