ಐತಿಹಾಸಿಕ ಕೊಳ್ಳಿನ ಕೆರೆ ಅಭಿವೃದ್ಧಿಗೆ ಮುಂದಾಗುವರೇ ಸಚಿವ ಶಿವರಾಜ ತಂಗಡಗಿ?
ಕೊಪ್ಪಳ, 12 ಏಪ್ರಿಲ್ (ಹಿ.ಸ): ಆ್ಯಂಕರ್ : ಗಂಡುಗಲಿ ಕುಮಾರರಾಮನ ಅವಧಿಯಲ್ಲಿ ನಿರ್ಮಾಣವಾಗಿದ್ದನೆನ್ನಲಾದ ಕೊಳ್ಳದ ಕೆರೆ
ಕೆರೆ ಅಭಿವೃದ್ಧಿಗೆ ಮುಂದಾಗುವರೇ ಸಚಿವ


ಕೊಪ್ಪಳ, 12 ಏಪ್ರಿಲ್ (ಹಿ.ಸ):

ಆ್ಯಂಕರ್ : ಗಂಡುಗಲಿ ಕುಮಾರರಾಮನ ಅವಧಿಯಲ್ಲಿ ನಿರ್ಮಾಣವಾಗಿದ್ದನೆನ್ನಲಾದ ಕೊಳ್ಳದ ಕೆರೆ ಆಲಿಯಾಸ್ ಕೊಳ್ಳಿನ ಕೆರೆ ಸಂಪೂರ್ಣವಾಗಿ ಹೂಳು ತುಂಬಿಕೊಂಡಿದೆ. ಕೆರೆಯ ಒಡಲಿನಲ್ಲಿ ಬಳ್ಳಾರಿ ಜಾಲಿ ಒಳಗೊಂಡಂತೆ ಅನೇಕ ರೀತಿಯ ಗಿಡಗಳು ಬೆಳೆದಿವೆ. ಕೆರೆಯ ಅಸ್ತಿತ್ವವೇ ಮರೆಮಾಚಿ ಹೋಗಿದೆ. ಈ ಐತಿಹಾಸಿಕ ಕೆರೆಯನ್ನು ಜಿಲ್ಲೆಯ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಅವರು ಅಭಿವೃದ್ಧಿ ಪಡಿಸಿ ಹಲವಾರು ಗ್ರಾಮಗಳ ರೈತರ ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡುವರೇ...?

ಹೀಗೊಂದು ಪ್ರಶ್ನೆ ಜಿಲ್ಲೆಯ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಹಪುರ ಒಳಗೊಂಡಂತೆ ಅಗಳಕೇರಿ ಮತ್ತು ಕೆರೆಹಳ್ಳಿ ಗ್ರಾಮದ ರೈತರಲ್ಲಿ ಮೂಡಿದೆ. ಕಳೆದ ಬಾರಿ ಇವರದ್ದೇ ಸರ್ಕಾರ ಇದ್ದಾಗ ಕೆರೆಯಲ್ಲಿ ಮಳೆ ನೀರು ಸಂಗ್ರಹಿಸಲು ಅಂದಿನ ಸಚಿವ ಶಿವರಾಜ ತಂಗಡಗಿ ಅವರು 1.50 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದರು. ಇವರ ಜನ-ಜಾನುವಾರುಗಳ ಕಾಳಜಿ ಮೆಚ್ಚುವಂಥದ್ದು. ಆದರೆ ಅಧಿಕಾರಿಗಳು, ಇಂಜಿನಿಯರುಗಳು ಮತ್ತು ಗುತ್ತಿಗೆದಾರರ ಸಮನ್ವಯದ ಕೊರತೆಯಿಮದ ಅವೈಜ್ಞಾನಿಕವಾಗಿ ಚೆಕ್ ಡ್ಯಾಂ ನಿರ್ಮಿಸಿದ್ದಾರೆ. ಮಳೆ ನೀರು ಕೆರೆಯಲ್ಲಿ ಸಂಗ್ರಹವಾಗದೇ ಸೋರಿ ಹೋಗುತ್ತಿದೆ. ಆ ಮೂಲಕ ಸರ್ಕಾರದ ಹಣ ಸಂಪೂರ್ಣ ನೀರು ಪಾಲಾದಂತಾಗಿದೆ. ಈ ಕೆರೆಯಲ್ಲಿ ನೀರು ಸಂಗ್ರಹಗೊಳ್ಳದೇ ವ್ಯರ್ಥವಾಗಿ ಹರಿದು ಹೋಗುತ್ತಿರುವುದರಿಂದ ಜನ-ಜಾನುವಾರುಗಳಿಗೆ ಉಪಯೋಗ ಇಲ್ಲದಂತಾಗಿದೆ.

138 ಎಕರೆ ವಿಸ್ತೀರ್ಣದ ಕೆರೆ:

ಗಂಡುಗಲಿ ಕುಮಾರರಾಮ ಮತ್ತು ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಕೊಳ್ಳದ ಮೇಲ್ಭಾಗದ ತಿಮ್ಮಪ್ಪನ ಬೆಟ್ಟದಲ್ಲಿ ಜನವಸತಿ ಇತ್ತು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಇಲ್ಲಿ ತಿಮ್ಮಪ್ಪ, ಲಕ್ಷ್ಮಿದೇವಿ ಮತ್ತು ತೇರಿನ ಹನುಮಂತರಾಯ ದೇವಸ್ಥಾನಗಳು, ಜನವಸತಿ ಇದ್ದ ಬಗ್ಗೆ ಕುರುಹುಗಳು ಇವೆ. ಇಲ್ಲಿ ಜನವಸತಿ ಇರುವಿಕೆ ಕುರಿತು ನೀರಿನ ಜಲಮೂಲಗಳಾದ ಕೆರೆ, ಬಾವಿಗಳು, ಕೋಟೆ ಕೊತ್ತಲಗಳು, ಮಂಟಪಗಳು, ಸ್ಮಶಾನವೂ ಇರುವುದನ್ನು ಗಮನಿಸಬಹುದು. ಕೊಳ್ಳದ ಕೆರೆ 138 ಎಕರೆ ವಿಸ್ತೀರ್ಣ ಇದ್ದು, ಇಲ್ಲಿ ನೀರು ಸಂಗ್ರಹಣೆ ಇತ್ತು. ಇದರಿಂದಾಗಿ ಜನ-ಜಾನುವಾರುಗಳು, ಪಶು-ಪಕ್ಷಿಗಳಿಗೆ ನೆರವಾಗಿತ್ತು. ಇದೀಗ ಸರ್ಕಾರಿ ಗೋಮಾಳವಾಗಿ ರೂಪುಗೊಂಡಿರುವ ಈ ಕೆರೆಯ ಒಡಲು ಬರಿದಾಗಿದೆ. ಬೆಳೆದು ನಿಂತ ಗಿಡ, ಮರಗಳನ್ನು ಕತ್ತರಿಸಿ, ಹೂಳು ತೆಗೆಯಿಸಬೇಕು. ಕೆರೆ ಅಭಿವೃದ್ಧಿಪಡಿಸಿ ನೀರು ನಿಲ್ಲುವ ವ್ಯವಸ್ಥೆ ಮಾಡಬೇಕು. ಇದರಿಂದ ಮೂರೂ ಗ್ರಾಮಗಳ ರೈತರು ಮತ್ತು ಜಾನುವಾರುಗಳಿಗೆ ನೆರವಾಗಲಿದೆ.

ನೀರಿನ ಹರಿವು:

ಕೊಳ್ಳದ ಕೆರೆಗೆ ಚಂದ್ರಗಿರಿ ಗುಡ್ಡ, ಹುಲಿಗೆಮ್ಮನ ಕೊಳ್ಳ, ಗೊರ ಚೆರವು, ನಾಯಿಬಡಗ ತೆಗ್ಗು, ಊಟಿ ಬಂಡಿ, ಕೆಂಪು ಒಟ್ಲ, ತಿರುಗಲ್ ತಿಮ್ಮಪ್ಪ ಕೋಟೆ ನೀರು, ಸುಡಗಾಡು ಅರವು, ಬಯಲು ಅರವು, ಕರೇಬಂಡಿ, ರಾಗೇರಿ ಮೂಲೆ, ಸಿರಿಗಂದ ಅರವು ಮತ್ತು ಕರೆಕಲ್ಲು ಭಾಗದಿಂದ ಅಪಾರ ಪ್ರಮಾಣದ ನೀರು ಹರಿದು ಕೊಳ್ಳದ ಕೆರೆಯಲ್ಲಿ ಸಂಗ್ರಹವಾಗುತ್ತದೆ. 1 ಕಿ.ಮೀ.ಗೂ ಅಧಿಕ ವಿಸ್ತಾರದಲ್ಲಿ ಕೆರೆ ನೀರು ಸಂಗ್ರಹಗೊಂಡು ನಿಂತಿರುತ್ತದೆ. ಹಳೆಯ ಕೆರೆ ತೂಬು ಮತ್ತು ಒಡ್ಡು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿರುವುದರಿಂದ ಕೆರೆಯಲ್ಲಿ ನೀರು ಸಂಗ್ರಹವಾಗುವುದಿಲ್ಲ. ಹೀಗಾಗಿ ಕುರಿ, ದನಗಳು ಮೇಯಲು ಇದು ಗೋಮಾಳ ಜಾಗವಾಗಿ ಮಾರ್ಪಟ್ಟಿದೆ.

ಅಮೂಲ್ಯ ವನ್ಯಜೀವಿ ಮತ್ತು ಸಸ್ಯ ಸಂಪತ್ತು:

ಶ್ರೀ ತಿರುಗಲ್ ತಿಮ್ಮಪ್ಪ, ಶ್ರೀ ಅಂದಿಗಾಲೀಶ ಗುಡ್ಡಗಳ ಅಡಿಯಲ್ಲಿರುವ ಈ ಕೊಳ್ಳದ ಕೆರೆಯ ಸುತ್ತಲೂ ಅಪರೂಪದ ಸಸ್ಯ ಸಂಪತ್ತು ಇದೆ. ಎದೆ ಬಳ್ಳಿ, ಗೊರವಿ, ಬತ್ತಿ, ಲೆಕ್ಕಿ, ಮುತ್ತುಗ, ಅಂಕಲಿ ಒಳಗೊಂಡಂತೆ ಒಳಮುಚುಗ-ಹೊರ ಮುಚುಗ, ತಾಮ್ರ ಕಡ್ಡಿ, ಹಕ್ಕಿ ಕಾಲು ಮತ್ತು ರಾಮಕಾಶಿ ಸೇರಿದಂತೆ ಅಮೂಲ್ಯ ಸಸ್ಯ ಸಂಪತ್ತು ಇದೆ. ಚಿರತೆ, ಕರಡಿ, ನವಿಲು, ಕೋತಿ, ವನಗ್ಯಾ, ಕತ್ತೆ ಕಿರುಬ, ಯೇದ, ಮೊಲ ಹೀಗೆ ನಾನಾ ಜಾತಿಯ ಕಾಡು ಪ್ರಾಣಿಗಳಿವೆ. ನಾನಾ ಜಾತಿಯ ಪಕ್ಷಿ ಸಂಕುಲವೂ ಇದೆ. ಇವುಗಳು ಉಳಿಯಬೇಕಾದರೆ ಕೊಳ್ಳದ ಕೆರೆ ಅಭಿವೃದ್ಧಿಪಡಿಸಬೇಕು. ಸರ್ಕಾರ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು.

ಬರಗಾಲದಲ್ಲೂ ನೀರು:

ಬರಗಾಲದಲ್ಲಿ ಜನ-ಜಾನುವಾರುಳಿಗೆ ನೆರವಾಗಿರುವ ಈ ಕೊಳ್ಳದ ಕೆರೆಯ ಒಡಲು ಇನ್ನೂ ಬತ್ತಿಲ್ಲ. ಇರುವ ಅಲ್ಪ ಸ್ವಲ್ಪ ನೀರಿನಲ್ಲೇ ಇಲ್ಲಿನ ಕಾಡು ಜೀವಿಗಳಿಗೆ ನೆರವಾಗಿದೆ. ಸಚಿವ ಶಿವರಾಜ ತಂಗಡಗಿ ಅವರು ಈ ಕೆರೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಬೇಕು. ಕೆರೆಯ ನೀರು ಸೋರಿಕೆಯಾಗದಂತೆ ಸುಭದ್ರವಾದ ತಡೆಗೋಡೆನ ನಿರ್ಮಾಣ ಮಾಡಬೇಕು. ಇದರಿಂದ ಪ್ರತಿ ಮಳೆಗಾಲದ ಅವಧಿಯಲ್ಲಿ ಕೆರೆ ನೀರು ಸಂಗ್ರಹಗೊಳ್ಳಲು ಸಹಕಾರಿಯಾಗುತ್ತದೆ. ಗುಡ್ಡದಲ್ಲಿರುವ ಕಾಡು ಪ್ರಾಣಿಗಳು ನೀರು ಅರಸಿ ನಾಡಿಗೆ ನುಗ್ಗುವುದನ್ನು ತಪ್ಪಿಸಿದಂತಾಗುತ್ತದೆ. ಈ ರೀತಿ ಕಾಡು ತೊರೆದ ಪ್ರಾಣಿಗಳು ಹಲವು ಬಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳಿಗೆ ಸಿಲುಕಿ ಸಾವಿಗೀಡಾಗಿವೆ. ಸಚಿವ ತಂಗಡಿಗಿ ಅವರು ಕೆರೆ ಅಭಿವೃದ್ಧಿಪಡಿಸುವ ಮೂಲಕ ರೈತರು ಮತ್ತು ದನಕರುಗಳಿಗೆ ನೆರವಾಗಬೇಕೆಂದು ಶಹಪುರ, ಅಗಳಕೇರಿ ಮತ್ತು ಕೆರೆಹಳ್ಳಿ ರೈತರು ಮನವಿ ಮಾಡಿದ್ದಾರೆ.

ಪ್ರತಿಕ್ರಿಯೆ:

ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಐತಿಹಾಸಿಕ ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರು ನಿಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ತಿರುಗಲ್ ತಿಮ್ಮಪ್ಪ ಮತ್ತು ಅಂದಿಗಾಲೀಶ ಬೆಟ್ಟದ ಅಡಿಯಲ್ಲಿರುವ ಕೊಳ್ಳದ ಕೆರೆಯ ಹೂಳನ್ನು ತೆಗೆಯಿಸಬೇಕು. ವೈಜ್ಞಾನಿಕವಾದ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಬೇಕು. ಮುಂದಿನ ಮಳೆಗಾಲದಲ್ಲಿ ಕೆರೆ ಒಡಲು ತುಂಬುತ್ತದೆ. ಇದರಿಂದರ ರೈತರಿಗೆ ಜಲಮೂಲ ಲಭಿಸುತ್ತದೆ. ಕಾಡು ಪ್ರಾಣಿಗಳು, ಪಕ್ಷಿಗಳಿಗೂ ನೆರವಾಗುತ್ತದೆ. ಈ ದಿಸೆಯಲ್ಲಿ ಸಚಿವ ತಂಗಡಿಗಿ ದಿಟ್ಟ ಕ್ರಮ ಕೈಗೊಳ್ಳಬೇಕು.

- ವೀರಣ್ಣ ಕೋಮಲಾಪುರ,

ಪರಿಸರ ಹಾಗೂ ವನ್ಯಜೀವಿ ಪ್ರಿಯರು, ಶಹಪುರ.

ಹಿಂದೂಸ್ತಾನ್ ಸಮಾಚಾರ್


 rajesh pande