
ವಿಜಯಪುರ, 20 ಫೆಬ್ರವರಿ (ಹಿ.ಸ.):
ಆ್ಯಂಕರ್: ಸಮಾಜದಲ್ಲಿನ ಅಂಕು-ಡೊಂಕುಗಳನ್ನು ನೇರ-ನಿಷ್ಠುರ ಆದರ್ಶ ವಿಚಾರಗಳನ್ನು ಹಾಗೂ ಸತ್ಯನುಡಿಗಳನ್ನು ತ್ರಿಪದಿಗಳ ಮೂಲಕ ಸಾರಿ, ಸಮಾಜದ ಓರೆಕೋರೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿತೀಕ್ಷ್ಣವಾದ ತ್ರಿಪದಿಗಳ ಮೂಲಕ ಜನಮಾನಸದಲ್ಲಿ ಹಾಗೂ ಜನರಾಟುವ ಭಾಷೆಯಲ್ಲಿ ಅತ್ಯಂತ ಸರಳವಾಗಿ ತಿಳಿಸಿದ ದಾರ್ಶನಿಕ ಸಂತ ಕವಿ ಸರ್ವಜ್ಞ ಅವರು ಕರ್ನಾಟಕದ ಹೆಮ್ಮೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಔದ್ರಾಮ ಅವರು ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಮಾತನಾಡಿದ ಅವರು, ತ್ರಿಪದಿಗಳಲ್ಲಿ ತತ್ವಾದರ್ಶದ ಆಶಯದ ಹೊಳಹುಗಳನ್ನು ಕಾಣಬಹುದಾಗಿದ್ದು, ತ್ರಿಪದಿ ಸಾರವನ್ನು ಅರಿತುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ತನ್ನ ತ್ರಿಪದಿಗಳಲ್ಲಿ ಕೃಷಿ, ಕುಟುಂಬ,ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಮೂರೇ ಸಾಲಿನಲ್ಲಿ ಸಂದೇಶ ಕೊಡುವ ತ್ರಿಪದಿಗಳನ್ನು ರಚಿಸಿ ಸರಳವಾಗಿ ಮತ್ತು ವಿಶಾಲಾರ್ಥ ಹೊಂದಿರುವ ಹಾಗೂ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಜೀವನದ ತತ್ವಗಳ ಸಾರ ತ್ರಿಪದಿಗಳಲ್ಲಿ ಕಾಣಬಹುದಾಗಿದೆ.
ಅಲ್ಲಿ ಆತ್ಮಶುದ್ಧಿ, ನೈತಿಕ ಬದುಕಿನ ಮಹತ್ವವನ್ನು ಪ್ರತಿಪಾದಿಸಲಾಗಿದೆ. ಹೊರಗಿನ ಆರ್ಭಟಕ್ಕಿಂತ ಒಳಮನಸ್ಸಿನ ಶುದ್ಧತೆಯೇ ಮುಖ್ಯ ಎಂಬ ಸಂದೇಶವನ್ನು ಅವರು ಸಾರಿದ್ದಾರೆ ಎಂದು ಹೇಳಿದರು.ಮಾನವ ಜೀವನದಲ್ಲಿ ಪಾಪ-ಪುಣ್ಯಗಳನ್ನು ಸಮಬಲವಾಗಿ ಅರ್ಥಮಾಡಿಕೊಂಡು, ಜೀವನದ ಏರುಪೇರುಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ತತ್ವವನ್ನು ಸರ್ವಜ್ಞ ತಿಳಿಸಿದರು.
ಜೀವನ ಸುಗಮವಾಗಬೇಕಾದರೆ ಸ್ವಾರ್ಥ, ಅಹಂಕಾರ ಹಾಗೂ ದುರಾಸೆಗಳನ್ನು ತೊರೆದು ಸತ್ಯ, ದಯೆ ಮತ್ತು ಸದ್ವಿಚಾರದÀ ಮಾರ್ಗ ಕಾಣಬೇಕು ಎಂಬುದರ ಕುರಿತು ತಿಳಿನುಡಿಯೂ ನುಡಿದಿದ್ದಾರೆ ಎಂದು ಹೇಳಿದರು.ಎಲ್ಲರೂ ಸಮಾನರು ಎಂಬ ಸಮಾನತೆಯ ಸಂದೇಶವನ್ನು ಅವರು ಸಾರಿದರು. ಜಾತಿ-ಮತ-ಪಂಥ ಬೇಧವಿಲ್ಲದೆ ಮಾನವೀಯ ಮೌಲ್ಯಗಳನ್ನು ಹೊಂದಿ ಬದುಕಬೇಕು ಎಂಬ ಅವರ ತ್ರಿಪದಿ ಉಲ್ಲೇಖಗಳ ಸಾರ ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.ವ್ಯಕ್ತಿಯ ವರ್ತನೆ ಮಾತು ಮತ್ತು ಚಿಂತನೆಗಳಲ್ಲಿರುವ ಶುದ್ಧತೆಯೇ ಮಾನವ ಜೀವನದ ಸಾರ್ಥಕತೆ, ಇಂದಿನ ತಾಂತ್ರಿಕ ಯುಗದಲ್ಲಿ ಯುವಪೀಳಿಗೆ ಸರ್ವಜ್ಞನ ವಚನಗಳನ್ನು ಅರಿಯಬೇಕು. ಅಲ್ಲಿ ಅಭಿವ್ಯಕ್ತವಾಗುವ ಆರೋಗ್ಯಕರ ಜೀವನಶೈಲಿ, ಶ್ರಮದ ಮಹತ್ವ, ಸಮಯಪಾಲನೆ, ಮಾನವ ಸಂಬಂಧಗಳ ಮೌಲ್ಯ ಹಾಗೂ ಆತ್ಮಪರಿಶೀಲನೆ ಕುರಿತ ಅನೇಕ ಸಂದೇಶಗಳು ಅಡಕವಾಗಿವೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿಗಳಾದ ಚಂದ್ರಕಾಂತ ಕುಂಬಾರ ಮಾತನಾಡಿ,ಅವರು, ಸಂತ ಕವಿ ಸರ್ವಜ್ಞ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ ಅದನ್ನು ಎಲ್ಲರೂ ಸ್ಮರಣೆ ಮಾಡುವ ಮೂಲಕ ಗೌರವಿಸೋಣ ಎಂದು ಹೇಳಿದರು. ಸರ್ಕಾರವು ಮಹಾನ್ ವ್ಯಕ್ತಿಗಳ,ದಾರ್ಶನಿಕರ ಜಯಂತಿ ಆಚರಣೆಯ ಮೂಲಕ ಮಹನೀಯರ ತತ್ವಾದರ್ಶ ತಿಳಿದುಕೊಂಡು ಜೀವನದಸಾರ್ಥಕ್ಯ ಹೊಂದೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಂಗಪ್ಪ ಎಸ್. ಕುಂಬಾರ ಅವರು, ಸರ್ವಜ್ಞ ಅವರು ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಹೇಗೆ ಬಿತ್ತಿದರು ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿ, ಸರ್ವಜ್ಞನ ವಚನಗಳಲ್ಲಿ ವ್ಯಕ್ತಿತ್ವದ ವಿಕಾಸ, ನೈತಿಕ ಶಿಸ್ತು ಹಾಗೂ ಸಮಾಜಮುಖಿ ಜೀವನದ ತತ್ವಗಳು ಸ್ಪಷ್ಟವಾಗಿ ಕಾಣುತ್ತವೆ. ಆರೋಗ್ಯ, ಜೀವನಶೈಲಿ, ಮಿತಾಹಾರ, ಸದಾಚಾರ ಇತ್ಯಾದಿ ವಿಷಯಗಳನ್ನು ಅವರು ತ್ರಿಪದಿಗಳಲ್ಲಿ ಸುಲಭವಾಗಿ ಹೇಳಿರುವುದು ಅವರ ವೈಶಿಷ್ಟ್ಯವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಭೋವಿ, ಸೋಮಲಿಂಗ ಕುಂಬಾರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಮೆರವಣಿಗೆ:
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಿಂದ ಚಾಲನೆಗೊಂಡು ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮAದಿರದಲ್ಲಿ ವೇದಿಕೆ ಕಾರ್ಯಕ್ರಮದೊಂದಿಗೆ ಸಮಾವೇಶಗೊಂಡಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande