ಸಿರವಾರ, (ರಾಯಚೂರು), 22 ಜುಲೈ (ಹಿ.ಸ.) :
ಆ್ಯಂಕರ್ : ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕಡ್ಡೋಣಿ ತಿಮ್ಮಾಪುರ ಗ್ರಾಮದಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದ ಚವಳೆಕಾಯಿಯನ್ನು ಆಹಾರದಲ್ಲಿ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಂಗಳವಾರ ಮೃತಪಟ್ಟಿದ್ದು, ನಾಲ್ವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಮೃತರು ರಮೇಶ ನಾಯಕ (38), ಇವರ ಪುತ್ರಿಂ ನಾಗಮ್ಮ (08) ಎಂದು ಪೊಲೀಸರು ತಿಳಿಸಿದ್ದು, ರಮೇಶ ನಾಯಕ ಪತ್ನಿ ಪದ್ಮಾ (35), ಪುತ್ರ ಕೃಷ್ಣ (12), ಪುತ್ರಿಯರಾದ ದೀಪಾ (06) ಹಾಗೂ ಚೈತ್ರಾ (10) ತೀವ್ರ ಅಸ್ವಸ್ಥರಾಗಿದ್ದು ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್‍ಗೆ ದಾಖಲಿಸಲಾಗಿದೆ.
ರಮೇಶ ನಾಯಕ ಅವರು ಎರಡು ಎಕರೆ ಸ್ವಂತ ಜಮೀನಿನಲ್ಲಿ ಹತ್ತಿ ಬೆಳೆದಿದ್ದು ಬದುವಿನಲ್ಲಿ ಮನೆ ಬಳಕೆಗಾಗಿ ತರಕಾರಿ ಬೆಳೆಸಿದ್ದಾರೆ, ಶನಿವಾರ ಚವಳೆಕಾಯಿಗೆ ಕೀಟ ನಿಯಂತ್ರಣಕ್ಕಾಗಿ ಕ್ರಿಮಿನಾಶಕ ಸಿಂಪಡಿಸಿ ತಳದಲ್ಲಿ ಗುಳಿಗೆಗಳನ್ನು ಇಟ್ಟಿದ್ದಾರೆ. ಸೋಮವಾರ ಹೊಲದಲ್ಲಿನ ಚವಳೆಕಾಯಿ ತಂದು ಪಲ್ಯ ತಯಾರಿಸಿ ರಾತ್ರಿ ಊಟ ಮಾಡಿದ ನಂತರ ವಾಕರಿಕೆ, ವಾಂತಿ, ಬೇಧಿ ಕಾಣಿಸಿಕೊಂಡಿದೆ.
ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಇಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ನಾಲ್ವರನ್ನು ರಾಯಚೂರು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮತ್ತು ವೈದ್ಯರು ತಿಳಿಸಿದ್ದಾರೆ.
ಕವಿತಾಳ ಪೊಲೀಸ್ ಠಾಣೆಯ ಪಿಎಸ್‍ಐ ವೆಂಕಟೇಶ ನಾಯಕ ಅವರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್