
ನವದೆಹಲಿ, 20 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಭಾರತೀಯ ಅಂಡರ್-17 ಪುರುಷರ ಫುಟ್‌ಬಾಲ್ ತಂಡವು ಮಾರ್ಚ್ 3 ಮತ್ತು 5, 2026 ರಂದು ಮ್ಯಾನ್ಮಾರ್‌ನ ಯಾಂಗೂನ್‌ನಲ್ಲಿ ಎರಡು ಅಂತಾರಾಷ್ಟ್ರೀಯ ಸ್ನೇಹಪರ ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳು 2026ರಲ್ಲಿ ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಎಎಫಸಿ ಯು-17 ಏಷ್ಯನ್ ಕಪ್ ಗಾಗಿ ತಂಡದ ಸಿದ್ಧತೆಯ ಭಾಗವಾಗಿವೆ.
“ಬ್ಲೂ ಕೋಲ್ಟ್ಸ್” ಎಂದು ಕರೆಯಲ್ಪಡುವ ಭಾರತೀಯ ತಂಡವು ಈ ವರ್ಷ ಈಗಾಗಲೇ ನಾಲ್ಕು ಅಂತಾರಾಷ್ಟ್ರೀಯ ಸ್ನೇಹಪರ ಪಂದ್ಯಗಳನ್ನು ಆಡಿದೆ. ಗೋವಾದಲ್ಲಿ ತಜಕಿಸ್ತಾನ್ ವಿರುದ್ಧ ಎರಡು ಪಂದ್ಯಗಳು ಹಾಗೂ ಅಂಟಲ್ಯದಲ್ಲಿ ಟರ್ಕಿ ವಿರುದ್ಧ ಎರಡು ಪಂದ್ಯಗಳನ್ನು ಆಡಲಾಗಿದೆ.
ಟರ್ಕಿ ಪ್ರವಾಸದಿಂದ ಹಿಂದಿರುಗಿದ ನಂತರ, ಮುಖ್ಯ ಕೋಚ್ ಬಿಬಿಯಾನೊ ಫೆರ್ನಾಂಡಿಸ್ ಮಾರ್ಗದರ್ಶನದಲ್ಲಿ ತಂಡವು ಗೋವಾದಲ್ಲಿ ತೀವ್ರ ತರಬೇತಿ ನಡೆಸುತ್ತಿದೆ. ಫೆಬ್ರವರಿ 28 ರಂದು ತಂಡವು ಯಾಂಗೂನ್‌ಗೆ ಪ್ರಯಾಣ ಬೆಳೆಸಲಿದೆ.
ಭಾರತದಂತೆಯೇ ಮ್ಯಾನ್ಮಾರ್ ಕೂಡ 2026ರ ಎಎಫ್‌ಸಿ ಅಂಡರ್-17 ಏಷ್ಯನ್ ಕಪ್‌ಗೆ ಅರ್ಹತೆ ಪಡೆದಿದೆ. ಅರ್ಹತಾ ಸುತ್ತಿನ ಗುಂಪು ಸಿ ನಲ್ಲಿ ಓಮನ್, ಸಿರಿಯಾ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳನ್ನು ಹಿಂದಿಕ್ಕಿ ಮ್ಯಾನ್ಮಾರ್ ಅಗ್ರಸ್ಥಾನ ಪಡೆದಿತ್ತು.
2026ರಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತವು ಗ್ರೂಪ್ ಡಿ ಯಲ್ಲಿ ಸ್ಥಾನ ಪಡೆದಿದ್ದು, ಮೇ 6ರಂದು ಆಸ್ಟ್ರೇಲಿಯಾ, ಮೇ 10ರಂದು ಉಜ್ಬೇಕಿಸ್ತಾನ್ ಮತ್ತು ಮೇ 13ರಂದು ಉತ್ತರ ಕೊರಿಯಾ ವಿರುದ್ಧ ಕಣಕ್ಕಿಳಿಯಲಿದೆ.
ಈ ಸ್ನೇಹಪರ ಪಂದ್ಯಗಳು ಟೂರ್ನಿಯ ಮುನ್ನ ತಂಡದ ಸಮನ್ವಯ, ತಂತ್ರ ಹಾಗೂ ಆಟಗಾರರ ಆತ್ಮವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa