ಇರಾನ್-ಅಮೆರಿಕ ಶಾಂತಿ ಮಾತುಕತೆ ಚುರುಕು
ತೆಹ್ರಾನ್/ವಾಷಿಂಗ್ಟನ್, 22 ಮೇ (ಹಿ.ಸ.): ಆ್ಯಂಕರ್ : ಪಶ್ಚಿಮ ಏಷ್ಯಾ ಹಾಗೂ ಹೋರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ಶಮನಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳಲ್ಲಿ ಪ್ರಗತಿಯ ಲಕ್ಷಣಗಳು ಗೋಚರಿಸಿವೆ
ಇರಾನ


ತೆಹ್ರಾನ್/ವಾಷಿಂಗ್ಟನ್, 22 ಮೇ (ಹಿ.ಸ.):

ಆ್ಯಂಕರ್ : ಪಶ್ಚಿಮ ಏಷ್ಯಾ ಹಾಗೂ ಹೋರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ಶಮನಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳಲ್ಲಿ ಪ್ರಗತಿಯ ಲಕ್ಷಣಗಳು ಗೋಚರಿಸಿವೆ.

ಮಧ್ಯವರ್ತಿ ರಾಷ್ಟ್ರಗಳು ಎರಡೂ ದೇಶಗಳನ್ನು ನೇರ ಸಂಘರ್ಷದಿಂದ ಹಿಂದೆ ಸರಿಸಲು ತೀವ್ರ ಮಟ್ಟದಲ್ಲಿ ಮಾತುಕತೆ ನಡೆಸುತ್ತಿವೆ. ತಾತ್ಕಾಲಿಕವಾಗಿಯಾದರೂ ಶಾಂತಿ ಒಪ್ಪಂದಕ್ಕೆ ರೂಪುರೇಷೆ ಸಿದ್ಧಪಡಿಸುವ ಯತ್ನಗಳು ನಡೆಯುತ್ತಿವೆ.

ಅಂತರರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ತೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ಹಲವು ದೇಶಗಳ ಮೂಲಕ ಪರೋಕ್ಷ ಸಂವಹನ ನಡೆಯುತ್ತಿದೆ.

ಉಭಯ ದೇಶಗಳು ಪರಸ್ಪರ ಸಂದೇಶಗಳು ಹಾಗೂ ಒಪ್ಪಂದದ ಕರಡುಗಳನ್ನು ವಿನಿಮಯ ಮಾಡಿಕೊಂಡು ಸಂಘರ್ಷ ಅಂತ್ಯಗೊಳಿಸಲು ರಾಜತಾಂತ್ರಿಕ ನೆಲೆ ನಿರ್ಮಿಸಲು ಪ್ರಯತ್ನಿಸುತ್ತಿವೆ.

ಹಿರಿಯ ಇರಾನಿ ಅಧಿಕಾರಿಯೊಬ್ಬರು “ಒಪ್ಪಂದದ ಸಾಧ್ಯತೆ ಹತ್ತಿರದಲ್ಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರೆ, ಮತ್ತೊಂದು ಮೂಲ “ಇನ್ನೂ ಅಂತಿಮ ಒಪ್ಪಂದ ಖಚಿತ ಎಂದು ಹೇಳಲು ಸಮಯ ಬಂದಿಲ್ಲ” ಎಂದು ತಿಳಿಸಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕ ರುಬಿಯೊ ಗುರುವಾರ ಪ್ರತಿಕ್ರಿಯಿಸಿ, “ಮಾತುಕತೆಯಲ್ಲಿ ಕೆಲವು ಉತ್ತಮ ಸೂಚನೆಗಳು ಕಾಣಿಸುತ್ತಿವೆ” ಎಂದಿದ್ದಾರೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ತನ್ನ ಯುರೇನಿಯಂ ಸಂಗ್ರಹವನ್ನು ಕಡಿಮೆ ಮಾಡದಿದ್ದರೆ “ತೀವ್ರ ಕ್ರಮ” ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇನ್ನೊಂದೆಡೆ ಅಮೆರಿಕ ಕಾಂಗ್ರೆಸ್ನ ಹೌಸ್ನಲ್ಲಿ ಟ್ರಂಪ್ ಅವರ ಯುದ್ಧಾಧಿಕಾರಗಳಿಗೆ ಮಿತಿ ವಿಧಿಸುವ ಉದ್ದೇಶದ ವಿಧೇಯಕದ ಮೇಲೆ ಮತದಾನ ನಡೆಸುವ ಡೆಮಾಕ್ರಾಟ್ ಪಕ್ಷದ ಪ್ರಯತ್ನ ಫಲ ನೀಡಲಿಲ್ಲ.

ಹೌಸ್ ರಿಪಬ್ಲಿಕನ್ ಸದಸ್ಯರು ಮತದಾನವನ್ನು ಮುಂದೂಡಿದ್ದು, ಇದರಿಂದ ಟ್ರಂಪ್ ಅವರ ಸೈನಿಕ ಕ್ರಮ ಕೈಗೊಳ್ಳುವ ಅಧಿಕಾರದ ಮೇಲೆ ತಕ್ಷಣದ ನಿಯಂತ್ರಣ ಜಾರಿಯಾಗುವ ಸಾಧ್ಯತೆ ತಪ್ಪಿದೆ. ಈಗ ಈ ವಿಚಾರದ ಮತದಾನವನ್ನು ಜೂನ್ ತಿಂಗಳವರೆಗೆ ಮುಂದೂಡಲಾಗಿದೆ.

ವಿಧೇಯಕ ಮಂಡಿಸಿದ್ದ ಡೆಮಾಕ್ರಾಟ್ ಸಂಸದ ಗ್ರೆಗೊರಿ ಮೀಕ್ಸ್, “ನಮ್ಮ ಬಳಿ ಅಗತ್ಯ ಸಂಖ್ಯಾಬಲ ಇತ್ತು. ಅದಕ್ಕಾಗಿಯೇ ರಿಪಬ್ಲಿಕನ್ಗಳು ರಾಜಕೀಯ ಆಟವಾಡುತ್ತಿದ್ದಾರೆ” ಎಂದು ಆರೋಪಿಸಿದರು.

ಹೌಸ್ ಡೆಮಾಕ್ರಾಟ್ ನಾಯಕರು ಸಂಯುಕ್ತ ಪ್ರಕಟಣೆಯಲ್ಲಿ, “ರಿಪಬ್ಲಿಕನ್ಗಳ ನಿಯಂತ್ರಣದಲ್ಲಿರುವ ಹೌಸ್, ಟ್ರಂಪ್ ಆಡಳಿತದ ಬೆಂಬಲ ಸಂಸ್ಥೆಯಂತೆ ವರ್ತಿಸುತ್ತಿದೆ” ಎಂದು ಟೀಕಿಸಿದರು.

ಅವರು ಮುಂದುವರಿದು, “ಯುದ್ಧಾಧಿಕಾರಗಳಿಗೆ ಸಂಬಂಧಿಸಿದ ಮಹತ್ವದ ಪ್ರಸ್ತಾವನೆಗೆ ಮತದಾನವನ್ನು ರದ್ದುಪಡಿಸುವ ಮೂಲಕ ರಿಪಬ್ಲಿಕನ್ಗಳು ಭೀತಿಪಟ್ಟಿದ್ದಾರೆ. ಈ ಕಾನೂನು ಉಭಯ ಪಕ್ಷಗಳ ಬೆಂಬಲದೊಂದಿಗೆ ಅಂಗೀಕಾರವಾಗುವ ಸಾಧ್ಯತೆ ಇತ್ತು. ಅದು ಮಧ್ಯಪ್ರಾಚ್ಯದ ಸಂಘರ್ಷವನ್ನು ಕೊನೆಗೊಳಿಸಲು ಅಧ್ಯಕ್ಷರನ್ನು ಒತ್ತಾಯಿಸಬಹುದಾಗಿತ್ತು” ಎಂದು ಹೇಳಿದ್ದಾರೆ.

ಹೌಸ್ ರಿಪಬ್ಲಿಕನ್ ನಾಯಕ ಸ್ಟೀವ್ ಸ್ಕಾಲಿಸ್ ಪ್ರತಿಕ್ರಿಯಿಸಿ, “ಕೆಲವರು ಗೈರಾಗಿದ್ದರಿಂದ ಅವರಿಗೆ ಮತದಾನದ ಅವಕಾಶ ಕಲ್ಪಿಸಲು ವೇಳಾಪಟ್ಟಿ ಬದಲಾಯಿಸಲಾಗಿದೆ” ಎಂದು ಹೇಳಿದರು. ಹೌಸ್ ಸ್ಪೀಕರ್ ಮೈಕ್ ಜಾನ್ಸನ್ ಈ ಕುರಿತು ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸದೆ ಹೊರಟರು.

ಅಮೆರಿಕಾ-ಇರಾನ್ ನಡುವಿನ ಈ ರಾಜತಾಂತ್ರಿಕ ಬೆಳವಣಿಗೆಗಳು ಪಶ್ಚಿಮ ಏಷ್ಯಾದ ಭದ್ರತಾ ಪರಿಸ್ಥಿತಿಗೆ ಮಹತ್ವದ ತಿರುವಾಗಬಹುದೆಂಬ ನಿರೀಕ್ಷೆ ಜಾಗತಿಕ ಮಟ್ಟದಲ್ಲಿ ವ್ಯಕ್ತವಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande