ಆರೋಗ್ಯ ವಲಯದ ಬಲವರ್ಧನೆಗೆ ಆದ್ಯತೆ - ಪ್ರಧಾನಮಂತ್ರಿ ಪ್ರತಿಪಾದನೆ.
ಬೆಂಗಳೂರು,25 ಮಾರ್ಚ್ (ಹಿ.ಸ): ಆ್ಯಂಕರ್: ಆರೋಗ್ಯ ವಲಯದ ಬಲವರ್ಧನೆಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಪ್ರಧಾನಮಂತ್ರಿ ನ
ಮೇಮೇ


ಬೆಂಗಳೂರು,25 ಮಾರ್ಚ್ (ಹಿ.ಸ):

ಆ್ಯಂಕರ್:

ಆರೋಗ್ಯ ವಲಯದ ಬಲವರ್ಧನೆಗೆ ಸರ್ಕಾರ ಆದ್ಯತೆ ನೀಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಬಡವರಿಗೆ ಗುಣಮಟ್ಟದ ಮತ್ತು ಹೆಚ್ಚು ಆರ್ಥಿಕ ಹೊರೆಯಿಲ್ಲದ ಆರೋಗ್ಯ ಸೇವೆ ದೊರಕಬೇಕು ಎಂಬ ಉದ್ದೇಶದಿಂದ ಆಯುಷ್ಮಾನ್ ಭಾರತ್ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಇದು ಜಗತ್ತಿನ ಅತಿ ದೊಡ್ಡ ವಿಮಾ ಯೋಜನೆಯಾಗಿದೆ ಎಂದು ಪ್ರಧಾನಿ ಹೇಳಿದರು. ದೇಶದಲ್ಲಿ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಜತೆಗೂಡಿ, ಕೆಲಸ ಮಾಡುವ ಅವಶ್ಯಕತೆ ಹೆಚ್ಚಾಗಿದೆ. ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿ ಇಬ್ಬರ ಪಾತ್ರವೂ ಬಹಳ ಮುಖ್ಯವಾಗಿದೆ ಎಂದರು. ಸ್ವಾತಂತ್ರ್ಯಾ ನಂತರ ಸುಮಾರು ೬೦ ವರ್ಷಗಳ ಅವಧಿಯಲ್ಲಿ ದೇಶದಲ್ಲಿ ೩೦೦ ವೈದ್ಯಕೀಯ ಕಾಲೇಜುಗಳಿದ್ದರೆ, ಕಳೆದ ೧೦ ವರ್ಷಗಳ ಅವಧಿಯಲ್ಲಿ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ೬೫೦ಕ್ಕೆ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ೭೦ಕ್ಕೆ ಏರಿಕೆಯಾಗಿದೆ ಎಂದರು. ದೇಶಾದ್ಯಂತ ೧೦ ಸಾವಿರಕ್ಕೂ ಹೆಚ್ಚು ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದ್ದು, ಕರ್ನಾಟಕದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗಿದೆ, ಇದರಿಂದ ಲಕ್ಷಾಂತರ ಬಡವರಿಗೆ ಅನುಕೂಲವಾಗಿದೆ ಎಂದು ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲೆ ಆಧುನಿಕ ಭಾರತದ ಪುಣ್ಯಭೂಮಿಯಾಗಿದೆ. ಸಮಾಜಸೇವೆಯನ್ನು ಗುರಿಯಾಗಿಟ್ಟುಕೊಳ್ಳುವಂತಹ ಇಂತಹ ಸಂಸ್ಥೆಗಳು ದೇಶದಲ್ಲಿ ಹೆಚ್ಚಾಗಿ ಜನಸೇವೆಗೆ ಮುಂದಾಗಬೇಕಿದೆ ಎಂದು ಪ್ರಧಾನಿ ಹೇಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶದ ೧೩೦ ಕೋಟಿ ಜನರಿಗೆ ಆರೋಗ್ಯ ಸೇವೆ ಒದಗಿಸಲು ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಎಂಬ ವಿಮಾ ಯೋಜನೆಯನ್ನು ಜಾರಿ ಮಾಡಿದ್ದು, ಕರ್ನಾಟಕದಲ್ಲಿ ಒಂದೂವರೆ ಕೋಟಿ ಆಯುಷ್ಮಾನ್ ಕಾರ್ಡ್ಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು. ಇದಕ್ಕೂ ಮುನ್ನ ದೆಹಲಿಯಿಂದ ಆಗಮಿಸಿದ ಪ್ರಧಾನಿ, ಕಾರ್ಯಕ್ರಮಕ್ಕೆ ತೆರಳುವ ಮಾರ್ಗದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಪ್ರಧಾನಮಂತ್ರಿ, ಮಧ್ಯಾಹ್ನ ಬೆಂಗಳೂರಿನಲ್ಲಿ ವೈಟ್ಫೀಲ್ಡ್ನಿಂದ ಕೃಷ್ಣರಾಜಪುರಂ ವರೆಗಿನ ಮೆಟ್ರೋ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರಿದರು. ೧೩.೭೧ ಕಿಲೋಮೀಟರ್ ಉದ್ದದ ಈ ಹೊಸ ಮೆಟ್ರೋ ಮಾರ್ಗವನ್ನು ಸುಮಾರು ೪ ಸಾವಿರದ ೨೫೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದಕ್ಕೂ ಮುನ್ನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಅವರನ್ನು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಆತ್ಮೀಯವಾಗಿ ಬರಮಾಡಿಕೊಂಡರು.

ಹಿಂದೂಸ್ತಾನ್ ಸಮಾಚಾರ್


 rajesh pande