ಕೋಲಾರ, ೧೯ ಜುಲೈ (ಹಿ.ಸ.) :
ಆ್ಯಂಕರ್ : ಮಾಲೂರು ತಾಲ್ಲೂಕಿನಲ್ಲಿ ಗಣಿ ಇಲಾಖೆ ಅಧಿಕಾರಿಗಳ ಬೆಂಬಲದಿಂದ ಅಕ್ರಮವಾಗಿ ಗಣಿಗಾರಿಕೆ ನಡೆಸಿ ಕೋಟ್ಯಾಂತರ ಹಣ ಲೂಟಿ ಮಾಡುತ್ತಿದ್ದು,ಪರಿಸರ ಹಾಳಾಗಿತ್ತಿರುವುದಲ್ಲದೆ ಸರ್ಕಾರಕ್ಕೆ ಬರಬೇಕಾಗಿದ್ದ ಕೋಟ್ಯಾಂತರ ಹಣ ಕಳ್ಳರ ಪಾಲಾಗುತ್ತಿದ್ದು ಜಿಲ್ಲಾಧಿಕಾರಿಗಳು ರಾಜಕೀಯ ಒತ್ತಡಗಳಿಗೆ ಮಣಿಯದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಸಾಮಾಜಿಕ ಹೋರಾಟಗಾರರಾದ ಡಿ.ಮುನೇಶ್ ಹಾಗೂ ನವೀನ್ ಕುಮಾರ್ ಒತ್ತಾಯಿಸಿದರು.
ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ ಗಣಿಮಾಲೀಕರ ಸಂಘದ ಅಧ್ಯಕ್ಷ ಕ್ಷೇತ್ರನಹಳ್ಳಿ ಕೆ.ಎಸ್.ವೆಂಕಟೇಶಪ್ಪ ರವರು ಮಾಲೂರು ಶಾಸಕ ಕೆ.ವೈ.ನಂಜೇಗೌಡರ ಬೆಂಬಲ ಹಾಗೂ ಭ್ರಷ್ಟ ಗಣಿ ಅಧಿಕಾರಿ ರಾಜೇಶ್ ಸಹಕಾರದಿಂದ ಕಾನೂನು ಬಾಹಿರವಾಗಿ,ನಿಯಮಗಳನ್ನು ಗಾಳಿಗೆ ತೂರಿ ಐಶ್ವರ್ಯ ಕ್ರಷರ್ ಘಟಕದ ಮೂಲಕ ಮಾಲೂರು ತಾಲ್ಲೂಕು ಟೇಕಲ್ ಹೋಬಳಿಯ ತಿಮ್ಮನಾಯಕನ ಹಳ್ಳಿ ಅಗ್ರಹಾರದ ಸರ್ವೆ ನಂ. ೩೫ ರಲ್ಲಿ ಭೂಮಿ ಮೇಲಿರುವ ಬಂಡೆಯನ್ನು ಕಬಳಿಸಿ,ಅಕ್ರಮವಾಗಿ ತೆಗೆದು ಕೇವಲ ೨೩ ಸಾವಿರ ಟನ್ ಗೆ ಮಾತ್ರ ರಾಯಲ್ಟಿ ಪಾವತಿಸಿದ್ದು, ಇದರಲ್ಲಿ ಸುಮಾರು ೫೦ ಕೋಟಿಗೂ ಹೆಚ್ಚು ಹಗರಣ ನಡೆದಿದೆ ಎಂದು ಆರೋಪಿಸಿದರು.
ಇದೇ ರೀತಿ ಮಾಲೂರು ತಾಲ್ಲೂಕು ವ್ಯಾಪ್ತಿಯಲ್ಲಿ ೧೦೦ ಎಕರೆಗೂ ಹೆಚ್ಚು ಬಫರ್ ಜೋನ್ ನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು,ಸುಮಾರು ೩ ಸಾವಿರ ಕೋಟಿ ಮೌಲ್ಯದ ಹಗರಣ ನಡೆದಿದೆ ಮಾಹಿತಿ ನೀಡಿದರು.
ಉಪಲೋಕಾಯುಕ್ತರು ಸ್ಥಳ ಪರಿಶೀಲನೆ ನಡೆಸಿ ಪರಿಸರ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದು,ಕ್ರಷರ್ ಘಟಕಗಳಿಗೆ ಎನ್.ಪಿ.ಡಿ ಜಾರಿ ಮಾಡಿ ಗಣಿ ಮಾಲೀಕರು ಉತ್ತರ ನೀಡದೇ ಇದ್ದಾಗ ಕ್ರಷರ್ ಘಟಕ ಬಂದ್ ಮಾಡಲು ನೋಟಿಸ್ ಜಾರಿ ಮಾಡಿದ್ದಾರೆ. ಕ್ರಷರ್ ಸ್ಥಗಿತಗೊಳಿಸಿ ಏರ್ ಚೆಕಿಂಗ್ ಮಾಡುತ್ತಿದ್ದು,ಸುಳ್ಳು ವರದಿ ಸಿದ್ದಪಡಿಸಲು ಯತ್ನ ನಡೆಯುತ್ತಿದೆ ಎಂದು ದೂರಿದರು.
ಗಣಿಗಾರಿಕೆ ವೇಳೆ ಕಾರ್ಮಿಕರು ಮೃತ ಪಟ್ಟರೂ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸದೆ ಕಾರ್ಮಿಕರ ಮೇಲೆಯೇ ಕೇಸು ದಾಖಲಿಸುತ್ತಿದ್ದು ಇದರ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳು ಸೂಕ್ತ ಕ್ರಮ ಜರಗಿಸುವಂತೆ ಮನವಿ ಮಾಡಿದರಲ್ಲದೆ, ಎಲ್ಲಾ ಹಗರಣಗಳ ಬಗ್ಗೆ ತನಿಖೆ ಮಾಡುವಂತೆ ಇ.ಡಿ ಗೆ ದೂರು ಸಲ್ಲಿಸುವುದಾಗಿ ತಿಳಿಸಿದರು.
ಚಿತ್ರ - ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿನ ಅಕ್ರಮ ಗಣಿಗಾರಿಕೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಪತ್ರಿಕಾಗೋಷ್ಟಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಮುನೇಶ್, ನವೀನ್ ಕುಮಾರ್ ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್