ಬೆಂಗಳೂರು, 03 ಮಾರ್ಚ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರ ಸಭಾಂಗಣದಲ್ಲಿ ಇದೇ ಮಾರ್ಚ್ 8, ಶನಿವಾರದಂದು ಗಾಯನಾಚಾರ್ಯ ಗುರುರಾವ್ ದೇಶಪಾಂಡೆ ಸಂಗೀತ ಸಭಾ ವತಿಯಿಂದ ಗುರುರಾವ್ ದೇಶಪಾಂಡೆ - ಭೀಮಸೇನ್ ಜೋಶಿ ಸ್ಮರಣಾರ್ಥ ಅಹೋರಾತ್ರಿ ಸಂಗೀತೋತ್ಸವ ಆಯೋಜಿಸಲಾಗಿದೆ.
ಈ ಬಾರಿಯ ಸಂಗೀತೋತ್ಸವದ ವೇಳೆ ನಾಡಿನ ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ *ಗುರುಗಂಧರ್ವ ರಾಷ್ಟ್ರೀಯ ಪುರಸ್ಕಾರ* ನೀಡಿ ಗೌರವಿಸಲಾಗುವುದು. ಇದೇ ವೇಳೆ ಇತ್ತೀಚೆಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ವಿಭೂಷಣಕ್ಕೆ ಭಾಜನರಾದ ಡಾ. ಎಲ್ ಸುಬ್ರಮಣಿಯನ್ ಅವರನ್ನು ವಿಶೇಷ ಸನ್ಮಾನದ ಮೂಲಕ ಗೌರವಿಸಲಾಗುವುದು.
ಕಾರ್ಯಕ್ರಮದಲ್ಲಿ ಡಾ. ಎಲ್ ಸುಬ್ರಮಣಿಯನ್ ಅವರೊಂದಿಗೆ, ಅಂಕಣಕಾರರೂ, ರಮಣಶ್ರೀ ಹೋಟೆಲ್ ಸಮೂಹದ ಮುಖ್ಯಸ್ಥರಾದ ಶ್ರೀ ಎಸ್.ಷಡಕ್ಷರಿ ಅವರು ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ.
ಈ ಬಾರಿಯ ಸಂಗೀತೋತ್ಸವದಲ್ಲಿ ಪ್ರಶಸ್ತಿ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್, ಪಂಡಿತ್ ವಿನಾಯಕ ತೊರವಿ ಗಾಯನ, ವಿದುಷಿ ಅನುಪಮಾ ಭಾಗವತ್ ಸಿತಾರ್, ಶ್ರೀ ಓಜಸ್ ಅಧಿಯ ತಬಲಾ ಸ್ವತಂತ್ರ ವಾದನ ಹಾಗೂ ಶ್ರೀ ಅನಿರುದ್ಧ ಐತಾಳ್ ಗಾಯನದ ಮೂಲಕ ಸಂಗೀತಾಸಕ್ತರಿಗೆ ಮಧುರ ಸಂಗೀತದ ರಸದೌತಣವನ್ನು ಉಣಬಡಿಸಲಿದ್ದಾರೆ.
ಸಾಹವಾದನದಲ್ಲಿ ಪಂಡಿತ್ ರವೀಂದ್ರ ಯಾವಗಲ್, ಪಂಡಿತ್ ರವೀಂದ್ರ ಕಟೋಟಿ, ಪಂಡಿತ್ ವ್ಯಾಸಮೂರ್ತಿ ಕಟ್ಟಿ, ಪಂಡಿತ್ ರಾಜೇಂದ್ರ ನಾಕೋಡ್ ಹಾಗೂ ಶ್ರೀ ಸುಧಾಂಶು ಘರ್ಪುರೆ ಕಲಾವಿದರಿಗೆ ಸಾಥ್ ನೀಡಲಿದ್ದಾರೆ.ಕಾರ್ಯಕ್ರಮ ಇದೇ 8 ರಂದು ರಾತ್ರಿ 9 ಗಂಟೆಗೆ ಆರಂಭಗೊಳ್ಳುತ್ತಿದ್ದು, ಎಲ್ಲಾ ಕಲಾ ರಸಿಕರಿಗೆ ಉಚಿತ ಪ್ರವೇಶವಿರಲಿದೆ.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ