
ಹುಬ್ಬಳ್ಳಿ, 14 ನವೆಂಬರ್ (ಹಿ.ಸ.) :
ಆ್ಯಂಕರ್ : ಭಾರತ ಇಂದು ಏಷ್ಯಾದ ಪ್ರಮುಖ ಉತ್ಪಾದನಾ ಹಬ್ ಆಗಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಜಗತ್ತಿನ ಅನೇಕ ರಾಷ್ಟ್ರಗಳು ನಮ್ಮ ಡಿಜಿಟಲ್ ವ್ಯವಸ್ಥೆ, ಆಡಳಿತ ಬದ್ಧತೆ ಮತ್ತು ಯುವ ಕಾರ್ಯಪಡೆಯ ಕೌಶಲ್ಯ ಕಂಡು ಉದ್ದಿಮೆ ತೆರೆಯಲು ಭಾರತಕ್ಕೆ ಲಗ್ಗೆ ಇಡುತ್ತಿವೆʼ ಎಂದು ಕೇಂದ್ರ ಗ್ರಾಹಕ ವ್ಯವಹಾರ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಉತ್ತರ ಕರ್ನಾಟಕದ ವಾಣಿಜ್ಯ ನಗರಿ ಎಂದೇ ಹೆಸರಾದ ಹುಬ್ಬಳ್ಳಿಯಲ್ಲಿ ಶುಕ್ರವಾರ ʼನಿಡೇಕ್‌ನ ದಿ ಆರ್ಚರ್ಡ್ ಹಬ್ʼ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವಪ್ರಸಿದ್ಧ ಉತ್ಪಾದನಾ ಕೇಂದ್ರವಾಗುವತ್ತ ಸಾಗಿದೆ. ಪ್ರಧಾನಿ ಅವರು ಘೋಷಿಸಿದ ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಕೇವಲ ಘೋಷಣೆಯಲ್ಲ ಭಾರತದ ಪ್ರಗತಿಯ ನೋಟಕ್ಕೆ ಪ್ರತೀಕವಾಗಿದೆ ಎಂದು ಪ್ರತಿಪಾದಿಸಿದರು.
ದೇಶದಲ್ಲಿ ಮೋದಿ ಸರ್ಕಾರ ಕೈಗೊಂಡ ಸುಧಾರಣೆ, GST ಸರಳೀಕೃತ ವ್ಯವಸ್ಥೆ, ಡಿಜಿಟಲೀಕರಣದ ಪರಿಣಾಮ ಇಂದು ವಿಶ್ವದ ಅತಿದೊಡ್ಡ ಕಂಪನಿಗಳು ತಮ್ಮ ಉತ್ಪಾದನಾ ನೆಲೆಯಾಗಿ ಭಾರತವನ್ನು ಅರಸಿಕೊಂಡು ಬರುತ್ತಿವೆ. ಆಪಲ್, ಸ್ಯಾಮ್‌ಸಂಗ್, ಎಲ್‌ಜಿ, ಟೊಯೋಟಾ ಹೀಗೆ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಉತ್ಪಾದನೆ ಮಾಡುತ್ತಿವೆ. ಪ್ರಸ್ತುತದಲ್ಲಿ ಭಾರತ ಕೇವಲ ಬಳಕೆ ಮಾರುಕಟ್ಟೆ ಮಾತ್ರವಲ್ಲ, ಉತ್ಪಾದನಾ ನೆಲೆ ಮತ್ತು ರಫ್ತು ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ವಿದ್ಯುತ್ ವಾಹನಗಳು, ಇಂಧನ ಸಂಗ್ರಹಣೆ ಮತ್ತು ಕೈಗಾರಿಕಾ ಯಾಂತ್ರೀಕರಣಕ್ಕೆ ಜಾಗತಿಕ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿರುವ ಭಾರತ ಪಾರದರ್ಶಕ ನೀತಿಗಳಿಂದ ನಿಡೇಕ್‌ನಂತಹ ಅಂತಾರಾಷ್ಟ್ರೀಯ ಕಂಪನಿಗಳಿಗೆ ವಿಶ್ವಾಸನೀಯ ದೇಶವಾಗಿದೆ ಎಂದು ಹೇಳಿದರು.
ಭಾರತ-ಜಪಾನ್ ಪಾಲುದಾರಿಕೆ-ಸ್ನೇಹದ ಪ್ರತೀಕ:
ಭಾರತ ಮತ್ತು ಜಪಾನ್ ನಡುವಿನ ಸ್ನೇಹ ಯಾವತ್ತೂ ಪ್ರಜಾಪ್ರಭುತ್ವ, ಶಿಸ್ತು ಮತ್ತು ಅಭಿವೃದ್ಧಿ ಹಂಚಿಕೆಯ ಮೌಲ್ಯಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಹೈ-ಸ್ಪೀಡ್ ರೈಲು, ಕೈಗಾರಿಕಾ ಕಾರಿಡಾರ್‌ಗಳು, ಸ್ಮಾರ್ಟ್‌ಸಿಟಿ ಯೋಜನೆಗಳಲ್ಲಿ ಜಪಾನ್ ನಮ್ಮೊಂದಿಗೆ ನೈಜ ಪಾಲುದಾರ ರಾಷ್ಟ್ರವಾಗಿ ನಿಂತಿದೆ. ನಮ್ಮ ಹುಬ್ಬಳ್ಳಿಯಲ್ಲಿ ಉತ್ಪಾದನಾ ಹಬ್ ತೆರೆಯುತ್ತಿರುವ ನಿಡೇಕ್ ಒಂದು ಕಾರ್ಖಾನೆ ಮಾತ್ರವಲ್ಲ, ಭಾರತ ಮತ್ತು ಜಪಾನ್ ನಡುವಿನ ಶಾಶ್ವತ ಪಾಲುದಾರಿಕೆಯ ಸಂಕೇತವೂ ಆಗಿದೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa