ನವ ದೆಹಲಿ, 23 ಸೆಪ್ಟೆಂಬರ್ (ಹಿ.ಸ):
ಆ್ಯಂಕರ್ :
ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ - ಎನ್ಸಿಸಿ ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ - ಯುಎನ್ಇಪಿ ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದವು. ಪ್ಲಾಸ್ಟಿಕ್ ಮಾಲಿನ್ಯದ ಸಮಸ್ಯೆಯ ನಿವಾರಣೆ, ಪುನೀತ್ ಸಾಗರ್ ಅಭಿಯಾನದಡಿ ಜಲಾನಯನ ಪ್ರದೇಶದ ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ಮುಕ್ತ ಸವಾಲು ಎದುರಿಸುವುದು ಸೇರಿದಂತೆ ಹಲವು ವಿಷಯಗಳನ್ನು ಒಪ್ಪಂದ ಒಳಗೊಂಡಿದ್ದು, ಯುವಜನರನ್ನು ಜಲಾನಯನ ಪ್ರದೇಶಗಳ ಉತ್ತೇಜನಕ್ಕೆ ತೊಡಗಿಸಿಕೊಳ್ಳುವ ಮಹತ್ವದ ಯೋಜನೆಯನ್ನೂ ಒಳಗೊಂಡಿದೆ. ಕಳೆದ ವರ್ಷ ಡಿಸೆಂಬರ್ ೧ ರಂದು ಎನ್ಸಿಸಿ ಪುನೀತ್ ಸಾಗರ್ ಅಭಿಯಾನಕ್ಕೆ ಚಾಲನೆ ನೀಡಿದ್ದು, ಇದರಡಿ ಸಮುದ್ರ ತಟಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವುದು, ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಮತ್ತು ಈ ಸಂಬಂಧ ಅರಿವು ಮೂಡಿಸುವ ಉದ್ದೇಶವನ್ನು ಹೊಂದಲಾಗಿದೆ. ಪುನೀತ್ ಸಾಗರ್ ಅಭಿಯಾನದಡಿ ಒಂದು ಸಾವಿರದ ೯೦೦ಕ್ಕೂ ಅಧಿಕ ಸ್ಥಳಗಳಲ್ಲಿ ೧೨ ಲಕ್ಷಕ್ಕೂ ಅಧಿಕ ಎನ್ಸಿಸಿ ಕೆಡೆಟ್ಗಳು, ಸ್ವಯಂ ಸೇವಕರು ಮತ್ತು ಹಳೆಯ ವಿದ್ಯಾರ್ಥಿಗಳು ಜತೆಗೂಡಿ, ಇದುವರೆಗೂ, ನೂರು ಟನ್ಗೂ ಅಧಿಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮುದ್ರ ತಟದಲ್ಲಿ ಸಂಗ್ರಹ ಮಾಡಲಾಗಿದೆ. ಪರಸ್ಪರ ಒಪ್ಪಂದಕ್ಕೆ ಎನ್ಸಿಸಿಯ ಪ್ರಧಾನ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಗುರ್ಬಿರ್ ಪಾಲ್ ಸಿಂಗ್ ಮತ್ತು ವಿಶ್ವ ಸಂಸ್ಥೆಯ ವಿಶ್ವ ಆರೋಗ್ಯ ಕಾರ್ಯಕ್ರಮದ ಸ್ಥಾನಿಕ ಪ್ರತಿನಿಧಿ ಬಿಶೋ ಪರಾಜುಲಿ ಸಹಿ ಹಾಕಿದರು. ಈ ವೇಳೆ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್, ರಕ್ಷಣಾ ಇಲಾಖೆಯ ಕಾರ್ಯದರ್ಶಿ ಡಾ. ಅಜಯ್ ಕುಮಾರ್ ಸೇರಿದಂತೆ ರಕ್ಷಣಾ ಇಲಾಖೆ ಮತ್ತು ಯುಎನ್ಇಪಿಯ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪುನೀತ್ ಸಾಗರ್ ಅಭಿಯಾನ ಅತ್ಯಂತ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಡಾ. ಅಜಯ್ ಕುಮಾರ್ ಗುಣಗಾನ ಮಾಡಿದ್ದಾರೆ. ಎನ್ಸಿಸಿ ಕೆಡೆಟ್ಗಳು ಈ ಅಭಿಯಾನವನ್ನು ಕೈಗೊಂಡು ಅದನ್ನು ಯಶಸ್ವಿಗೊಳಿಸಿದ್ದಾರೆ, ವಿಶ್ವದಾದ್ಯಂತ ೧೫ ಲಕ್ಷಕ್ಕೂ ಅಧಿಕ ಎನ್ಸಿಸಿ ಕೆಡೆಟ್ಗಳು ಕಡಲತಡಿಯ ಸ್ವಚ್ಛತೆ ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇದು ಸಾಮೂಹಿಕ ಅಭಿಯಾನವಾಗಿದೆ ಎಂದು ಅವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್