
ಕೋಲಾರ, ಮೇ ೨೩ (ಹಿ.ಸ) :
ಆ್ಯಂಕರ್ : ಶಿಕ್ಷಣ ವ್ಯಾಪಾರ ಆಗಬಾರದು. ವಿದ್ಯಾ ದಾನ ಮಾಡುವ ಮೂಲಕ ಸಮಾಜದಲ್ಲಿ ಸುಜ್ಞಾನ ಭರಿತ ವ್ಯಕ್ತಿಗಳನ್ನು ನಿರ್ಮಾಣ ಮಾಡಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ನಗರದ ಮಿಲ್ಲತ್ ನಗರದಲ್ಲಿರುವ ಮಿಲ್ಲತ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾವಂತರನ್ನು ಪುರಸ್ಕರಿಸಿ ಮಾತನಾಡಿದ ಅವರು, ಯಾವುದೇ ವಿದ್ಯಾಸಂಸ್ಥೆಗಳು ಹಣಕ್ಕೆ ಪ್ರಾಮುಖ್ಯತೆ ನೀಡದೆ, ಗುಣಮಟ್ಟ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ ಇದ್ದು, ವಿವಿಗೆ ನಝೀರ್ ಅಹ್ಮದ್ ರವರ ಆಯ್ಕೆಯಂತೆ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಿದ ಮೇಲೆ, ಮುಸ್ಲಿಂ ಸಮುದಾಯದ ೮೫ಕ್ಕೂ ಹೆಚ್ಚು ಹೆಣ್ಣು ಮಕ್ಕಳು ವ್ಯಾಸಂಗ ಮಾಡುತ್ತಿರುವುದು ಖುಷಿಯ ಸಂಗತಿಯಾಗಿದೆ.
ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಮಾತನಾಡಿ, ವಿದ್ಯಾರ್ಥಿಗಳು ಓದುವುದಕ್ಕೆ ಗಮನ ನೀಡಿ, ಮೊಬೈಲ್ ಟಿವಿಯಿಂದ ಆದಷ್ಟು ದೂರ ಉಳಿದು, ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿ. ನೀವು ಓದಿದಷ್ಟು ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಶಿಕ್ಷಣ ಸಂಸ್ಥೆಗಳು ವಿದ್ಯೆ ನೀಡುವ ಜೊತೆಗೆ, ಪಠ್ಯೇತರ ಚಟುವಟಿಕೆಯಲ್ಲೂ ಭಾಗವಹಿಸುವಂತೆ ಪ್ರೋತ್ಸಾಹಿಸಿ, ಅಂಕ ಪಡೆಯುವುದೇ ದೊಡ್ಡದಲ್ಲ, ಜೀವನದಲ್ಲಿ ಒಳ್ಳೆ ಗುಣವನ್ನು ಬೆಳೆಸಿಕೊಳ್ಳಬೇಕು. ಹೆತ್ತ ತಂದೆ ತಾಯಿಗಳನ್ನು ಪ್ರೀತಿಸಿ, ವಯಸ್ಸಾದ ಕಾಲದಲ್ಲಿ ಅವರನ್ನು ಪೋಷಿಸಿ ಎಂದು ಹೇಳಿದರು.
ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಅರ್ಬಾಝ್ ಮನೆಮನೆಗೂ ಹೋಗಿ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಸೇರಿಸುವಂತೆ ಪ್ರೋತ್ಸಾಹಿಸಿ, ಕೆಲವು ಬಡ ಪೋಷಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ವಿದ್ಯಾಭಾಸವನ್ನು ಕಡಿತಗೊಳಿಸದೆ ಅವರು ಎಷ್ಟು ಓದುತ್ತಾರೋ ಓದಿಸಿ ಎಂದು ಪೋಷಕರಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ಎಂ ಎಲ್ ಸಿ ಅನಿಲ್ ಕುಮಾರ್, ನಗರಸಭಾ ಸದಸ್ಯ ಅಂಬರೀಶ್, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಕುಡಾ ಅಧ್ಯಕ್ಷ ಮಹಮದ್ ಹನೀಫ್, ಮಿಲ್ಲತ್ ವೆಲ್ಫೇರ್ ಟ್ರಸ್ಟ್ ಚೇರ್ ಮ್ಯಾನ್ ಮೀರ್ ನವೀದ್ ಅಹ್ಮದ್, ವೈಸ್ ಚೇರ್ಮನ್ ಸಫೀಕ್ಯೂ ಅಹಮದ್, ಅಧ್ಯಕ್ಷ ಇಫ್ತಿಕಾರ್ ಅಹಮದ್ ಶರೀಫ್, ಉಪನ್ಯಾಸಕರು ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.
ಕೋಲಾರ ಮಿಲ್ಲತ್ ವೆಲ್ಫೇರ್ ಟ್ರಸ್ಟ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾವಂತರನ್ನು ಶಾಸಕ ಕೊತ್ತೂರು ಮಂಜುನಾಥ್ ಪುರಸ್ಕರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್