
ನವದೆಹಲಿ, 20 ಫೆಬ್ರವರಿ (ಹಿ.ಸ.):
ಆ್ಯಂಕರ್:
ಭಾರತೀಯ ಕ್ರಿಕೆಟ್‌ನ ಭವಿಷ್ಯ ತಾರೆ ಎಂದೇ ಪರಿಗಣಿಸಲ್ಪಡುವ ಯುವ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ ಚಿಕ್ಕ ವಯಸ್ಸಿನಲ್ಲೇ ದೊಡ್ಡ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. 2022ರ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿ ಗಮನ ಸೆಳೆದ ಅವರು, ಬಳಿಕ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ ತಂಡದ ಪರ ಭರವಸೆಯ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ವಿಜಯ್ ಹಜಾರೆ ಟ್ರೋಫಿ ಹಾಗೂ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿ ತಮ್ಮ ಸ್ಥಿರತೆಯನ್ನು ತೋರಿಸಿದ್ದಾರೆ.
ಹಿಂದುಸ್ತಾನ್ ಸಮಾಚಾರ ಪ್ರತಿನಿಧಿ ಸುನಿಲ್ ದುಬೆ ಅವರೊಂದಿಗಿನ ವಿಶೇಷ ಸಂದರ್ಶನದ ಮುಖ್ಯಾಂಶಗಳು ಇಲ್ಲಿವೆ.
“ವೈಯಕ್ತಿಕ ಸಾಧನೆಗಿಂತ ತಂಡದ ಗೆಲುವು ಮುಖ್ಯ”
2024ರ ಐಪಿಎಲ್‌ನಲ್ಲಿ ನಿರ್ಭೀತ ಯುವಕನಾಗಿ ಕಾಣಿಸಿಕೊಂಡಿದ್ದ ರಘುವಂಶಿ, 2026ರ ವೇಳೆಗೆ ಕೆಕೆಆರ್ ತಂಡದ ವಿಶ್ವಾಸಾರ್ಹ ಆಧಾರಸ್ತಂಭನಾಗಿ ಬೆಳೆಯುವವರೆಗಿನ ತಮ್ಮ ಪ್ರಯಾಣವನ್ನು ನೆನಪಿಸಿಕೊಂಡರು.
“ವಿಭಿನ್ನ ಸಂದರ್ಭಗಳಲ್ಲಿ ಬ್ಯಾಟಿಂಗ್ ಮಾಡುವುದು ಹೇಗೆಂದು ಕಲಿತಿದ್ದೇನೆ. ಹಿರಿಯ ಆಟಗಾರರೊಂದಿಗೆ ಆಡುವುದು, ಎದುರಾಳಿ ತಂಡದ ತಂತ್ರಗಳನ್ನು ಗಮನಿಸುವುದು ಇವುಗಳೆಲ್ಲ ನನಗೆ ಅನುಭವ ನೀಡಿವೆ. ಪ್ರತಿಯೊಬ್ಬ ಆಟಗಾರನಿಗೂ ತನ್ನದೇ ಆದ ಶೈಲಿ ಇದೆ. ಆದರೆ ಅಂತಿಮವಾಗಿ ತಂಡ ಗೆಲ್ಲುವುದು ಅತ್ಯಂತ ಮುಖ್ಯ,” ಎಂದು ಅವರು ಹೇಳಿದರು.
ಅಭಿಷೇಕ್ ನಾಯರ್ ಮಾರ್ಗದರ್ಶನ: “ಆರಾಮ ವಲಯದ ಹೊರಗೆ ಒಯ್ಯಿತು”
ಕೆಕೆಆರ್ ತರಬೇತುದಾರ ಅಭಿಷೇಕ್ ನಾಯರ್ ಅವರ ಮಾರ್ಗದರ್ಶನ ತನ್ನ ಆಟದ ಮೇಲೆ ಮಹತ್ವದ ಪರಿಣಾಮ ಬೀರಿದೆ ಎಂದು ರಘುವಂಶಿ ಒಪ್ಪಿಕೊಂಡರು.
“ಒಂದು ಸಲಹೆ ಮಾತ್ರ ತಿರುವು ನೀಡಿಲ್ಲ. ಅವರು ಕ್ರಿಕೆಟ್ ಮಾತ್ರವಲ್ಲ, ಜೀವನದ ಪಾಠಗಳನ್ನೂ ಕಲಿಸಿದರು. ಕಠಿಣ ತರಬೇತಿ ಅವಧಿಗಳು ನನ್ನನ್ನು ಆರಾಮ ವಲಯದ ಹೊರಗೆ ಒಯ್ದವು. ಅವರು ಆಟವನ್ನು ಪ್ರೀತಿಸಲು ಕಲಿಸಿದರು,” ಎಂದು ಹೇಳಿದರು.
ರೋಹಿತ್ ಜೊತೆ ಡ್ರೆಸ್ಸಿಂಗ್ ರೂಮ್ ಅನುಭವ
ರಣಜಿ ಟ್ರೋಫಿಯಲ್ಲಿ ಭಾರತ ತಂಡದ ನಾಯಕ ರೋಹಿತ ಶರ್ಮಾ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಅನುಭವ ಹಂಚಿಕೊಂಡ ರಘುವಂಶಿ ಅವು ಮರೆಯಲಾಗದ ಕ್ಷಣವೆಂದರು.
“ಅವರ ತಯಾರಿ ಅಸಾಧಾರಣ. ಎದುರಾಳಿ ಯಾರು ಎನ್ನುವುದು ಪ್ರಮುಖವಾಗುವುದಿಲ್ಲ —ಅವರು ಯಾವತ್ತೂ ಸಂಪೂರ್ಣ ಸಿದ್ಧರಾಗಿರುತ್ತಾರೆ. ಬೌಲರ್‌ಗಳ ತಂತ್ರ, ಫೀಲ್ಡಿಂಗ್ ಸೆಟಪ್, ತಮ್ಮ ಬಲ—ಎಲ್ಲವನ್ನೂ ಅಧ್ಯಯನ ಮಾಡುತ್ತಾರೆ. ನಾವು ಕೂಡ ಅಷ್ಟೇ ಕಠಿಣವಾಗಿ ಶ್ರಮಿಸಬೇಕು,” ಎಂದರು.
ವಿಶ್ವದರ್ಜೆಯ ಬೌಲರ್‌ಗಳ ವಿರುದ್ಧ ಸಿದ್ಧತೆ
ಜಸ್ಪ್ರೀತ್ ಬುಮ್ರಾ ಮತ್ತು ರಾಶಿದ ಖಾನ್ ಅವರಂತಹ ವಿಶ್ವದರ್ಜೆಯ ಬೌಲರ್‌ಗಳನ್ನು ಎದುರಿಸುವುದು ದೊಡ್ಡ ಸವಾಲು ಎಂದು ಅವರು ಹೇಳಿದರು.
“ಬುಮ್ರಾ ವಿರುದ್ಧ ತಯಾರಿ ನಡೆಸುವುದು ಸುಲಭವಲ್ಲ. ಅವರು ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಉತ್ತಮ ಬೌಲರ್‌ಗಳನ್ನು ಎದುರಿಸಲು ಅಭ್ಯಾಸವೂ ಅಷ್ಟೇ ಕಠಿಣವಾಗಿರಬೇಕು,” ಎಂದು ಸ್ಪಷ್ಟಪಡಿಸಿದರು.
ಆದರ್ಶ ಆಟಗಾರರು
“ಚಿಕ್ಕವನಿದ್ದಾಗ ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ನನ್ನ ಆದರ್ಶ ವ್ಯಕ್ತಿಗಳು. ಈಗ ನನಗೆ ಶುಭಮನ್ ಗಿಲ್ ತುಂಬಾ ಇಷ್ಟ. ಅವರನ್ನು ನಾನು ಪ್ರೇರಣೆಯಾಗಿ ನೋಡುತ್ತೇನೆ,” ಎಂದು ಹೇಳಿದರು.
ಯುವ ಆಟಗಾರರಿಗೆ ಸಂದೇಶ
“ಸಾಧ್ಯವಾದಷ್ಟು ಕಠಿಣ ಅಭ್ಯಾಸ ಮಾಡಿ. ಮೈದಾನದಲ್ಲಿ ಹೆಚ್ಚು ಸಮಯ ಕಳೆಯಿರಿ. ಕ್ರಿಕೆಟ್ ಆಡಲು ಮಾತ್ರವಲ್ಲ, ಅದನ್ನು ‘ಜೀವಿಸಿ’. ಆಟವನ್ನು ಜೀವಿಸಿದಾಗ ಮಾತ್ರ ಯಶಸ್ಸು ಸಿಗುತ್ತದೆ,” ಎಂದು ಯುವಕರಿಗೆ ಸಲಹೆ ನೀಡಿದರು.
ಐಪಿಎಲ್ 2026 ಹಾಗೂ ಟಿ20 ವಿಶ್ವಕಪ್ ಬಗ್ಗೆ ವಿಶ್ವಾಸ
ಪ್ರಸ್ತುತ ಮುಂಬೈ ಅಂಡರ್-23 ತಂಡದ ಪರ ಆಡುತ್ತಿರುವ ರಘುವಂಶಿ, “ತಂಡವನ್ನು ಗೆಲ್ಲಿಸುವುದು ನನ್ನ ಏಕೈಕ ಗುರಿ. ಐಪಿಎಲ್ ಆಗಿರಲಿ, ಮುಂಬೈ ತಂಡವಾಗಿರಲಿ—ನನ್ನ ಗಮನ ಯಾವತ್ತೂ ತಂಡದ ಗೆಲುವಿನ ಮೇಲೆಯೇ ಇರುತ್ತದೆ,” ಎಂದರು.
ಟಿ20 ವಿಶ್ವಕಪ್ ಕುರಿತು ಅವರು, “ಟೀಮ್ ಇಂಡಿಯಾ ಟ್ರೋಫಿ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಯಾರು ‘ಪ್ಲೇಯರ್ ಆಫ್ ದ ಟೂರ್ನಮೆಂಟ್’ ಆಗುತ್ತಾರೆ ಎಂಬುದಕ್ಕಿಂತ ದೇಶಕ್ಕಾಗಿ ಟ್ರೋಫಿ ಗೆಲ್ಲುವುದು ಮುಖ್ಯ,” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa