
ನವದೆಹಲಿ, 20 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯ ಅಂತಿಮ ದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೃತಕ ಬುದ್ಧಿಮತ್ತೆ ಮತ್ತು ಆಳವಾದ ತಂತ್ರಜ್ಞಾನ ವಲಯದ ಪ್ರಮುಖ ನವೋದ್ಯಮಗಳ ಸಿಇಒಗಳೊಂದಿಗೆ ಮಹತ್ವದ ಸಂವಾದ ನಡೆಸಿದರು.
ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ವಿವಿಧ ಸ್ಟಾರ್ಟ್‌ಅಪ್ ಸಂಸ್ಥೆಗಳ ತಾಂತ್ರಿಕ ಪರಿಹಾರಗಳು, ಸಂಶೋಧನಾ ಉಪಕ್ರಮಗಳು ಮತ್ತು ಉತ್ಪನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಆರೋಗ್ಯ ರಕ್ಷಣೆ, ಸೈಬರ್ ಭದ್ರತೆ, ಬಾಹ್ಯಾಕಾಶ ಸೇರಿದಂತೆ ಹಲವು ಉದಯೋನ್ಮುಖ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ನವೋದ್ಯಮಗಳು ತಮ್ಮ ಎಐ ಆಧಾರಿತ ಪರಿಹಾರಗಳು ಹಾಗೂ ಅವುಗಳ ಸಾಮಾಜಿಕ-ಆರ್ಥಿಕ ಪ್ರಭಾವವನ್ನು ಹಂಚಿಕೊಂಡವು.
ಸಭೆಯಲ್ಲಿ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಆಳವಾದ ಕಲಿಕೆಯ ತಂತ್ರಜ್ಞಾನಗಳು ಭಾರತದ ಡಿಜಿಟಲ್ ಆರ್ಥಿಕತೆಯನ್ನು ಹೇಗೆ ವೇಗಗೊಳಿಸಬಹುದು ಎಂಬುದರ ಕುರಿತು ವಿಶೇಷ ಚರ್ಚೆ ನಡೆಯಿತು. ಸ್ಥಳೀಯ ಅಗತ್ಯಗಳಿಗೆ ಹೊಂದುವಂತೆ ತಂತ್ರಜ್ಞಾನ ಅಭಿವೃದ್ಧಿ, ನಾವೀನ್ಯತೆ ಮತ್ತು ಸಂಶೋಧನೆಗೆ ಒತ್ತು ನೀಡುವಂತೆ ಪ್ರಧಾನಿ ಸೂಚಿಸಿದರು. ಭಾರತದ ಯುವಜನರು ಮತ್ತು ಉದ್ಯಮಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೊಂದಿದ್ದು, ತಾಂತ್ರಿಕ ವಲಯದಲ್ಲಿ ದೇಶವನ್ನು ಹೊಸ ಎತ್ತರಗಳಿಗೆ ಕೊಂಡೊಯ್ಯುವ ಶಕ್ತಿ ಅವರಲ್ಲಿದೆ ಎಂದು ಅವರು ಹೇಳಿದರು.
ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡುವುದು, ನವೋದ್ಯಮಗಳಿಗೆ ಉತ್ತೇಜನ ನೀಡುವುದು ಹಾಗೂ ಡಿಜಿಟಲ್ ಪರಿಹಾರಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ತಿಳಿಸಿದರು.
ಫೆಬ್ರವರಿ 16ರಂದು ಆರಂಭವಾದ ಐದು ದಿನಗಳ ಈ ಜಾಗತಿಕ ಸಮ್ಮೇಳನ ಶುಕ್ರವಾರ ಮುಕ್ತಾಯಗೊಂಡಿತು. ವಿಶ್ವದಾದ್ಯಂತದ ತಂತ್ರಜ್ಞಾನ ತಜ್ಞರು ಮತ್ತು ಉದ್ಯಮ ಮುಖಂಡರು ಇದರಲ್ಲಿ ಭಾಗವಹಿಸಿದ್ದರು. ಶೃಂಗಸಭೆಯ ಸಂದರ್ಭದಲ್ಲಿ ಸುಂದರ್ ಪಿಚೈ, ಸ್ಯಾಮ್ ಆಲ್ಟ್‌ಮನ್ ಮತ್ತು ಡೇರಿಯೊ ಅಮೋಡೆ ಸೇರಿದಂತೆ ಜಾಗತಿಕ ತಂತ್ರಜ್ಞಾನ ಕಂಪನಿಗಳ ಮುಖ್ಯಸ್ಥರು ಎಐಯ ಭವಿಷ್ಯ, ಅದರ ಉಪಯೋಗಗಳು ಮತ್ತು ಸವಾಲುಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಭಾರತದ ತಾಂತ್ರಿಕ ಸಾಮರ್ಥ್ಯಗಳು ಮತ್ತು ಎಐ ಕ್ಷೇತ್ರದಲ್ಲಿ ದೇಶದ ಹೆಚ್ಚುತ್ತಿರುವ ಪಾತ್ರವನ್ನು ಎತ್ತಿ ತೋರಿಸುವ ಹಲವು ಅಧಿವೇಶನಗಳಲ್ಲಿ ಪ್ರಧಾನಮಂತ್ರಿ ಭಾಗವಹಿಸಿದ್ದು, “ಡಿಜಿಟಲ್ ಭಾರತ”ದ ದೃಷ್ಠಿಕೋಣವನ್ನು ಮತ್ತಷ್ಟು ಬಲಪಡಿಸುವ ಸಂದೇಶವನ್ನು ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa