
ಕೋಲಾರ, ಫೆಬ್ರವರಿ೨೦ (ಹಿ.ಸ) :
ಆ್ಯಂಕರ್ : ಕರ್ನಾಟಕದಲ್ಲಿ ಬಸವಣ್ಣನ ಬಳಿಕ ವಚನ ಕ್ರಾಂತಿ ನಿರ್ಮಿಸಿದ ದಾರ್ಶನಿಕ, ಯುಗಪುರುಷ ಸರ್ವಜ್ಞ. ಅವರು ಒಂದು ದಿನಕ್ಕೆ ಸರ್ವಜ್ಞ ಆದವರಲ್ಲ. ನಿತ್ಯ ವಿಷಯ ಕಲೆಹಾಕಿ ಒಂದು ದಿನ ಸರ್ವವನ್ನೂ ಬಲ್ಲವರಾದರು ಎಂದು ಉಪವಿಭಾಗಾಧಿಕಾರಿ ಜಂಬಗಿ ರೇಣುಕ ಪ್ರಸಾದ್ ದಿಲೀಪ್ ತಿಳಿಸಿದರು.
ಕೋಲಾರ ನಗರದ ಕನ್ನಡ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಜಿಲ್ಲಾ ಕುಂಬಾರರ ಸಂಘದ ಆಶ್ರಯದಲ್ಲಿ ನಡೆದ ಸಂತ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ವಜ್ಞ ಜನಸಾಮಾನ್ಯರಿಗೆ ಅರ್ಥವಾಗುವ ರೀತಿ ವಚನ ರಚಿಸಿದ್ದಾರೆ. ಒಂದು ಜಾತಿ, ಸಮುದಾಯಕ್ಕೆ ಅವರು ಸೀಮಿತವಾದವರಲ್ಲ. ಅವರ ವಚನ, ನೀತಿ, ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಕುಂಬಾರ ಸಮುದಾಯದವರು ತಮ್ಮ ಬೇಡಿಕೆ, ಸಮಸ್ಯೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ಈಡೇರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಯಾವುದೇ ಸಮುದಾಯ ಸೀಮಿತ ಉದ್ದೇಶದ ರಾಜಕೀಯ ಬಿಡಬೇಕು, ವೈಮನಸ್ಯ ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು. ವಿದ್ಯಾಭ್ಯಾಸಕ್ಕೆ ಆದ್ಯತೆ ಕೊಡಬೇಕು ಎಂದು ಕಿವಿಮಾತು ಹೇಳಿದರು.
ಸಂತ ಸರ್ವಜ್ಞ ಜಯಂತ್ಯುತ್ಸವ ಆಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಸಮುದಾಯದ ಮುಖಂಡ ಕಲ್ಲಂಡೂರು ಡಾ.ಕೆ.ನಾಗರಾಜ್ ಮಾತನಾಡಿ, ಕುಂಬಾರರ ಸಮಾಜ ಒಂದುಕಡೆ ಸೇರಲು ಅತ್ಯುತ್ತಮ ವೇದಿಕೆ ಸರ್ವಜ್ಞ ಜಯಂತಿ. ದುರದೃಷ್ಟಕರ ಸಂಗತಿ ಎಂದರೆ ನಮ್ಮದು ಸಣ್ಣ ಸಮಾಜವೆಂದು ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಬರುವುದಿಲ್ಲ. ಸಮುದಾಯದ ಮತಗಳು ಕಡಿಮೆ ಇರುವುದರಿಂದ ಪ್ರಯೋಜನವಿಲ್ಲ ಎಂಬುದು ಅವರ ಭಾವನೆ ಆಗಿರಬಹುದು ಎಂದು ಬೇಸರ ವ್ಯಕ್ತಪಡಿಸಿದರು.
ಹೀಗಾದರೆ ನಾವು ನಮ್ಮ ಸಮಾಜದ ಕಷ್ಟಸುಖಗಳನ್ನು ಯಾರ ಬಳಿ ಹೇಳಿಕೊಳ್ಳುವುದು ಎಂದು ಪ್ರಶ್ನಿಸಿದರು.
ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ನಮ್ಮ ಸಮುದಾಯ ಬಹಳ ಹಿಂದೆ ಉಳಿದಿದೆ. ಹೀಗಾಗಿ, ಸರ್ಕಾರವು ಕುಂಬಾರರ ನಿಗಮ ಮಂಡಳಿ ಮಾಡಿ ಕನಿಷ್ಠ ೧೦೦ ಕೋಟಿ ಅನುದಾನ ಕೊಡಬೇಕು. ಈ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ಕುಂಬಾರಿಕೆ ವೃತ್ತಿ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ವಿದ್ಯಾರ್ಥಿಗಳಿಗೆ ಹಾಗೂ ದುಡಿಯುವ ಮಹಿಳೆಯರಿಗೆ ಹಾಸ್ಟೆಲ್ ಅಗತ್ಯವಿದೆ. ಹಾಸ್ಟೆಲ್ ನಿರ್ಮಿಸಬೇಕು. ಕುಂಬಾರಿಕೆಗೆ ಕೆರೆ ಮೀಸಲಿಡಬೇಕು. ಈ ಬಗ್ಗೆ ಪಿಡಿಒಗಳಿಗೆ ಮೇಲಧಿಕಾರಿಗಳು ಸೂಚನೆ ಕೊಡಬೇಕು ಎಂದು ಅವರು ಬೇಡಿಕೆ ಇಟ್ಟರು.
ಪ್ರಬಲ ಸಮಾಜದವರು ಕೇಳಿದರೆ ಬೇಗ ಮಾಡಿಕೊಡುತ್ತಾರೆ. ಆದರೆ ನಮ್ಮ ಧ್ವನಿ ಕೇಳುತ್ತಿಲ್ಲ. ನಮ್ಮ ಸಮಾಜದವರು ಸೌಮ್ಯ ಹಾಗೂ ಸಜ್ಜನರು, ಏನೂ ಮಾಡಲ್ಲ ಎಂಬ ಧೋರಣೆಯನ್ನು ಜನಪ್ರತಿನಿಧಿಗಳು ಹೊಂದಿದ್ದಾರೆ ಎಂದು ಹೇಳಿದರು.
ನಮ್ಮ ಸಮುದಾಯ ಸದ್ಯ ೨ಎ ಪ್ರವರ್ಗದಲ್ಲಿ ಇದೆ. ಇತರರ ಜಾತಿಗಳೂ ಈ ಕ್ಯಾಟಗರಿಯಲ್ಲಿದ್ದು, ನಮ್ಮ ಜಾತಿಯವರಿಗೆ ಅವಕಾಶ ಕಡಿಮೆ ಆಗಿದೆ. ಹೀಗಾಗಿ, ೨ ಎನಲ್ಲಿ ನಮಗೆ ಒಳ ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿದರು.
ನಮ್ಮ ಸಂಘದಿಂದ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡಲಾಗುತ್ತಿದೆ. ಈಗಾಗಲೇ ೮ ಲಕ್ಷ ನೀಡಿದ್ದೇವೆ. ಸಂಘ ಮುಂದೆಯೂ ವಿದ್ಯಾರ್ಥಿಗಳ ಜೊತೆ ಇರಲಿದೆ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಪೋಷಕರನ್ನು ಕೋರಿದರು. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ದೊಡ್ಡ ಸಮಾವೇಶ ಮಾಡುತ್ತೇನೆ. ಆ ಸಮಾವೇಶಕ್ಕೆ ಜನಪ್ರತಿನಿಧಿಗಳನ್ನು ಕರೆತರುತ್ತೇನೆ. ಇಲ್ಲದಿದ್ದರೆ ನನ್ನ ಹುದ್ದೆ ಗೆ ರಾಜೀನಾಮೆ ನೀಡುತ್ತೇನೆ ಎಂದರು.
ಸರ್ವಜ್ಞ ಉದ್ಯಾನದಲ್ಲಿ ಸರ್ವಜ್ಞನ ಮೂರ್ತಿ ಇದೆ. ಈಚೆಗೆ ಮರಬಿದ್ದು ಚಾವಣಿ ಮುರಿದು ಹೋಗಿದೆ. ಸುತ್ತ ಸ್ವಚ್ಛತೆಯೂ ಇಲ್ಲ. ಈ ಸಂಬಂಧ ಕ್ರಮ ವಹಿಸಿ ಎಂದು ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮಿ, ಸರ್ವಜ್ಞ ಉದ್ಯಾನದಲ್ಲಿ ಸರ್ವಜ್ಞನ ಮೂರ್ತಿ ಹಿತಕಾಯಲು ಬದ್ಧ. ನಗರಸಭೆಯವರಿಗೆ ಮಾಹಿತಿ ನೀಡಿದ್ದು, ಚಾವಣಿ ಸಿದ್ಧಪಡಿಸಿಕೊಡಲಾಗುವುದು ಎಂದರು.
ಜಿಲ್ಲಾ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಹಾಗೂ ಸಮಿತಿ ಅಧ್ಯಕ್ಷ ತಬಲ ನಾರಾಯಣಪ್ಪ ಮಾತನಾಡಿ, ಜಯಂತಿ ಕಾರ್ಯಕ್ರಮಕ್ಕೆ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕುಂಬಾರರ ಸಂಘದ ಕಾರ್ಯದರ್ಶಿ ರೆಡ್ಡಪ್ಪ ಮಾತನಾಡಿ, ಸರ್ವಜ್ಞ ಎಂದರೆ ಎಲ್ಲಾ ವಿಷಯ ತಿಳಿದವರು. ಅನ್ಮದೇವರ ಮುಂದೆ ಇನ್ನು ದೇವರು ಉಂಟೆ ಎಂಬ ವಚನ ನೆನಪಿಸಿದರು.
ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಿಷಯವಿಲ್ಲ. ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ್ದು, ಅವರು ಮತ್ತೆ ಹುಟ್ಟಿ ಬರಬೇಕು ಎಂದರು.
ಕುಂಬಕಲಾ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಕುಂಬಾರ ಸಮುದಾಯದ ೧೬ ಸಾವಿರ ಜನಸಂಖ್ಯೆ ಇದೆ. ಸರ್ವಜ್ಞ ಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದರೆ ಶಾಸಕರು ಹಾಗೂ ಜನಪ್ರತಿನಿಧಿಗಳು ಬರುತ್ತಾರೆ ಎಂದು ತಿಳಿಸಿದರು.
ಉಪನ್ಯಾಸಕಿ ಎಂ.ವರಲಕ್ಷ್ಮಿ ಉಪನ್ಯಾಸ ನೀಡಿದರು. ತಮಿಳುನಾಡಿನಲ್ಲಿ ತಿರುವಳ್ಳವರ್, ಆಂಧ್ರ ಪ್ರದೇಶದಲ್ಲಿ ಯೋಗಿ ವೇಮನ ಇದ್ದಂತೆ ಕರ್ನಾಟಕದಲ್ಲಿ ಸರ್ವಜ್ಞ ಹೆಸರು ಮಾಡಿದ್ದಾರೆ. ಸರ್ವಜ್ಞ ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯೋಣ, ಸಮಾನತೆಯನ್ನು ಎತ್ತಿಹಿಡಿಯೋಣ ಎಂದು ಹೇಳಿದರು.
ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಕಲ್ಲಂಡೂರು ಶ್ರೀನಿವಾಸಪ್ಪ, ಕಾರ್ಯದರ್ಶಿ ರೆಡ್ಡಪ್ಪ, ನಾಗೇಶ್, ಈರಣ್ಣ, ಸರೋಜಾ ಶ್ರೀನಿವಾಸ್, ರಮೇಶ್, ಬಾಲಕೃಷ್ಣ, ನಂದೀಶ್, ಶಿವಪ್ರಸಾದ್, ರಾಜಣ್ಣ, ಕಲ್ಲಂಡೂರು ನಾರಾಯಣಸ್ವಾಮಿ, ನಾಗೇಶ್ ಇದ್ದರು. ವಿಜಯಲಕ್ಷ್ಮಿ ಸ್ವಾಗತಿಸಿದರು, ಮಂಜುಳಾ ಕೊಂಡರಾಜನಹಳ್ಳಿ ನಿರೂಪಿಸಿದರು. ಡಾ.ಕೆ.ನಾಗರಾಜ್ ವಂದಿಸಿದರು.
ಚಿತ್ರ ; ಕೋಲಾರ ನಗರದ ಕನ್ನಡ ಭವನದಲ್ಲಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ಜಂಬಗಿ ರೇಣುಕ ಪ್ರಸಾದ್ ದಿಲೀಪ್ ಉದ್ಘಾಟಿಸಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್