ಭಾರತ-ಆಸ್ಟ್ರೇಲಿಯಾ ರಕ್ಷಣಾ ಪಾಲುದಾರಿಕೆ ನಿರ್ಣಾಯಕ ಹಂತದಲ್ಲಿ : ರಾಜನಾಥ್ ಸಿಂಗ್
ನವದೆಹಲಿ, 10 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಆಸ್ಟ್ರೇಲಿಯಾ ಭೇಟಿಯ ಕೊನೆಯ ದಿನವಾದ ಶುಕ್ರವಾರ ಸಿಡ್ನಿಯಲ್ಲಿ ನಡೆದ ಮೊದಲ ಭಾರತ–ಆಸ್ಟ್ರೇಲಿಯಾ ರಕ್ಷಣಾ ಉದ್ಯಮ ದುಂಡುಮೇಜಿನ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಎರಡೂ ರಾಷ್ಟ್ರಗಳ ರಕ್ಷಣಾ ಹಾಗೂ ಕಾರ್ಯತಂತ್ರದ ಪಾಲುದಾರಿಕೆ ಇಂದು “ನಿರ
Meeting


ನವದೆಹಲಿ, 10 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಆಸ್ಟ್ರೇಲಿಯಾ ಭೇಟಿಯ ಕೊನೆಯ ದಿನವಾದ ಶುಕ್ರವಾರ ಸಿಡ್ನಿಯಲ್ಲಿ ನಡೆದ ಮೊದಲ ಭಾರತ–ಆಸ್ಟ್ರೇಲಿಯಾ ರಕ್ಷಣಾ ಉದ್ಯಮ ದುಂಡುಮೇಜಿನ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಎರಡೂ ರಾಷ್ಟ್ರಗಳ ರಕ್ಷಣಾ ಹಾಗೂ ಕಾರ್ಯತಂತ್ರದ ಪಾಲುದಾರಿಕೆ ಇಂದು “ನಿರ್ಣಾಯಕ ಹಂತ” ತಲುಪಿದೆ ಎಂದು ಹೇಳಿದರು.

ರಕ್ಷಣಾ, ಕೈಗಾರಿಕಾ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ದ್ವಿಪಕ್ಷೀಯ ಸಹಕಾರವನ್ನು ಅವರು ಪ್ರಶಂಸಿಸಿದರು. “ಈ ಸಭೆ ಕೇವಲ ಸಂವಾದವಲ್ಲ, ಬದಲಾಗಿ ಭಾರತ ಮತ್ತು ಆಸ್ಟ್ರೇಲಿಯಾವನ್ನು ವ್ಯಾಪಾರ, ಕೈಗಾರಿಕೆ ಮತ್ತು ನಾವೀನ್ಯತೆಯಲ್ಲಿ ನೈಸರ್ಗಿಕ ಪಾಲುದಾರರನ್ನಾಗಿ ಮಾಡುವ ಸಂಕಲ್ಪದ ಘೋಷಣೆ,” ಎಂದು ಸಚಿವರು ಹೇಳಿದರು.

2020ರಲ್ಲಿ ಆರಂಭವಾದ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯಿಂದಾಗಿ ಎರಡೂ ರಾಷ್ಟ್ರಗಳ ಸಂಬಂಧಗಳು ಬಲಪಡುತ್ತಿವೆ ಎಂದು ಅವರು ಉಲ್ಲೇಖಿಸಿದರು. 2024–25 ರ ಅವಧಿಯಲ್ಲಿ ನಡೆದ ಉನ್ನತ ಮಟ್ಟದ ಶೃಂಗಸಭೆಗಳು, ಸಚಿವರ ಸಂವಾದಗಳು ಮತ್ತು ಪರಸ್ಪರ ಭೇಟಿಗಳಿಂದ ಸಂಬಂಧಗಳು ಹೊಸ ಎತ್ತರಕ್ಕೇರಿವೆ ಎಂದು ಹೇಳಿದರು.

ಭಾರತವು ಇಂದು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದ ರಾಜನಾಥ್ ಸಿಂಗ್, ಕಳೆದ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ಉತ್ಪಾದನೆ ₹1.51 ಲಕ್ಷ ಕೋಟಿ ತಲುಪಿದ್ದು, ಇದು ಸಾರ್ವಕಾಲಿಕ ಗರಿಷ್ಠ. ರಫ್ತು ₹23,622 ಕೋಟಿ ತಲುಪಿದೆ ಮತ್ತು ಭಾರತೀಯ ಕಂಪನಿಗಳು ಈಗ ಸುಮಾರು 100 ದೇಶಗಳಿಗೆ ರಫ್ತು ಮಾಡುತ್ತಿವೆ ಎಂದು ವಿವರಿಸಿದರು.

ವಿದೇಶಿ ನೇರ ಹೂಡಿಕೆ ನೀತಿಯು ಈಗ 74% ವರೆಗೆ ಸ್ವಯಂಚಾಲಿತ ಮಾರ್ಗದ ಮೂಲಕ ಅನುಮತಿಸಿರುವುದನ್ನು ಉಲ್ಲೇಖಿಸಿ, ಆಸ್ಟ್ರೇಲಿಯಾದ ಉದ್ಯಮಿಗಳನ್ನು ಭಾರತದಲ್ಲಿ ಹೂಡಿಕೆ, ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಭಾಗವಹಿಸಲು ಆಹ್ವಾನಿಸಿದರು. “ನಾವು ಒಟ್ಟಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ, ಶಾಂತಿ ಮತ್ತು ಭದ್ರತೆಯ ಕಾರ್ಯತಂತ್ರದ ಚಾಲಕರಾಗಬಹುದು,” ಎಂದರು.

ಆಸ್ಟ್ರೇಲಿಯಾ ಕ್ವಾಂಟಮ್ ವ್ಯವಸ್ಥೆಗಳು, ನೀರೊಳಗಿನ ವಾಹನಗಳು ಮತ್ತು ಕಡಲ ಕಣ್ಗಾವಲು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದರೆ, ಭಾರತವು ಹಡಗು ನಿರ್ಮಾಣ, ಕ್ಷಿಪಣಿ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಶಕ್ತಿಯಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಈ ದುಂಡುಮೇಜಿನ ಸಭೆಯನ್ನು ಭಾರತೀಯ ರಕ್ಷಣಾ ಸಚಿವಾಲಯ, ಆಸ್ಟ್ರೇಲಿಯಾದ ರಕ್ಷಣಾ ಇಲಾಖೆ, ನ್ಯೂಲ್ಯಾಂಡ್ ಗ್ಲೋಬಲ್ ಗ್ರೂಪ್ ಮತ್ತು ಆಸ್ಟ್ರೇಲಿಯಾ–ಭಾರತ ವ್ಯವಹಾರ ಮಂಡಳಿ ಜಂಟಿಯಾಗಿ ಆಯೋಜಿಸಿತ್ತು. ಸಭೆಯಲ್ಲಿ ಆಸ್ಟ್ರೇಲಿಯಾದ ಸಹಾಯಕ ರಕ್ಷಣಾ ಸಚಿವ ಪೀಟರ್ ಖಲೀಲ್ ಹಾಗೂ ಉಭಯ ದೇಶಗಳ ಉನ್ನತ ಅಧಿಕಾರಿಗಳು, ಉದ್ಯಮ ನಾಯಕರು ಮತ್ತು ಸಂಶೋಧಕರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande