ಲಕ್ಕುಂಡಿಯಲ್ಲಿ ನಕಲಿ ನಿಧಿ ವಂಚನೆ ಪ್ರಕರಣ ಭೇದಿಸಿದ ಪೋಲಿಸರು
ಗದಗ, 20 ಫೆಬ್ರವರಿ (ಹಿ.ಸ.) ಆ್ಯಂಕರ್: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಚಿನ್ನದ ನಿಧಿ ಸಿಕ್ಕ ಸುದ್ದಿ ದೇಶವ್ಯಾಪಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, 2022ರ ನಕಲಿ ನಿಧಿ ವಂಚನೆ ಪ್ರಕರಣವನ್ನು ಗದಗ ಪೊಲೀಸರು ಭೇದಿಸಿದ್ದಾರೆ. ಚಿನ್ನದ ನಿಧಿ ಶೋಧನೆ ನೆಪದಲ್ಲಿ ಜನರನ್ನು ನಂಬಿಸಿ ಲಕ್ಷ
ಫೋಟೋ


ಫೋಟೋ


ಗದಗ, 20 ಫೆಬ್ರವರಿ (ಹಿ.ಸ.)

ಆ್ಯಂಕರ್:

ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಚಿನ್ನದ ನಿಧಿ ಸಿಕ್ಕ ಸುದ್ದಿ ದೇಶವ್ಯಾಪಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, 2022ರ ನಕಲಿ ನಿಧಿ ವಂಚನೆ ಪ್ರಕರಣವನ್ನು ಗದಗ ಪೊಲೀಸರು ಭೇದಿಸಿದ್ದಾರೆ. ಚಿನ್ನದ ನಿಧಿ ಶೋಧನೆ ನೆಪದಲ್ಲಿ ಜನರನ್ನು ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಆರೋಪದಲ್ಲಿ ಉತ್ತರಾಖಂಡ ಮೂಲದ ಹಜರತ್ ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ.

2022ರಲ್ಲಿ ಧಾರವಾಡ ನಿವಾಸಿ ಬಸೀರಾಬೇಗಂ ಅವರು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ, ನಿಧಿ ಆಸೆ ತೋರಿಸಿ ವಂಚನೆ ಮಾಡಲಾಗಿದೆ ಎಂದು ದೂರು ನೀಡಿದ್ದರು. ಆಗ ಪ್ರಕರಣ ಗಂಭೀರವಾಗಿ ಮುಂದುವರಿಯದೆ ಉಳಿದಿತ್ತು. ಆದರೆ ಇತ್ತೀಚೆಗೆ ಲಕ್ಕುಂಡಿಯಲ್ಲಿ ನಿಜವಾದ ನಿಧಿ ಪತ್ತೆಯಾದ ಹಿನ್ನೆಲೆಯಲ್ಲಿ, ಈ ಹಳೆಯ ಪ್ರಕರಣ ಮತ್ತೆ ಮರುಜೀವ ಪಡೆದಿದೆ.

2026ರ ಫೆಬ್ರವರಿ 11ರಂದು ಸಮಾಜಸೇವಕ ಪೀರಸಾಬ್ ಗೌತಾಳ ಅವರು, ಸರ್ಕಾರಕ್ಕೆ ಸೇರಬೇಕಾದ ನಿಧಿ ಖಾಸಗಿ ವ್ಯಕ್ತಿಗಳ ಪಾಲಾಗಿದೆ ಎಂದು ದೂರು ನೀಡಿದ್ದು, ಹಂಡೆಯೊಳಗೆ ಚಿನ್ನವಿದೆ ಎನ್ನುವ ವಿಡಿಯೋವನ್ನು ಕೂಡ ಪೊಲೀಸರಿಗೆ ಒದಗಿಸಿದ್ದರು. ಇದರ ಆಧಾರದ ಮೇಲೆ ಪೊಲೀಸರು ಮರು ತನಿಖೆ ಆರಂಭಿಸಿದ್ದು, ಈ ವೇಳೆ ನಿಧಿಯ ಅಸಲಿ ಸತ್ಯ ಬಹಿರಂಗವಾಗಿದೆ.

ತನಿಖೆ ವೇಳೆ ಆರೋಪಿಯು ಗದಗ ನಗರದಲ್ಲಿ ಹಂಡೆ ಖರೀದಿಸಿ, ಅದರಲ್ಲಿ ಗೋಲ್ಡ್ ಬಣ್ಣದ ನಕಲಿ ಚಾಕೊಲೆಟ್ ಬಿಸ್ಕೆಟ್‌ಗಳನ್ನು ಇಟ್ಟು, ಚಿನ್ನದ ನಿಧಿ ಎಂದು ನಾಟಕವಾಡಿದ್ದಾನೆ ಎಂಬುದು ತಿಳಿದುಬಂದಿದೆ. ಈ ನಕಲಿ ನಿಧಿ ತೋರಿಸಿ ಹಲವು ಜನರಿಂದ ಹಣ ಪಡೆದು ಮೋಸ ಮಾಡಿದ್ದಾನೆ ಎನ್ನಲಾಗಿದೆ.

ಆರೋಪಿಯು ಲಕ್ಕುಂಡಿ ಗ್ರಾಮದ ಸಣ್ಣ ಬಸಪ್ಪ ಹಾಗೂ ದೊಡ್ಡ ಬಸಪ್ಪ ಅವರ ಪರಿಚಯ ಪಡೆದು, ನಿಧಿ ಸಿಕ್ಕರೆ ಅಪಾರ ಹಣ ಬರುತ್ತದೆ ಎಂದು ನಂಬಿಸಿ, ಉತ್ತರಾಖಂಡದಿಂದ ಬರಲು ಹಾಗೂ ಇತರೆ ಖರ್ಚು ವೆಚ್ಚದ ಹೆಸರಿನಲ್ಲಿ ಸುಮಾರು 20 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿದ್ದಾನೆ. ನಂತರ ಜಮೀನಿನಲ್ಲಿ ನಿಧಿ ಶೋಧನೆ ನಡೆಸುವ ನಾಟಕವಾಡಿ, ಕೊನೆಗೆ ವಂಚನೆ ಮಾಡಿ ಪರಾರಿಯಾಗಿದ್ದಾನೆ.

ಈ ಪ್ರಕರಣದಲ್ಲಿ ಸುಮಾರು ಎಂಟಕ್ಕೂ ಹೆಚ್ಚು ಜನರು ವಂಚನೆಗೆ ಒಳಗಾಗಿದ್ದು, ದೆಹಲಿ ಹಾಗೂ ಧಾರವಾಡದ ಮಹಿಳೆಯರೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ಮಾತನಾಡಿ, “ನಕಲಿ ಚಿನ್ನದ ಬಿಸ್ಕೆಟ್ ಬಳಸಿ ವಂಚನೆ ಮಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಕಿಂಗ್‌ಪಿನ್ ಬಂಧನವಾಗಿದ್ದು, ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಲಕ್ಕುಂಡಿಯಲ್ಲಿ ನಿಜವಾದ ಚಿನ್ನದ ನಿಧಿ ಸಿಕ್ಕ ಘಟನೆಯಿಂದಾಗಿ, ಹಳೆಯ ನಕಲಿ ನಿಧಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಮುಂದಿನ ದಿನಗಳಲ್ಲಿ ತನಿಖೆ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande