ಚಿತ್ರದುರ್ಗ, 18 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ಡಾ.ಜೆ.ಕರಿಯಪ್ಪ ಮಾಳಿಗೆ ತಿಳಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನ ಸಭಾಂಗಣದಲ್ಲಿ ಭಾರತೀಯ ರೆಡ್‍ಕ್ರಾಸ್ ಜಿಲ್ಲಾ ಶಾಖೆ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಹಾಗೂ ಸೌಖ್ಯ ಹೆಲ್ತ್ ಮತ್ತು ಸ್ಕಿನ್ ಕೇರ್ ಸಂಯುಕ್ತಾಶ್ರಯದಲ್ಲಿ ಪ್ರಥಮ ಚಿಕಿತ್ಸಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಡಾ.ಸಂತೋಷ ಉಜ್ಜನಪ್ಪ ಅವರು ಪ್ರಥಮ ಚಿಕಿತ್ಸಾ ದಿನದ ಆಚರಣೆಯ ಹಿನ್ನೆಲೆ ತಿಳಿಸಿದರು. ಅಪಘಾತ, ಸುಟ್ಟ ಗಾಯ, ಬೆಂಕಿ ಅವಘಡ, ಮೂರ್ಛೆ, ಮೂಳೆ ಮುರಿತ, ಕಾಲ್ತುಳಿತ ಮುಂತಾದ ಅವಘಡಗಳು ಸಂಭವಿಸಿದಾಗ ಅದನ್ನು ಸಮರ್ಥವಾಗಿ ಎದುರಿಸುವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಹೃದಯಾಘಾತ ಮತ್ತು ಹೃದಯ ಸ್ಥಂಬನ ಸಂಭವಿಸಿದಾಗ ಹೇಗೆ ರಕ್ಷಿಸಬಹುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳ ಮನ ಮುಟ್ಟುವಂತೆ ತಿಳಿಸಿಕೊಟ್ಟರು.
ಸಂಪನ್ಮೂಲ ವ್ಯಕ್ತಿ ಜಿಲ್ಲಾಸ್ಪತ್ರೆಯ ಬಸವರಾಜಪ್ಪ ಅವರು ಯುವ ಸಮುದಾಯವು ಸೋಂಕು ರೋಗಗಳ ಹರಡುವಿಕೆ, ಅದರ ಅಪಾಯಗಳು ಮತ್ತು ಅದರಿಂದ ರಕ್ಷಿಸಿಕೊಳ್ಳುವ ವಿಧಾನಗಳನ್ನು ತಿಳಿಸಿದರು. .
ಹಿಂದೂಸ್ತಾನ್ ಸಮಾಚಾರ್ / Rakesh Mahadevappa