
ಕಠ್ಮಂಡು, 17 ಫೆಬ್ರವರಿ (ಹಿ.ಸ.) :
ಆ್ಯಂಕರ್ : ವಿದ್ಯುತ್ ವಾಹನ ಮಾರಾಟದಲ್ಲಿ ನೇಪಾಳ ಜಾಗತಿಕವಾಗಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. 2025ರಲ್ಲಿ ಜಾಗತಿಕವಾಗಿ ಅತಿ ಹೆಚ್ಚು ವಿದ್ಯುತ್ ವಾಹನಗಳು ಮಾರಾಟವಾದ ದೇಶಗಳ ಪೈಕಿ ನೇಪಾಳವು ನಾರ್ವೆ ನಂತರ ಸ್ಥಾನ ಪಡೆದಿದೆ.
2025ರಲ್ಲಿ ನಾರ್ವೆಯಲ್ಲಿ ಹೊಸ ವಾಹನಗಳ ಒಟ್ಟು ಮಾರಾಟದ ಶೇಕಡಾ 97 ರಷ್ಟು ವಿದ್ಯುತ್ ವಾಹನಗಳಾಗಿವೆ. ಇದೇ ಅವಧಿಯಲ್ಲಿ ನೇಪಾಳದಲ್ಲಿ ಹೊಸ ಕಾರು ಮಾರಾಟದ ಶೇಕಡಾ 73 ರಷ್ಟು ವಿದ್ಯುತ್ ವಾಹನಗಳಾಗಿರುವುದಾಗಿ ಅಂದಾಜಿಸಲಾಗಿದೆ. 2019ರಲ್ಲಿ ಈ ಪ್ರಮಾಣ ಕೇವಲ ಶೇಕಡಾ 8 ರಷ್ಟಿತ್ತು.
2019ರಿಂದ 2025ರವರೆಗೆ ಇವಿ ಮಾರಾಟದ ಪಾಲಿನಲ್ಲಿ ನೇಪಾಳವು ಶೇಕಡಾ 61ರಷ್ಟು ಏರಿಕೆಯನ್ನು ದಾಖಲಿಸಿದೆ. ಇದು ವಿಶ್ವ ಮಟ್ಟದಲ್ಲಿ ಅತ್ಯಂತ ವೇಗದ ಬೆಳವಣಿಗೆಗಳಲ್ಲಿ ಒಂದಾಗಿ ಗುರುತಿಸಲಾಗಿದೆ.
ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ ಹಾಗೂ ಎಂಬರ್ ನೀಡಿರುವ ಮಾಹಿತಿಯ ಪ್ರಕಾರ, ಬ್ಯಾಟರಿ ವಿದ್ಯುತ್ ವಾಹನಗಳು ಮತ್ತು ಪ್ಲಗ್-ಇನ್ ಹೈಬ್ರಿಡ್ ವಿದ್ಯುತ್ ವಾಹನಗಳನ್ನು ಇವಿಗಳಾಗಿ ಪರಿಗಣಿಸಲಾಗಿದೆ.
ಇದೇ ಅವಧಿಯಲ್ಲಿ ಫಿನ್‌ಲ್ಯಾಂಡ್ ಮತ್ತು ಡೆನ್ಮಾರ್ಕ್ ದೇಶಗಳು ಶೇಕಡಾ 50 ಕ್ಕಿಂತ ಹೆಚ್ಚು ಏರಿಕೆಯನ್ನು ಕಂಡಿವೆ.
ಯುನೈಟೆಡ್ ಸ್ಟೇಟ್ಸ್ನಲ್ಲಿ 2025ರಲ್ಲಿ ಇವಿ ಮಾರಾಟವು ಶೇಕಡಾ 10ರ ಮಟ್ಟ ತಲುಪುವ ನಿರೀಕ್ಷೆಯಿದ್ದು, ಇದು ಸುಮಾರು 1.6 ಮಿಲಿಯನ್ ಯುನಿಟ್‌ಗಳಿ ಗೆ ಸಮಾನವಾಗಲಿದೆ.
ಯುರೋಪಿನ ಇತರ ದೇಶಗಳಲ್ಲೂ ಇವಿ ಮಾರಾಟದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಬೆಲ್ಜಿಯಂನಲ್ಲಿ 43%, ನೆದರ್‌ಲ್ಯಾಂಡ್ಸ್ನಲ್ಲಿ 56%, ಪೋರ್ಚುಗಲ್ನಲ್ಲಿ 37% ಮತ್ತು ಯುನೈಟೆಡ್ ಕಿಂಗ್‌ಡಮ್ನಲ್ಲಿ 33%ರಷ್ಟು ವಿದ್ಯುತ್ ವಾಹನಗಳ ಮಾರಾಟ ಹೆಚ್ಚಳವಾಗಿದೆ.
ಒಟ್ಟಾರೆ, ಜಾಗತಿಕವಾಗಿ ವಿದ್ಯುತ್ ವಾಹನಗಳತ್ತ ಒಲವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೇಪಾಳವು ಗಮನಾರ್ಹ ಸಾಧನೆ ದಾಖಲಿಸಿ ವಿಶ್ವ ಮಟ್ಟದಲ್ಲಿ ಎರಡನೇ ಸ್ಥಾನಕ್ಕೇರಿರುವುದು ವಿಶೇಷವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa