ಪೆಟ್ರೋಲ್, ಡೀಸೆಲ್ ಸೇರಿ ಇಂಧನ ವಿತರಕರ ತಪಾಸಣೆ ವ್ಯವಸ್ಥೆ ಬಲಪಡಿಸಿದ ಕೇಂದ್ರ
ಜಿಎಟಿಸಿ ವ್ಯಾಪ್ತಿಗೆ ಸಿಎನ್ಜಿ, ಎಲ್ಎನ್ಜಿ, ಹೈಡ್ರೋಜನ್ ವಿತರಕರು ಸೇರ್ಪಡೆ
ಪೆಟ್ರೋಲ್, ಡೀಸೆಲ್ ಸೇರಿ ಇಂಧನ ವಿತರಕರ ತಪಾಸಣೆ ವ್ಯವಸ್ಥೆ ಬಲಪಡಿಸಿದ ಕೇಂದ್ರ


ನವದೆಹಲಿ, 24 ಮೇ (ಹಿ.ಸ.) :

ಆ್ಯಂಕರ್ : ಪೆಟ್ರೋಲ್, ಡೀಸೆಲ್, ಸಿಎನ್ಜಿ, ಎಲ್ಪಿಜಿ, ಎಲ್ಎನ್ಜಿ ಹಾಗೂ ಹೈಡ್ರೋಜನ್ ವಿತರಕರ ತಪಾಸಣೆ ಮತ್ತು ಮರು ದೃಢೀಕರಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಂಧನ ವಿತರಣಾ ಯಂತ್ರಗಳನ್ನು ಸರ್ಕಾರ ಮಾನ್ಯತೆ ನೀಡಿದ ಪರೀಕ್ಷಾ ಕೇಂದ್ರಗಳ (ಜಿಎಟಿಸಿ) ವ್ಯಾಪ್ತಿಗೆ ಒಳಪಡಿಸುವ ಮೂಲಕ ಇಂಧನ ಅಳತೆ ವ್ಯವಸ್ಥೆಯಲ್ಲಿ ನಿಖರತೆ ಮತ್ತು ಪಾರದರ್ಶಕತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಧೀನದಲ್ಲಿರುವ ಗ್ರಾಹಕ ವ್ಯವಹಾರಗಳ ಇಲಾಖೆ, ‘ಲೀಗಲ್ ಮೆಟ್ರಾಲಜಿ (ಸರ್ಕಾರ ಮಾನ್ಯತೆ ಪಡೆದ ಪರೀಕ್ಷಾ ಕೇಂದ್ರ) ನಿಯಮಗಳು–2013’ಕ್ಕೆ ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ.

ತಿದ್ದುಪಡಿ ಅನ್ವಯ ಪೆಟ್ರೋಲ್-ಡೀಸೆಲ್, ಸಿಎನ್ಜಿ, ಎಲ್ಪಿಜಿ, ಎಲ್ಎನ್ಜಿ ಹಾಗೂ ಹೈಡ್ರೋಜನ್ ವಿತರಕರ ತಪಾಸಣೆ ಮತ್ತು ಮರು ದೃಢೀಕರಣವನ್ನು ಇದೀಗ ಜಿಎಟಿಸಿ ಮೂಲಕ ನಡೆಸಬಹುದಾಗಿದೆ. ಇದರಿಂದ ಜಿಎಟಿಸಿ ವ್ಯಾಪ್ತಿಯಲ್ಲಿ ಪರಿಶೀಲನೆಗೆ ಒಳಪಡುವ ಸಾಧನಗಳ ಒಟ್ಟು ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಸ್ವಚ್ಛ ಇಂಧನ ಬಳಕೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎನ್ಜಿ, ಎಲ್ಎನ್ಜಿ ಹಾಗೂ ಹೈಡ್ರೋಜನ್ ವಿತರಕರನ್ನು ಈ ವ್ಯವಸ್ಥೆಗೆ ಸೇರಿಸುವುದು ಅಗತ್ಯವಾಗಿತ್ತು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಕ್ರಮದಿಂದ ಇಂಧನ ಪೂರೈಕೆಯಲ್ಲಿ ನಿಖರತೆ ಖಚಿತವಾಗುವುದರ ಜೊತೆಗೆ ಗ್ರಾಹಕರಿಗೆ ಪಾರದರ್ಶಕ ಸೇವೆ ದೊರೆಯಲಿದೆ. ಜೊತೆಗೆ ಸ್ವಚ್ಛ ಇಂಧನ ಮೂಲಸೌಕರ್ಯಕ್ಕೂ ಉತ್ತೇಜನ ಸಿಗಲಿದೆ ಎಂದು ಸಚಿವಾಲಯ ಹೇಳಿದೆ.

ಸರ್ಕಾರ ಮಾನ್ಯತೆ ಪಡೆದ ಪರೀಕ್ಷಾ ಕೇಂದ್ರಗಳು ಅಳತೆ ಮತ್ತು ತೂಕ ಸಾಧನಗಳ ತಪಾಸಣೆ ಹಾಗೂ ಮರು ದೃಢೀಕರಣಕ್ಕೆ ಅಗತ್ಯ ತಾಂತ್ರಿಕ ಪರಿಣತಿ ಮತ್ತು ಮೂಲಸೌಕರ್ಯ ಹೊಂದಿರುವ ಸಂಸ್ಥೆಗಳಾಗಿವೆ. ಖಾಸಗಿ ಪ್ರಯೋಗಾಲಯಗಳು ಹಾಗೂ ಕೈಗಾರಿಕೆಗಳ ಭಾಗವಹಿಸುವಿಕೆಯಿಂದ ದೇಶದ ಪರಿಶೀಲನಾ ಸಾಮರ್ಥ್ಯ ಹೆಚ್ಚಲಿದ್ದು, ಸೇವೆಗಳ ಲಭ್ಯತೆ ಸುಲಭವಾಗಲಿದೆ ಎಂದು ತಿಳಿಸಲಾಗಿದೆ.

ತಿದ್ದುಪಡಿ ನಿಯಮಗಳ ಪ್ರಕಾರ ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ ಅಳತೆ ಮತ್ತು ತೂಕ ಸಾಧನಗಳನ್ನು ಜಿಎಟಿಸಿ ವ್ಯಾಪ್ತಿಗೆ ಸೇರಿಸುವ ಅಧಿಕಾರವೂ ನೀಡಲಾಗಿದೆ. ಜೊತೆಗೆ ಅನುಮೋದನೆ ಸಂಬಂಧಿತ ಪ್ರಕ್ರಿಯೆಗಳನ್ನು ವೇಗಗೊಳಿಸಲು ಜಂಟಿ ಕಾರ್ಯದರ್ಶಿ ಹಾಗೂ ಅದಕ್ಕಿಂತ ಮೇಲಿನ ಹುದ್ದೆಯ ಅಧಿಕಾರಿಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಡಿಸ್ಪೆನ್ಸರ್ಗಳ ಪರಿಶೀಲನಾ ಶುಲ್ಕವನ್ನು ಪ್ರತಿ ನೊಜಲ್ಗೆ 5 ಸಾವಿರ ರೂಪಾಯಿಗಳಾಗಿ ನಿಗದಿಪಡಿಸಲಾಗಿದೆ. ಸಿಎನ್ಜಿ, ಎಲ್ಪಿಜಿ, ಎಲ್ಎನ್ಜಿ ಮತ್ತು ಹೈಡ್ರೋಜನ್ ಡಿಸ್ಪೆನ್ಸರ್ಗಳಿಗೆ ಪ್ರತಿ ನೊಜಲ್ಗೆ 10 ಸಾವಿರ ರೂಪಾಯಿ ಶುಲ್ಕ ವಿಧಿಸಲಾಗಿದೆ.

ಈ ಸುಧಾರಣೆಗಳಿಂದ ರಾಜ್ಯಗಳ ಲೀಗಲ್ ಮೆಟ್ರಾಲಜಿ ಇಲಾಖೆಗಳು ಪರಿಶೀಲನೆ, ಜಾರಿಗೊಳಿಕೆ ಹಾಗೂ ಗ್ರಾಹಕರ ದೂರು ನಿವಾರಣೆಯ ಮೇಲೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ತಂತ್ರಜ್ಞಾನ ಆಧಾರಿತ ಆಡಳಿತ, ವ್ಯಾಪಾರ ಪಾರದರ್ಶಕತೆ ಮತ್ತು ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಈ ಕ್ರಮ ಮತ್ತಷ್ಟು ಬಲ ನೀಡಲಿದೆ ಎಂದು ಹೇಳಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande