ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ನಿಧನ
ಬೆಂಗಳೂರು, 14 ನವೆಂಬರ್ (ಹಿ.ಸ.) : ಆ್ಯಂಕರ್ : ಪರಿಸರ ಸಂರಕ್ಷಣೆಯೊಂದಿಗೆ ತನ್ನ ಜೀವನವನ್ನು ಅವಿನಾಭಾವವಾಗಿ ಜೋಡಿಸಿಕೊಂಡಿದ್ದ, ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ (114) ಅವರು ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಕೆಲ ದಿನಗಳಿಂದ ಬೆಂಗಳೂರಿನ ಜಯನಗರದ ಖ
Timmakka


ಬೆಂಗಳೂರು, 14 ನವೆಂಬರ್ (ಹಿ.ಸ.) :

ಆ್ಯಂಕರ್ : ಪರಿಸರ ಸಂರಕ್ಷಣೆಯೊಂದಿಗೆ ತನ್ನ ಜೀವನವನ್ನು ಅವಿನಾಭಾವವಾಗಿ ಜೋಡಿಸಿಕೊಂಡಿದ್ದ, ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ (114) ಅವರು ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ.

ಉಸಿರಾಟದ ತೊಂದರೆಯಿಂದ ಕೆಲ ದಿನಗಳಿಂದ ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ 12 ಗಂಟೆಗೆ ಅಂತಿಮ ಉಸಿರೆಳೆದಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ 1911ರ ಜೂನ್ 30ರಂದು ಜನಿಸಿದ ತಿಮ್ಮಕ್ಕ ಅವರು ಚಿಕ್ಕಯ್ಯರನ್ನು ವಿವಾಹವಾಗಿದ್ದರು. ದಂಪತಿಗೆ ಸಂತಾನ ಇಲ್ಲದ ಕಾರಣ, ಅವರು ರಸ್ತೆಗಳ ಬದಿಯಲ್ಲಿ ಆಲದ ಸಸಿಗಳನ್ನು ನೆಡುತ್ತ, ಅವುಗಳನ್ನು ಮಕ್ಕಳಂತೆ ಸಾಕಿ ಬೆಳೆಸಿದರು. ಹೀಗಾಗಿ ಜನಮನದಲ್ಲಿ 'ಸಾಲುಮರದ ತಿಮ್ಮಕ್ಕ' ಎಂದು ಪ್ರಸಿದ್ಧರಾಗಿದ್ದರು.

ತಿಮ್ಮಕ್ಕ ಅವರ ಪರಿಸರ ಸೇವೆಯನ್ನು ದೇಶದ ಅನೇಕ ಸಂಸ್ಥೆಗಳು ಗುರುತಿಸಿವೆ. ರಾಜ್ಯೋತ್ಸವ ಪ್ರಶಸ್ತಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವಿಶಾಲಾಕ್ಷಿ ಪ್ರಶಸ್ತಿ, 2010ರ ‘ನಾಡೋಜ’ ಗೌರವ ಸೇರಿ ಅನೇಕ ಸನ್ಮಾನಗಳು ಇವರ ಹೆಸರಿನಲ್ಲಿವೆ. 2019ರಲ್ಲಿ ಪದ್ಮಶ್ರೀ ಪ್ರಶಸ್ತಿ, 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದರು.

ತಿಮ್ಮಕ್ಕನವರ ಪರಿಸರ ಕೊಡುಗೆ ಅಷ್ಟೇ ಸ್ಮರಣೀಯ. ಮರಗಳೇ ನನ್ನ ಮಕ್ಕಳು ಎಂದು ಘೋಷಿಸಿ ಶತಕೋಟಿ ಜನರಿಗೆ ಹಸಿರು ಸಂಸ್ಕೃತಿಯ ಸಂದೇಶ ನೀಡಿ, ನೂರಾರು ಆಲದ ಮರಗಳನ್ನು ಬೆಳೆಸಿದ ಸಾಧನೆಯು ಇಂದಿಗೂ ಪ್ರೇರಣಾದಾಯಕ.

ತಿಮ್ಮಕ್ಕನವರ ನಿಧನಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ತಮ್ಮ ಸಂತಾಪ ಸಂದೇಶದಲ್ಲಿ ವೃಕ್ಷಮಾತೆ ತಿಮ್ಮಕ್ಕ ಅವರ ಅಗಲಿಕೆ ಹಸಿರು ಪರಂಪರೆಯ ದೊಡ್ಡ ನಷ್ಟ. ಅವರ ಪರಿಸರ ಸೇವೆಯನ್ನು ಮಾದರಿಯಾಗಿ ತೆಗೆದುಕೊಂಡು, ನಮ್ಮ ಸುತ್ತಮುತ್ತ ಹಸಿರು ಸಂರಕ್ಷಣೆ ಮೂಲಕ ನಿಜವಾದ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande