ಬೆಂಗಳೂರು, 23 ನವೆಂಬರ್ (ಹಿ.ಸ.) :
ಆ್ಯಂಕರ್ : ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಸೋಲನುಭವಿಸಿರುವುದಕ್ಕೆ ನಮಗೆ ನಿರಾಸೆ ಆಗಿರುವುದು ಸತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೇಸರ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿ ಎನ್ಡಿಎ ನಮ್ಮ ನಿರೀಕ್ಷೆಗೂ ಮೀರಿ 200 ಸೀಟುಗಳ ಗಡಿ ದಾಟಿದೆ. ಮಹಾರಾಷ್ಟ್ರದಲ್ಲಿ ಎನ್ಡಿಎ ಹೊಸ ಇತಿಹಾಸವನ್ನು ಸೃಷ್ಟಿಸಿವೆ. ಮಹಾರಾಷ್ಟ್ರದ ಮಹಾಜನತೆ ಮತ್ತೊಮ್ಮೆ ನರೇಂದ್ರ ಮೋದಿಯವರ ನಾಯಕತ್ವದ ಬಗ್ಗೆ ವಿಶ್ವಾಸ ಇಟ್ಟು ಒಂದು ಐತಿಹಾಸಿಕ ಗೆಲುವು ನೀಡಿದ್ದು ತುಂಬ ಸಂತಸ ತಂದಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು- ಈ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆದಿದೆ. 3 ಕ್ಷೇತ್ರಗಳಲ್ಲೂ ನಮಗೆ ಹಿನ್ನಡೆ ಆಗಿದೆ. ಚನ್ನಪಟ್ಟಣದಲ್ಲಿ ನಮ್ಮ ಮಿತ್ರ ಪಕ್ಷ ಜೆಡಿಎಸ್ ಪಕ್ಷ, ಶಿಗ್ಗಾಂವಿ ಹಾಗೂ ಸಂಡೂರಿನಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದೆವು. ಆದರೆ, ನಮಗೆ ನಿರಾಸೆ ಆಗಿರುವುದು ಸತ್ಯ ಎಂದು ನುಡಿದರು. ಹಿನ್ನಡೆಯ ಕಾರಣ ಏನು? ಯಾತಕ್ಕೋಸ್ಕರ ನಮಗೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ ಎಂಬ ಬಗ್ಗೆ ಎರಡೂ ಪಕ್ಷಗಳ ಮುಖಂಡರು ಕುಳಿತು ಚರ್ಚೆ ಮಾಡಲಿದ್ದೇವೆ. ತಪ್ಪನ್ನು ಸರಿಪಡಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್