
ನವದೆಹಲಿ, 20 ಫೆಬ್ರವರಿ (ಹಿ.ಸ.) :
ಆ್ಯಂಕರ್ : ದೆಹಲಿಯ ಭಾರತ ಮಂಟಪದಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ’ಯ ಸಂದರ್ಭದಲ್ಲಿ ಭಾರತ ಮತ್ತು ಬ್ರೆಜಿಲ್ ನಡುವೆ ಕೃಷಿ ಸಹಕಾರ ಬಲಪಡಿಸುವ ಒಪ್ಪಂದಕ್ಕೆ ರೂಪುರೇಷೆ ಸಿದ್ಧವಾಯಿತು.
ಶೃಂಗಸಭೆಯ ಅಂಗವಾಗಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜಸಿಂಗ್ ಚವ್ಹಾಣ ಅವರು ಬ್ರೆಜಿಲ್ ಕೃಷಿ ಸಚಿವರು ಮತ್ತು ಅವರ ನಿಯೋಗದೊಂದಿಗೆ ಕೃಷಿ ವ್ಯಾಪಾರ, ತಂತ್ರಜ್ಞಾನ ಹಂಚಿಕೆ ಹಾಗೂ ಮಾರುಕಟ್ಟೆ ಪ್ರವೇಶ ಸುಗಮಗೊಳಿಸುವ ಕುರಿತು ವ್ಯಾಪಕ ಚರ್ಚೆ ನಡೆಸಿದರು.
ಕೃಷಿ ಭವನದಲ್ಲಿ ನಡೆದ ಈ ಸಭೆಯಲ್ಲಿ ನೈಸರ್ಗಿಕ ಮತ್ತು ಸಾವಯವ ಕೃಷಿ ಉತ್ಪನ್ನಗಳಿಗೆ ಎರಡೂ ದೇಶಗಳ ಮಾರುಕಟ್ಟೆಗಳನ್ನು ಮುಕ್ತಗೊಳಿಸುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಭಾರತವು ದಾಳಿಂಬೆ, ಬೆಳ್ಳುಳ್ಳಿ, ದ್ರಾಕ್ಷಿ ಹಾಗೂ ಒಣದ್ರಾಕ್ಷಿ ಸೇರಿದಂತೆ ಹಲವು ಉತ್ಪನ್ನಗಳನ್ನು ಬ್ರೆಜಿಲ್ ಮಾರುಕಟ್ಟೆಗೆ ರಫ್ತು ಮಾಡಲು ವೇಗವಾಗಿ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ತಿಳಿಸಿದರು.
ಕೃಷಿ ಉತ್ಪನ್ನಗಳ ಪರಸ್ಪರ ವ್ಯಾಪಾರವನ್ನು ಹೆಚ್ಚಿಸುವುದು ಮತ್ತು ಗುಣಮಟ್ಟದ ಮಾನದಂಡಗಳ ಸಮನ್ವಯ ಸಾಧಿಸುವುದು ಪ್ರಮುಖ ಉದ್ದೇಶವಾಗಿದೆ.
ಈ ವೇಳೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಐಸಿಎಆರ್ ಮತ್ತು ಬ್ರೆಜಿಲ್‌ನ ಪ್ರಸಿದ್ಧ ಕೃಷಿ ಸಂಶೋಧನಾ ಸಂಸ್ಥೆ ಎಂಬ್ರಪಾ ನಡುವೆ ಸಂಶೋಧನಾ ಸಹಕಾರ ಬಲಪಡಿಸಲು ತಾತ್ವಿಕ ಒಪ್ಪಂದಕ್ಕೆ ಬರಲಾಗಿದೆ. ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸಲು ಶೀಘ್ರದಲ್ಲೇ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.
ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳ ಉತ್ಪಾದನೆಯನ್ನು ಹೆಚ್ಚಿಸುವ ಭಾರತದ ಮಿಷನ್‌ಗಳನ್ನು ಬಲಪಡಿಸಲು ಶ್ರೇಷ್ಠತಾ ಕೇಂದ್ರ ಸ್ಥಾಪನೆ ಕುರಿತೂ ಚರ್ಚೆ ನಡೆದಿದೆ. ಸಮಗ್ರ ಕೃಷಿ ವ್ಯವಸ್ಥೆಗಳಲ್ಲಿ ಭಾರತ ಜೊತೆಗೆ ಕಾರ್ಯನಿರ್ವಹಿಸಲು ಬ್ರೆಜಿಲ್ ಆಸಕ್ತಿ ವ್ಯಕ್ತಪಡಿಸಿದೆ.
ಬ್ರೆಜಿಲ್ ಅಧ್ಯಕ್ಷರ ನೇತೃತ್ವದ ಹಿರಿಯ ಸಚಿವರ ನಿಯೋಗದ ಈ ಭೇಟಿಯು ಭಾರತ-ಬ್ರೆಜಿಲ್ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಾಢಗೊಳಿಸುವುದರ ಜೊತೆಗೆ ಕೃಷಿ, ಸಂಶೋಧನೆ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವುದಾಗಿ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa