
ನವದೆಹಲಿ, 20 ಫೆಬ್ರವರಿ (ಹಿ.ಸ.) :
ಆ್ಯಂಕರ್ : ದೆಹಲಿಯ ಭಾರತ ಮಂಟಪದಲ್ಲಿ ನಡೆದ “ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026” ಅಂಗವಾಗಿ ಶುಕ್ರವಾರ ಉಪ-ರಾಷ್ಟ್ರಪತಿ ಭವನದಲ್ಲಿ ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಿಇಒಗಳು ಹಾಗೂ ನಿಯೋಗಗಳು ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿದರು.
ಉನ್ನತ ಮಟ್ಟದ ಈ ಸಭೆಯಲ್ಲಿ ಭಾರತದ ವೇಗವಾಗಿ ಬೆಳೆಯುತ್ತಿರುವ ಎಐ ಪರಿಸರ ವ್ಯವಸ್ಥೆ, ಸ್ಟಾರ್ಟ್‌ಅಪ್‌ಗಳ ಪಾತ್ರ ಹಾಗೂ ಜಾಗತಿಕ ತಂತ್ರಜ್ಞಾನ ಭೂದೃಶ್ಯದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವ ಕುರಿತು ಸವಿಸ್ತಾರ ಚರ್ಚೆ ನಡೆಯಿತು.
ಈ ಕುರಿತು ಉಪ ರಾಷ್ಟ್ರಪತಿ ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪ್ರತಿಕ್ರಿಯಿಸಿ, “ಜಾಗತಿಕ ಎಐ ಭೂದೃಶ್ಯದಲ್ಲಿ ಭಾರತ ಪ್ರಮುಖ ಪಾತ್ರವಹಿಸುವತ್ತ ಈ ಶೃಂಗಸಭೆ ಮಹತ್ವದ ಹೆಜ್ಜೆಯಾಗಿದೆ. ‘ಇಂಡಿಯಾ ಎಐ ಮಿಷನ್’ ಬಲವಾದ ಮತ್ತು ಸಹಯೋಗಾತ್ಮಕ ಪರಿಸರ ವ್ಯವಸ್ಥೆ ನಿರ್ಮಾಣದಲ್ಲಿ ಮೈಲಿಗಲ್ಲಾಗಲಿದೆ” ಎಂದು ಹೇಳಿದರು.
‘ಇಂಡಿಯಾ ಎಐ ಮಿಷನ್’ ಮೂಲಕ ತಾಂತ್ರಿಕ ಅಭಿವೃದ್ಧಿಯನ್ನು ಎಲ್ಲ ವರ್ಗಗಳಿಗೂ ತಲುಪಿಸುವುದು ಸರ್ಕಾರದ ಗುರಿಯಾಗಿದ್ದು, ಆರೋಗ್ಯ, ಶಿಕ್ಷಣ, ಕೃಷಿ ಹಾಗೂ ಉದ್ಯೋಗ ಸೃಷ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎಐ ಕ್ರಾಂತಿಕಾರಿ ಬದಲಾವಣೆ ತರಬಲ್ಲದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ ಸಿಇಒಗಳು, ಕೃತಕ ಬುದ್ಧಿಮತ್ತೆ ಕೇವಲ ತಂತ್ರಜ್ಞಾನವಲ್ಲದೆ, ಸಮಾಜಮುಖಿ ಅಭಿವೃದ್ಧಿಗೆ ಶಕ್ತಿಯುತ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟರು. ಅಪಾರ ದತ್ತಾಂಶ ಸಂಪತ್ತು, ಯುವ ಪ್ರತಿಭೆ ಹಾಗೂ ಬೆಳೆಯುತ್ತಿರುವ ಡಿಜಿಟಲ್ ಮೂಲಸೌಕರ್ಯದಿಂದ ಭಾರತವು ದೊಡ್ಡ ಪ್ರಮಾಣದ ಎಐ ನವೀನತೆ ಮತ್ತು ಅನುಷ್ಠಾನದಲ್ಲಿ ಜಾಗತಿಕ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ ಎಂದು ಪ್ರತಿನಿಧಿಗಳು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa