


ಕೊಪ್ಪಳ, 20 ಫೆಬ್ರವರಿ (ಹಿ.ಸ.)
ಆ್ಯಂಕರ್: ನಗರಸಭೆ ಹತ್ತಿರ ನಡೆಯುತ್ತಿರುವ ಬಲ್ಡೋಟ ಕಾರ್ಖಾನೆ ತೊಲಗಿಸಿ ಧರಣಿ 113 ದಿನದ ಹೋರಾಟದಲ್ಲಿ ಫೆ. 24ರ ಕೊಪ್ಪಳ ಭಾಗ್ಯನಗರ ಬಂದ್ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಕೊಪ್ಪಳ ಆಫ್‌ಸೆಟ್ ಪ್ರಿಂಟರ್‍ಸ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಬಂದ್ ಹಾಗೂ ಹೋರಾಟ ಬೆಂಬಲಿಸಿ ಮಾತನಾಡಿದರು.
ಅಸೋಸಿಯೇಷನ್ ಮೂಲಕ ಒಟ್ಟು ಹತ್ತು ಸಾವಿರ ಮಲ್ಟಿಕಲರ್ ಕರಪತ್ರಗಳನ್ನು ಉಚಿತವಾಗಿ ಮುದ್ರಿಸಿ ಹೋರಾಟಕ್ಕೆ ನೀಡಿದರು. ಇದೇ ವೇಳೆ 24 ರಂದು ಸಂಪೂರ್ಣ ಮುದ್ರಣ ಕೆಲಸ ಬಂದ್ ಮಾಡಿ ಹೋರಾಟದಲ್ಲಿ ಪಾಲ್ಗೊಳ್ಳುವದಾಗಿ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಆನಂದ ಗೊಂಡಬಾಳ ಮಾತನಾಡಿ, ತನು ಮನ ಧನ ಅರ್ಪಿಸಿ ಇಲ್ಲಿ ಎರಡು ಲಕ್ಷ ಜನರ ಪ್ರತಿನಿಧಿಗಳಾಗಿ ಕೇವಲ 25-30 ಜನ ನಿರಂತರವಾಗಿ ಹೋರಾಟದಲ್ಲಿದ್ದಾರೆ, ಅವರ ಕುಟುಂಬ ಮತ್ತು ಜನರ ಟೀಕೆಗಳ ಹೊರತಾಗಿಯೂ ಸಹ ಅವರು ಅತ್ಯಂತ ಕಾಳಜಿ ಮತ್ತು ನೈತಿಕತೆಯಿಂದ ಹೋರಾಟ ಮಾಡುತ್ತಿದ್ದಾರೆ, ಅವರ ಹೋರಾಟ ಜಿಲ್ಲೆಯ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲು, ಇದು ಅತ್ಯಂತ ಸುಧೀರ್ಘ ಹೋರಾಟ ಎಂಬ ಕೀರ್ತಿ ಪಾತ್ರವಾಗುವ ಜೊತೆಗೆ ಈ ಹೋರಾಟ ಜಯಶಾಲಿಯಾಗುವ ಮೂಲಕ ಕೊಪ್ಪಳ ಹೋರಾಟಕ್ಕೆ ಹೆಸರುವಾಸಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಲಿದೆ, ಜನರು ಬಂದ್ ದಿನ ಸಮರೋಪಾದಿಯಲ್ಲಿ ಸೇರಬೇಕಿದೆ, ಇದು ನಮ್ಮ ಜೀವ ಮತ್ತು ಬದುಕಿನ ಪ್ರಶ್ನೆ ಎಂದರು.
ಈ ವೇಳೆ ಅಸೋಸಿಯೇಷನ್ ನ ಮಂಜುನಾಥ ಸೊರಟೂರ ಅವರು ಮಾತನಾಡಿ, 24 ರಂದು ನಡೆಯುವ ಹೋರಾಟ ಮತ್ತೊಂದು ಇತಿಹಾಸವಾಗಲಿದೆ, ಒಂದು ಅಂಗಡಿ ಸಹ ಅಂದು ತೆರೆಯದಂತೆ ಎಲ್ಲರೂ ಬಂದ್ ಮಾಡಿ ಹೋರಾಟದಲ್ಲಿ ಭಾಗವಹಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಂಟಿ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಹೋರಾಟ ಕುರಿತು ಸಾರ್ವಜನಿಕವಾಗಿ ಉತ್ತಮ ಸ್ಪಂದನೆ ದೊರೆತಿದೆ, ಹಲವಾರು ಸಂಘಟನೆಗಳನ್ನು ನೇರವಾಗಿ ಸಂಪರ್ಕ ಮಾಡಲಾಗಿದೆ, ಪುರ ಪ್ರಮುಖರನ್ನು, ಜನಪ್ರತಿನಿಧಿಗಳನ್ನು, ಹೋರಾಟಗಾರರನ್ನು ಭೇಟಿ ಮಾಡಲಾಗುತ್ತಿದೆ. ಸುಮಾರು 5 ಸಾವಿರ ಜನರು ಅಂದಿನ ಹೋರಾಟದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಗವಿಮಠದಿಂದಲೇ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ದಾನಿಗಳ ಸಹಾಯದಿಂದ ಕಾರ್ಯಕ್ರಮ ಸಂಘಟಿಸಲಾಗಿದೆ. ಈ ಹೋರಾಟದಲ್ಲಿ ಗೆಲುವು ಶತಸಿದ್ಧವಾಗಿದೆ, ಗೆಲುವು ದೈವೇಚ್ಛೆಯಾಗಿದ್ದು, ಹೆಚ್ಚಿನ ಜನರು ಪಾಲ್ಗೊಂಡು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಲ್ಲಿ ಎಲ್ಲರೂ ಒಂದು ಎಂದು ತೋರಿಸುವ ಸಮಯ ಇದಾಗಿದೆ ಎಂದರು.
ಧರಣಿಯಲ್ಲಿ ಕೊಪ್ಪಳ ಆಫ್‌ಸೆಟ್ ಪ್ರಿಂಟರ್‍ಸ್ ಅಸೋಸಿಯೇಷನ್‌ನ ಅಧ್ಯಕ್ಷ ಶ್ರೀಶೈಲಪ್ಪ ನಿಡಶೇಸಿ, ಹಸನಸಾಬ್ ಹಿರೇಮಸೂತಿ, ರಾಜಶೇಖರ ತಂಬ್ರಳ್ಳಿಮಠ, ಉಮೇಶ ಮುಧೋಳ, ಸಿದ್ದಣ್ಣ ಏಳುರೊಟ್ಟಿ, ಮಹ್ಮದ್ ರಫಿ, ಸಿದ್ದು ರಂಜಳಗಿ, ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಜಂಟಿ ವೇದಿಕೆ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಶಂಭುಲಿಂಗಪ್ಪ ಹರಗೇರಿ, ಎಸ್.ಬಿ.ರಾಜೂರು, ಶರಣು ಶೆಟ್ಟರ್, ನಿವೃತ್ತ ಉಪನ್ಯಾಸಕ ಡಾ. ಬಸವರಾಜ ಪೂಜಾರ, ಬಸವರಾಜಪ್ಪ ಶೆಟ್ಟರ್, ಬಸವರಾಜ ಅಂಗಡಿ, ಶಿವಪ್ಪ ಜಲ್ಲಿ, ರುದ್ರಪ್ಪ ಭಂಡಾರಿ, ಸರೋಜಾ ಬಾಕಳೆ, ಎಲ್. ಎಫ್. ಪಾಟೀಲ್, ಶಾಂತಯ್ಯ ಅಂಗಡಿ, ಬಿ. ಜಿ. ಕರಿಗಾರ, ವೀರಣ್ಣ ಹುರಕಡ್ಲಿ, ಆರಾಧನಾ ಬಣಕಾರ, ರಮ್ಯಕೃಷ್ಣ ಕಾರಟಗಿ, ಸಂಗನಗೌಡ ಪೋಪಾ., ಸಣ್ಣಹನುಮಂತಪ್ಪ ಹುಲಿಹೈದರ್, ವಿಜಯ ದೊರೆರಾಜು, ಮಖ್ಬುಲ್ ರಾಯಚೂರು ಇತರರು ಇದ್ದರು.
ಭಾಗ್ಯನಗರ ಬಂದ್ ನಾಳೆ ಸಭೆ : ಬಲ್ಡೋಟ ಹಟಾವೋ ಕೊಪ್ಪಳ ಭಾಗ್ಯನಗರ ಬಂದ್ ಕುರಿತು ಚರ್ಚಿಸಲು ರವಿವಾರ ಫೆ. 22 ರಂದು ಭಾಗ್ಯನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸಂಜೆ 5 ಗಂಟೆಗೆ ಸಭೆ ಕರೆಯಲಾಗಿದ್ದು, ಯಾವ ರೀತಿಯಲ್ಲಿ ಬೆಂಬಲ ನೀಡಬೇಕು ಎನ್ನುವ ಕುರಿತು ಚರ್ಚಿಸಿ ತೀಮರ್ನಾನ ಮಾಡಲಾಗುತ್ತದೆ, ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್