ಬೆಂಗಳೂರು,23 ನವೆಂಬರ್(ಹಿ.ಸ.):
ಆ್ಯಂಕರ್ : ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ ಗೆಲುವು ದಾಖಲಿಸಿದ್ದಾರೆ. ಅತ್ತ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿಗೆ ಮೂರನೇ ಬಾರಿಗೆ ಸೋಲಾಗಿದೆ. ಇದರ ಬೆನ್ನಲ್ಲೇ ಸಿಪಿ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಮತದಾರರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ನನ್ನ ಗೆಲುವು ನಿರೀಕ್ಷೆ ಮಾಡಿದ್ದೆ. ನನ್ನ ನಿರೀಕ್ಷೆಗೆ ಹತ್ತಿರವಾದ ಗೆಲುವು ಸಿಕ್ಕಿದೆ. ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ ಎಂದು ಶಾಸಕ ಸಿಪಿ ಯೋಗೇಶ್ವರ್ ಹೇಳಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಪ್ರತಿಷ್ಠೆಗೆ ಅವರ ಮಗ ನಿಖಿಲ್ ಬಲಿಯಾಗಿದ್ದಾರೆ. ಅವರಿಬ್ಬರೂ ತಮ್ಮ ಪ್ರತಿಷ್ಠೆಗೆ ಮಗನನ್ನೇ ಬಲಿಕೊಟ್ಟಿದ್ದಾರೆ ಎಂದು ಯೋಗೇಶ್ವರ್ ಹೇಳಿದ್ದಾರೆ.
ಕುಮಾರಸ್ವಾಮಿ ಮನಸು ಮಾಡಿದ್ದರೆ ಮಗನನ್ನು ಮಂಡ್ಯದಲ್ಲಿ ಲೋಕಸಭೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಬಹುದಿತ್ತು. ಆದರೆ, ಕೇಂದ್ರ ಸಚಿವರಾಗುವ ತವಕದಿಂದ ತಾವೇ ಅಲ್ಲಿ ಸ್ಪರ್ಧಿಸಿದರು. ಮಗನನ್ನು ಬಲಿಕೊಟ್ಟರು ಎಂದು ಯೋಗೇಶ್ವರ್ ಟೀಕಿಸಿದರು.
ದೇವೇಗೌಡರು ದೈತ್ಯ ಶಕ್ತಿ ಎಂದು ಬಹಳ ಹಿಂದಿನಿಂದಲೂ ಹೇಳುತ್ತ ಬಂದಿದ್ದೇನೆ. ಅದು ಸತ್ಯ. ಆದರೆ, ಅವರಿಗೆ ವಯಸ್ಸಾಗಿದೆ. ಈ ಕಾರಣದಿಂದ ಅವರನ್ನು ಜನ ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತ ಜೀವನ ನಡೆಸಲು ಇದು ಸೂಕ್ತ ಕಾಲ. ಈ ಚುನಾವಣೆ ಫಲಿತಾಂಶ ಜೆಡಿಎಸ್ ಕೊನೆಯ ಕ್ಷಣಗಳನ್ನು ಎಣಿಸುತ್ತಿದೆ ಎಂಬುದರ ಸಂಕೇತ ಎಂದು ಯೋಗೇಶ್ವರ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್