ಶ್ರೀನಿವಾಸಪುರ ಕೈಗಾರಿಕಾ ವಲಯಕ್ಕೆ ಮಾಜಿ ಶಾಸಕ ರಮೇಶ್ ಕುಮಾರ್ ಅಡ್ಡಿ ; ಶೇಷಾಪುರ ಗೋಪಾಲ್ ಆರೋಪ
ಶ್ರೀನಿವಾಸಪುರ ಕೈಗಾರಿಕಾ ವಲಯಕ್ಕೆ ಮಾಜಿ ಶಾಸಕ ರಮೇಶ್ ಕುಮಾರ್ ಅಡ್ಡಿ ; ಶೇಷಾಪುರ ಗೋಪಾಲ್ ಆರೋಪ
ಚಿತ್ರ - ಕಾಂಗ್ರೆಸ್ ಮುಖಂಡ ಶೇಷಾಪುರ ಗೋಪಾಲ್.


ಕೋಲಾರ, ೧೯ ಜುಲೈ (ಹಿ.ಸ.) :

ಆ್ಯಂಕರ್ : ಶ್ರೀನಿವಾಸಪುರ ಕ್ಷೇತ್ರದ ಮಾಜಿ ಶಾಸಕ ರಮೇಶ್ ಕುಮಾರ್ ಸಮಯಕ್ಕೆ ತಕ್ಕಂತೆ ನಯನಾಜುಕಾಗಿ ಮಾತನಾಡುತ್ತಾರೆ. ತಮಗೆ ರಾಜಕೀಯವಾಗಿ ಅನುಕೂಲವಾಗುವ ರೀತಿಯಲ್ಲಿ ಮಾತನಾಡುತ್ತಾರೆ. ಇದಕ್ಕೆ ನಿದರ್ಶನ ಶ್ರೀನಿವಾಸಪುರ ತಾಲ್ಲೂಕು ಯದರೂರು ಕೈಗಾರಿಕಾ ವಲಯ ಸ್ಥಾಪನೆ ಆಗಿದೆ. ರೈತರ ಬೆಲೆ ಬಾಳುವ ಭೂಮಿಯನ್ನು ಕೈಗಾರಿಕೆಗಳಿಗೆ ಭೂಸ್ವಾಧೀನ ಪಡಿಸಿಕೊಳ್ಳ ಬಾರದು ಎಂದು ಹೇಳುವ ಮೂಲಕ ರಮೇಶ್ ಕುಮಾರ್ ಕೈಗಾರಿಕಾ ಸ್ಥಾಪನೆಗೆ ಅಡ್ಡಿ ಪಡಿಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಚೆನ್ನರಾಯಪಟ್ಟಣ ರೈತರು ಭೂಸ್ವಾದೀನ ಪ್ರಕ್ರಿಯೆ ವಿರೋಧಿಸಿ ಹೋರಾಟ ನಡೆಸಿದ್ದರು. ಹೋರಾಟಕ್ಕೆ ಮಣಿದು ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದು ಮಾಡಲಾಗಿತ್ತು. ಅದೇ ರೀತಿ ಹೋರಾಟ ನಡೆಸುವುದಾಗಿ ಹೇಳಿರುವ ರಮೇಶ್ ಕುಮಾರ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕಾರ್ಯ ತಂತ್ರ ನಡೆಸುತ್ತಿದ್ದಾರೆ.

ಇದೇ ರಮೇಶ್ ಕುಮಾರ್ ೨೦೧೪ರಲ್ಲಿ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ ರೈತರ ಜಮೀನುಗಳ ಭೂಸ್ವಾಧೀನ ಮಾಡಿಕೊಳ್ಳಲಾಗುವುದೆಂದು ಹೇಳಿದ್ದರು. ಆದರೆ ಭೂಸ್ವಾಧೀನ ಪ್ರಕ್ರಿಯೆಗೆ ಅಗತ್ಯವಿರುವ ಹಣವನ್ನು ರಾಜ್ಯ ಸರ್ಕಾರ ಒದಗಿಸಲಿಲ್ಲ. ಇದರಿಂದಾಗಿ ಕೋಚ್ ಫ್ಯಾಕ್ಟರಿ ನಿರ್ಮಾಣ ಕಾಗದದ ಮೇಲೆ ಉಳಿಯಿತು. ಆಗ ಭೂಸ್ವಾಧೀನ ಪ್ರಕ್ರಿಯೆಯನ್ನು ರಮೇಶ್ ಕುಮಾರ್ ಪ್ರಬಲವಾಗಿ ಸಮರ್ಥಿಸಿಕೊಂಡಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ. ರಮೇಶ್ ಕುಮಾರ್ ಸೋತು ಮನೆಯಲ್ಲಿ ಕುಳಿತಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿ ಹಾಲಿ ಜೆಡಿಎಸ್ ಶಾಸಕ ವೆಂಕಟಶಿವಾರೆಡ್ಡಿ ವಿಧಾನಸೌಧ ಕಚೇರಿಗಳಿಗೆ ಅಲೆದು ಕಡೆಗೂ ಮಂಜೂರಾತಿ ಮಾಡಿಸಿದ್ದಾರೆ. ಈಗಾಗಲೇ ಕೈಗಾರಿಕಾ ವಲಯ ಸ್ಥಾಪನೆಗೆ ಭೂಮಿಯನ್ನು ಗುರುತಿಸಲಾಗಿದೆ. ಒಂದುವೇಳೆ ಕೈಗಾರಿಕೆಗಳು ಸ್ಥಾಪನೆ ಆದರೆ ಅದರ ಲಾಭ ಶಾಸಕ ವೆಂಕಟಶಿವಾರೆಡ್ಡಿಗೆ ಹೋಗುತ್ತದೆ. ಆದ್ದರಿಂದ ಭೂಸ್ವಾಧೀನಕ್ಕೆ ರಮೇಶ್ ಕುಮಾರ್ ಸೇರಿದಂತೆ ಅವರ ಬೆಂಬಲಿಗರು ಅಡ್ಡಿ ಪಡಿಸುತ್ತಿದ್ದಾರೆ.

ರಮೇಶ್ ಕುಮಾರ್ ಈ ನಡೆಯನ್ನು ಕೋಲಾರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶೇಷಾಪುರ ಗೋಪಾಲ್ ತೀವ್ರವಾಗಿ ವಿರೋಧಿಸಿದ್ದಾರೆ. ಈಗಾಗಲೇ ಒಂದು ವರ್ಷದ ಹಿಂದೆ ಪ್ರಾಥಮಿಕ ಆದಿಸೂಚನೆ ಆಗಿರುವ ಎದುರೂರು ಕೈಗಾರಿಕಾ ವಲಯ ಯೋಜನೆ ಇಷ್ಟೊತ್ತಿಗೆ ಅನುಷ್ಠಾನಕ್ಕೆ ಬರಬೇಕಿತ್ತು. ಆದರೆ ನಿಮ್ಮಂಥವರ ಕುತಂತ್ರದಿಂದ ಇದು ತಡೆಯಾಗುತ್ತದೆ. ಇದರಿಂದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲಗಳು ಜಾಸ್ತಿ ಆಗುತ್ತಿದೆ. ನೀವೇ ಹೇಳಿದಾಗೆ ಸ್ಥಳೀಯರು ತಪ್ಪು ಮಾಹಿತಿ ಕೊಟ್ಟು ಕೆಐಎಡಿಬಿ ಇಂದ ಅನುಸೂಚನೆ ಮಾಡಿಸಲಿಕ್ಕೆ ಕಾರಣರಾಗಿದ್ದಾರೆ ಎನ್ನುವುದಾದರೆ ಅಂಥವರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡಿಸಿ. ಈ ವಿಷಯದಲ್ಲಿ ನಿಮಗೇನಾದರೂ ಪ್ರಾಮಾಣಿಕತೆ ಇದ್ದರೆ ಮೂರು ತಿಂಗಳ ಒಳಗಡೆ ಯೋಜನೆ ಅನುಷ್ಠಾನಗೊಳಿಸಿ ಇಲ್ಲದಿದ್ದರೆ ಈ ಎಲ್ಲಾ ಜಮೀನುಗಳನ್ನು ಅಧಿಸೂಚನೆಯಿಂದ ಮುಕ್ತಿಗೊಳಿಸುತ್ತೇನೆ ಎನ್ನುವುದನ್ನು ಸಾರ್ವಜನಿಕವಾಗಿ ಹೇಳಿ ಎಂದು ಮುಖಂಡ ಶೇಷಾಪುರ ಗೋಪಾಲ್ ರಮೇಶ್‌ಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ರಮೇಶ್ ಕುಮಾರ್ ಅವರು ಶಾಸಕರು ಮತ್ತು ಮಂತ್ರಿಗಳಾಗಿದ್ದ ಸಮಯದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿಗೆ ೬೦೦ ಎಕರೆಗೂ ಮಿಗಿಲಾದ ಜಮೀನನ್ನ ರೈತರಿಂದ ಸ್ವಾಧೀನ ಪಡಿಸಿಕೊಳ್ಳುತ್ತಿದ್ದೇವೆ ಎಂದು ಹೇಳುತ್ತಾರೆ. ಅದಕ್ಕೆ ಪೂರಕವಾದ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸಹ ಕೋಲಾರ ಅಸಿಸ್ಟೆಂಟ್ ಕಮಿಷನರ್ ರವರ ಹಂತದಲ್ಲಿ ಮುಕ್ತಾಯಗೊಳಿಸಿದ್ದರು. ಆ ಸಮಯದಲ್ಲಿ ಈ ದಿನ ರಮೇಶ್ ಕುಮಾರ್ ಸುತ್ತ ನಿಂತಿರುವಂತಹ ದೊಡ್ಡ ನಾಯಕರುಗಳು ರೈತರ ಜಮೀನನ್ನ ಕೈಗಾರಿಕೆಗಾಗಿ ಕೊಡಲಿಕ್ಕೆ ಅತಿ ಉತ್ಸುಕರಾಗಿ ಸ್ವಪ್ರೇರಣೆಯಿಂದ ಕೆಎಚ್ ಮುನಿಯಪ್ಪನವರ ಸುತ್ತು ನಾ ಮುಂದು ತಾ ಮುಂದು ಎಂದು ಓಡಾಡಿದ್ದನ್ನು ಎಲ್ಲರೂ ನೋಡಿದ್ದೇವೆ. ಸರ್ವೇ ಮತ್ತು ವಿಲೇಜ್ ಮ್ಯಾಪ್‌ಗಳನ್ನು ಹಿಡಿದುಕೊಂಡು ಕೋಲಾರ ಐಬಿಯಲ್ಲಿ ಕೆಎಚ್ ಮುನಿಯಪ್ಪನವರ ಮೇಲೆ ಜಮೀನು ತೆಗೆದುಕೊಳ್ಳಲಿಕ್ಕೆ ಒತ್ತಡ ಏರಿದನ್ನು ಸಹ ನಾವು ಕಣ್ಣಾರೆ ಕಂಡಿದ್ದೇವೆ.

ಈ ದಿನ ಎದುರೂರು ಕೈಗಾರಿಕಾ ವಲಯ ಸ್ಥಾಪನೆಗಾಗಿ ಒತ್ತಾಯವಾಗಿ ರೈತರ ಜಮೀನನ್ನು ವಶಪಡಿಸಿಕೊಳ್ಳಿ ಎಂದು ಯಾರು ಹೇಳುತ್ತಿಲ್ಲ. ಕೆಐಎಡಿಬಿ ವತಿಯಿಂದ ಕೈಗಾರಿಕಾ ವಲಯಗಳ ವಿಸ್ತರಣೆ ಹಾಗೂ ಅಭಿವೃದ್ಧಿಯ ಕಾರ್ಯಕ್ರಮದ ಅಡಿಯಲ್ಲಿ ಸಹಜ ಪ್ರಕ್ರಿಯೆಯನ್ನು ಅವರು ಶುರು ಮಾಡಿಕೊಂಡಿದ್ದಾರೆ. ಇದರಲ್ಲಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಶಾಸಕರಾದ ಜಿ.ಕೆ ವೆಂಕಟಶಿವಾರೆಡ್ಡಿ ಅವರ ಪ್ರಯತ್ನವೂ ಇದೆ. ಇದು ಕೆಐಎಡಿಬಿ ಯ ಭೂಸ್ವಾಧೀನ ಪ್ರಕ್ರಿಯೆಯ ಪಾಲಿಸಿ ಅಡಿಯಲ್ಲಿಯೇ ಆಗಬೇಕೆ ಹೊರತು ಅದನ್ನು ಹೊರತುಪಡಿಸಿ ಅವರು ಬೇರೆ ಏನೂ ಮಾಡಲಿಕ್ಕೆ ಆಗುವುದಿಲ್ಲ. ಭೂಸ್ವಾಧೀನ ಪಡಿಸಿಕೊಳ್ಳುವ ಮೊದಲು ರೈತರ ಅಭಿಪ್ರಾಯ ತೆಗೆದುಕೊಳ್ಳಲಿ ಎಂದು ಕೆಐಎಡಿಬಿ ಅಧಿಕಾರಿಗಳನ್ನು ಸ್ಥಳಕ್ಕೆ ಬಂದು ಪರಿಶೀಲಿಸಬೇಕೆಂದು ಹೇಳಿರುವುದೇ ಶಾಸಕರಾದ ಜಿ.ಕೆ ವೆಂಕಟಶಿವಾರೆಡ್ಡಿ ಅವರು.

ರಮೇಶ್ ಕುಮಾರ್ ಅವರು ಅವರೇ ಹೇಳಿದ ಹಾಗೆ ಎರಡು ವರ್ಷ ಮೂರು ತಿಂಗಳ ನಂತರ ಮನೆಯ ಹೊಸಲು ದಾಟಿ ಕ್ಷೇತ್ರದ ಜನರಿಗೋಸ್ಕರ ಈ ದಿನ ಹೊರಗಡೆ ಬಂದು ರೈತರಿಗೋಸ್ಕರ ಮಾತಾಡುತ್ತಿದ್ದಾರೆ. ೫೦ ವರ್ಷದ ತಮ್ಮ ರಾಜಕಾರಣದಲ್ಲಿ ಎಲ್ಲಾ ಅಧಿಕಾರಗಳನ್ನು ಅನುಭವಿಸಿದ ರಮೇಶ್ ಕುಮಾರ್ ಕ್ಷೇತ್ರದ ಅಭಿವೃದ್ಧಿಗೆ ಪರ್ಯಾಯವಾದ ಯೋಜನೆ ಏನು ಎನ್ನುವುದನ್ನು ಸಹ ಸಾರ್ವಜನಿಕರಿಗೆ ಹೇಳಬೇಕಲ್ಲವೇ? ರೈಲ್ವೆ ಕೋಚ್ ಫ್ಯಾಕ್ಟರಿ ಯೋಜನೆ ಅನುಷ್ಠಾನ ಗೊಳ್ಳದೆ ವಿಫಲ ಆಗಲಿಕ್ಕೆ ಕಾರಣ ಏನು ಎನ್ನುವುದನ್ನು ಸಾರ್ವಜನಿಕರಿಗೆ ಹೇಳಬೇಕಲ್ಲವೇ? ಆ ದಿನ ರಾಜ್ಯ ಸರ್ಕಾರದಿಂದ ಕೇಂದ್ರ ರೈಲ್ವೆ ಮಂಡಳಿಗೆ ಜಮೀನು ಹಸ್ತಾಂತರ ಮಾಡುವ ಪ್ರಕ್ರಿಯೆ ನಿಂತಿದ್ದು ಏಕೆ ಎನ್ನುವುದು ಸಾರ್ವಜನಿಕರಿಗೆ ಗೊತ್ತಾಗಬೇಕಲ್ಲವೇ? ರೈಲ್ವೆ ಕೋಚ್ ಫ್ಯಾಕ್ಟರಿ ಯೋಜನೆ ಅನುಷ್ಠಾನಗೊಂಡರೆ ಒಬ್ಬ ದಲಿತ ನಾಯಕರಾದ ಕೆ.ಹೆಚ್ ಮುನಿಯಪ್ಪನವರಿಗೆ ಹೆಸರು ಬರುತ್ತೆ ಎಂದು ತಡೆಯುವ ಷಡ್ಯಂತರ ಮಾಡಿದವರು ಯಾರು ಎನ್ನುವುದು ಈ ಭಾಗದ ಜನರಿಗೆ ಗೊತ್ತಾಗ್ಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

ರೈತರಿಗೋಸ್ಕರ ಹೊರಗಡೆ ಬಂದಿದ್ದೀನಿ ಎಂದು ಹೇಳುವ ಮಾಜಿ ಶಾಸಕರು ದಶಕಗಳ ಶಾಶ್ವತ ನೀರಾವರಿ ಹೋರಾಟಗಾರರ ಫಲ ಶ್ರುತಿಯಾಗಿ ಬಂದ ಕೆ ಸಿ ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಗಳ ಗತಿ ಈ ದಿನ ಏನಾಗಿದೆ ಮತ್ತು ಇದಕ್ಕೆ ಯಾರು ಕಾರಣ ಎನ್ನುವುದನ್ನು ಸಹ ಜಿಲ್ಲೆಯ ಜನರಿಗೆ ಗೊತ್ತಾಗ್ಬೇಕಲ್ಲವೇ ಕೆ.ಸಿ ವ್ಯಾಲಿ ಯೋಜನೆಯ ಪೈಪುಗಳಲ್ಲಿ ಹಣದ ಹೊಳೆ ಹರಿಯುತ್ತೆ ಹೊರತು ನೀರು ಹರಿಯುತ್ತಿಲ್ಲ ಎನ್ನುವ ಸತ್ಯ ಸಂಗತಿ ಜನಕ್ಕೆ ತಿಳಿಯಬೇಕಲ್ಲವೇ ಕೆ.ಸಿ ವ್ಯಾಲಿ ಪೈಪುಗಳಲ್ಲಿ ಹರಿದಿರುವ ನೀರು ರೈತರ ಬದುಕಿಗೆ ಪೂರಕವೇ ಅಥವಾ ಮಾರಕವೇ ಎನ್ನುವ ಚರ್ಚೆಗಳು ಸಂಪೂರ್ಣವಾಗಿ ಆಗಬೇಕಲ್ಲವೇ ೨೦೧೮ರ ವಿಧಾನಸಭಾ ಚುನಾವಣೆಗೆ ಮೊದಲು ಬಸ್ಸುಗಳಲ್ಲಿ ಜನರನ್ನ ಕರೆದುಕೊಂಡು ಹೋಗಿ ಎತ್ತಿನಹೊಳೆ ಯೋಜನೆಯ ಸ್ಥಳಗಳಿಗೆ ಭೇಟಿಕೊಟ್ಟು ಚುನಾವಣೆಗಾಗಿ ಪುಕ್ಕಟೆ ಪ್ರಚಾರ ತೆಗೆದುಕೊಂಡ ಮಾನ್ಯ ರಮೇಶ್ ಕುಮಾರ್ ಅವರು ೨೦೧೮ ರ ಚುನಾವಣೆ ನಂತರ ೨೦೨೩ರವರೆಗೂ ವಿಧಾನಸಭಾಧ್ಯಕ್ಷರಾಗಿ ಮತ್ತು ಶಾಸಕರಾಗಿ ಈ ಯೋಜನೆಯ ಫಲ ಕೋಲಾರ ಜಿಲ್ಲೆಗೆ ಸೇರಬೇಕು ಎನ್ನುವುದರಲ್ಲಿ ಎಷ್ಟರಮಟ್ಟಿಗೆ ಕಾಳಜಿ ವಹಿಸಿದರು ಎನ್ನುವುದನ್ನು ಜಿಲ್ಲೆಯ ಹಾಗೂ ಶ್ರೀನಿವಾಸಪುರ ಕ್ಷೇತ್ರದ ಜನತೆಗೆ ಹೇಳಬೇಕಲ್ಲವೇ ಎಂದು ಟೀಕಿಸಿದ್ದಾರೆ.

ಚಿತ್ರ - ಕಾಂಗ್ರೆಸ್ ಮುಖಂಡ ಶೇಷಾಪುರ ಗೋಪಾಲ್.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande