ಶಿವಾಜಿ ಜಯಂತಿ: ಬಾಗಲಕೋಟೆಯಲ್ಲಿ ಮತ್ತೆ ಕಲ್ಲು ತೂರಾಟ,ಲಾಠಿ ಚಾರ್ಜ ; ಆರೋಪಿಗಳ ಬಂಧನ
ಬಾಗಲಕೋಟೆ, 20 ಫೆಬ್ರವರಿ (ಹಿ.ಸ.): ಆ್ಯಂಕರ್: ಕರ್ನಾಟಕದ ಬಾಗಲಕೋಟೆ ನಗರದಲ್ಲಿ ಕಳೆದ ರಾತ್ರಿ ಶಿವಾಜಿ ಜಯಂತಿ ಭಾವಚಿತ್ರ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ನಂತರ ಬಾಗಲಕೋಟೆ ನಗರದಲ್ಲಿ ಉದ್ವಿಗ್ನತೆ ಕಡಿಮೆಯಾಗುತ್ತಿರುವಾಗಲೇ ಮತ್ತೊಮ್ಮೆ ಕಿಲ್ಲಾ ಓಣಿ ಪ್ರದೇಶದಲ್ಲಿ ಕಲ್ಲು ಎಸೆತ ಘಟನೆ ಸಂಭವಿಸಿದ
Stone pelting


ಬಾಗಲಕೋಟೆ, 20 ಫೆಬ್ರವರಿ (ಹಿ.ಸ.):

ಆ್ಯಂಕರ್:

ಕರ್ನಾಟಕದ ಬಾಗಲಕೋಟೆ ನಗರದಲ್ಲಿ ಕಳೆದ ರಾತ್ರಿ ಶಿವಾಜಿ ಜಯಂತಿ ಭಾವಚಿತ್ರ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ ನಂತರ ಬಾಗಲಕೋಟೆ ನಗರದಲ್ಲಿ ಉದ್ವಿಗ್ನತೆ ಕಡಿಮೆಯಾಗುತ್ತಿರುವಾಗಲೇ ಮತ್ತೊಮ್ಮೆ ಕಿಲ್ಲಾ ಓಣಿ ಪ್ರದೇಶದಲ್ಲಿ ಕಲ್ಲು ಎಸೆತ ಘಟನೆ ಸಂಭವಿಸಿದೆ.

ಕಳೆದ ರಾತ್ರಿ ಘಟನೆ ಹಿನ್ನೆಲೆಯಲ್ಲಿ ಇಂದು ಹಿಂದು ಮುಖಂಡರ ಸಭೆ ನಡೆದ ನಂತರ ಕಾರ್ಯಕರ್ತರು ಅಂಗಡಿ-ಮುಂಗಟ್ಟು ಬಂದ್ ಮಾಡಿಸಲು ಹೊರಟಾಗ ಕಲ್ಲು ತೂರಾಟ ನಡೆದಿದೆ. ಪೊಲೀಸರು ಉದ್ರಿಕ್ತರನ್ನು ಚದುರಿಸಲು ಲಾಠಿಚಾರ್ಜ್ ನಡೆಸಿದ್ದಾರೆ.

ಹಿಂದು ಸಂಘಟನೆಗಳ ಮುಖಂಡರು ಸಭೆ ನಡೆಸಿ ನಗರದಲ್ಲಿ ಬಂದ್ ಮಾಡಿಸಲು ಯೋಜನೆ ಹಾಕಿಕೊಂಡಿದ್ದರು. ಸಭೆ ಮುಗಿದ ನಂತರ ಕಾರ್ಯಕರ್ತರು ತರಕಾರಿ ಮಾರುಕಟ್ಟೆಯತ್ತ ತೆರಳಿದ್ದರು. ಈ ವೇಳೆ ಕಿಲ್ಲಾ ಓಣಿ ಬಳಿ ಮತ್ತೊಮ್ಮೆ ಕಲ್ಲು ತೂರಾಟ ನಡೆದಿದೆ. ಕಲ್ಲುಗಳು ತರಕಾರಿ ಮಾರಾಟಕ್ಕೆ ಬಂದವರ ಬಳಿ ಬಿದ್ದಿವೆ. ಘಟನೆಯಿಂದ ಆಕ್ರೋಶಗೊಂಡು ಹಿಂದು ಸಂಘಟನೆಯ ಕಾರ್ಯಕರ್ತರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ.

ಪೊಲೀಸರು ಉದ್ರಿಕ್ತರನ್ನು ತಡೆಯಲು ರಸ್ತೆಯಲ್ಲಿ ಲಾಠಿ ಬೀಸಿದ್ದಾರೆ. ಲಾಠಿಚಾರ್ಜ್‌ನಿಂದ ಹಲವರು ಚದುರಿ ಹೋಗಿದ್ದು, ಸ್ಥಳದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು ಕೂಡಲೇ ಪೊಲೀಸರು ಹೆಚ್ಚುವರಿ ಪಡೆ ನಿಯೋಜಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಘಟನೆಯ ಹಿನ್ನೆಲೆ :

ಕಳೆದ ರಾತ್ರಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಪಂಕಾ ಮಸೀದಿ ಬಳಿ ಕಲ್ಲು-ಚಪ್ಪಲಿ ತೂರಾಟ ನಡೆದಿತ್ತು. ಆ ಘಟನೆಗೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದ್ದು, ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.

ಘಟನೆ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟ ಘಟನೆಯು ಸಮಾಜದ ಶಾಂತಿ, ಸೌಹಾರ್ದತೆಗೆ ಮಾರಕ. ಇದನ್ನು ನಾನು ಮತ್ತು ನಮ್ಮ ಸರ್ಕಾರ ಬಲವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಘಟನೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಚರ್ಚಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ, ದುಷ್ಕೃತ್ಯ ಎಸಗಿದ ಪುಂಡರಿಗೆ ಕಾನೂನಿನ ಮೂಲಕ ತಕ್ಕ ಉತ್ತರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದು, ಘಟನೆಗೆ ಕಾರಣರಾದ ಪ್ರತಿಯೊಬ್ಬರಿಗೂ ಶಿಕ್ಷೆ ನಿಶ್ಚಿತ ಎಂದಿದ್ದಾರೆ.

ನಾಡಿನ ಜನರಿಗೆ ಭಯಮುಕ್ತ ನೆಮ್ಮದಿಯ ಬದುಕು ನೀಡುವುದು ನಮ್ಮ‌ ಮೊದಲ ಆದ್ಯತೆ. ಜನರ ಶಾಂತಿ - ನೆಮ್ಮದಿಗೆ ಭಂಗ ತರುವ ಯಾವುದೇ ವ್ಯಕ್ತಿ - ಶಕ್ತಿಗಳನ್ನು ನಾವು ಸಹಿಸುವುದಿಲ್ಲ, ಸಾರ್ವಜನಿಕರು ಯಾವುದೇ ಪ್ರಚೋದನೆಗಳಿಗೂ ಕಿವಿಗೊಡದೆ, ಸಂಯಮದಿಂದ ವರ್ತಿಸಿ. ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande