ತನಿಖೆಗೆ ಒತ್ತಾಯಿಸಿ ಪ್ರತಿಭಟನೆ
ಕಟ್ಟಡ ಕಾರ್ಮಿಕರ ಹಣ ದುರುಪಯೋಗ ಕೋಲಾರ/ ೨೨ ಸೆಪ್ಟೆಂಬರ್ (ಹಿ.ಸ) : ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕ
ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ನಡೆದಿರುವ ಅವ್ಯವಹಾರದ ತನಿಖೆಗೆ ಒತ್ತಾಯಿಸಿ ಕೋಲಾರ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಕಟ್ಟಡ ಕಾರ್ಮಿಕರ ಸಂಘಟನೆಯಿ0ದ ಪ್ರತಿಭಟನೆ ನಡೆಸಲಾಯಿತು.


ಕಟ್ಟಡ ಕಾರ್ಮಿಕರ ಹಣ ದುರುಪಯೋಗ

ಕೋಲಾರ/ ೨೨ ಸೆಪ್ಟೆಂಬರ್ (ಹಿ.ಸ) : ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣವನ್ನು ವಸತಿ ಸಚಿವ ಸೋಮಣ್ಣ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ದುರ್ಬಳಕೆ ಮಾಡಿ ಸ್ಲಂ ಬೋರ್ಡ ಫಲಾನುಭವಿಗಳಿಗೆ ನೀಡಿದ್ದಿ ನೈಜ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ದ್ರೋಹ ಮಾಡಿದ್ದಾರೆ ಎಂದು ಸಿಐಟಿಯು ನೇತೃತ್ವದ ಕಟ್ಟಡ ಕಾರ್ಮಿಕರ ಸಂಘ ಜಿಲ್ಲಾಧಿಕಾರಿ ಕಛೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಭೀಮರಾಜ್ ಮಾತನಾಡಿ, ರಾಜ್ಯದಲ್ಲಿ ೧೯೯೬ರಲ್ಲಿ ಜಾರಿಗೊಂಡ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾನೂನಿನ ಅಡಿಯಲ್ಲಿ ಕರ್ನಾಟಕದಲ್ಲಿ ೨೦೦೭ ರಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂದಿದೆ ಆದರೆ ೨೦೦೭ ರಿಂದ ಕಲ್ಯಾಣ ಮಂಡಳಿಯ ಪ್ರಮುಖ ಯೋಜನೆಯಾದ ವಸತಿ ನಿರ್ಮಾಣಕ್ಕೆ ಸಾಲ ಅಥವಾ ಮುಂಗಡ ಹಣ ಪಾವತಿ ಯೋಜನೆ ಇದುವರೆಗೂ ಒಬ್ಬನೇ ಒಬ್ಬ ಕಟ್ಟಡ ಕಾರ್ಮಿಕನಿಗೂ ದೊರೆತಿಲ್ಲ ಪರಿಸ್ಥಿತಿ ಹೀಗಿರುವಾಗ ಕಳೆದ ವರ್ಷದಿಂದ ಇಬ್ಬರೂ ಸಚಿವರು ಜತೆ ಸೇರಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ೭೬ ಕೋಟಿ ಹಣವನ್ನು ಕೊಳಚೆ ನಿರ್ಮೂಲನಾ ಮಂಡಳಿಯ ೫೧೨೯ ಫಲಾನುಭವಿಗಳಿಗೆ ನೀಡಿದ್ದು ರಾಜ್ಯದಲ್ಲಿ ವಸತಿಗಾಗಿ ಹಂಬಲಿಸುತ್ತಿರುವ ಲಕ್ಷಾಂತರ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದ ವಸತಿ ಯೋಜನೆಗೆ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣ ಬಳಸಲು ಮುಂದಾಗಿದ್ದಾರೆ.ಇದಕ್ಕಾಗಿ ಕಲ್ಯಾಣ ಮಂಡಳಿಯಲ್ಲಿ ರೂಪಿಸಿದ್ದ ಐದು ವರ್ಷ ಕಡ್ಡಾಯ ನೊಂದಣಿ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲಾಗಿದೆ ಇದರಿಂದ ರಾಜ್ಯದ ಬಿಜೆಪಿ ಸಚಿವರು ಶಾಸಕರು ಹಾಗೂ ಇತರೆ ಪಕ್ಷಗಳ ಶಾಸಕರು ತಮ್ಮ ಕ್ಷೇತ್ರಗಳ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳು ಬೇಕಾಬಿಟ್ಟಿ ಕಲ್ಯಾಣ ಮಂಡಳಿ ಹಣ ದೋಚಲು ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ಮುಂದಿನ ತನ್ನ ರಾಜಕೀಯ ನೆಲೆಯನ್ನು ಭದ್ರಪಡಿಸಲು ಜನಪ್ರತಿನಿಧಿಗಳು ಮುಂದಾಗಿದ್ದಾರೆ ಎಂದರು

ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಖಜಾಂಚಿ ಆಶಾ, ಮಾತನಾಡಿ ರಾಜ್ಯದಲ್ಲಿ ೨೦೨೧ ನೇ ವರ್ಷದಲ್ಲಿ ೬ ಕೋಟಿ ಹಣವನ್ನು ಬಿಡುಗಡೆ ಮಾಡುವ ಪ್ರಯತ್ನ ನಡೆಸಿದಾಗ ಕಟ್ಟಡ ಕಾರ್ಮಿಕ ಸಂಘಗಳು ಒಕ್ಕೊರಲಿನಿಂದ ವಿರೋಧಿಸಿದ್ದವು ಹಾಗಾಗಿ ಕಲ್ಯಾಣ ಮಂಡಳಿ ಸಭೆಯಲ್ಲಿ ಈ ಹಣ ಬಿಡುಗಡೆಯನ್ನು ತಡೆಹಿಡಿಯಲಾಗಿತ್ತು. ಆದರೆ ಈಗ ಏಕಾಏಕಿ ಕೊಳಚೆ ನಿರ್ಮೂಲನೆ ಮಂಡಳಿ ಮಾತ್ರವಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಾಗಿ ಆಯ್ಕೆಯಾದ ಎಲ್ಲರಿಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನಕಲಿ ಕಾರ್ಮಿಕರನ್ನು ಹೆಸರು ನೋಂದಾಯಿಸಿ ಇದರ ಲಾಭ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಮತ್ತು ಹಲವಾರು ಕಡೆಗಳಲ್ಲಿ ಕಾರ್ಮಿಕ ನಿರೀಕ್ಷಕರು ಪರಿಶೀಲನೆ ನಡೆಸದೇ ಅನುಮೋದನೆ ನೀಡುತ್ತಿರುವುದು ಅಥವಾ ಅನುಮೋದನೆ ನೀಡುವಂತೆ ಒತ್ತಾಯಗಳನ್ನು ಸ್ಥಳೀಯ ಶಾಸಕರು ಅವರ ಮೇಲೆ ಹೇರುತ್ತಿದ್ದಾರೆ ಎಂದರು

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ, ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿರುವ ಸಾವಿರಾರು ಕೋಟಿ ಹಣದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ರೇಷನ್ ಕಿಟ್, ಟೂಲ್ ಕಿಟ್, ಆಂಬ್ಯೂಲೆನ್ಸ್, ದುಬಾರಿ ಕಾರು, ತಂತ್ರಾ0ಶ ಖರೀದಿ, ಸುರಕ್ಷಾ ಕಿಟ್, ಸುರಕ್ಷಾ ಕಿಟ್ ಮತ್ತು ಬೂಸ್ಟರ್ ಕಿಟ್ಗಳನ್ನು ಪಾರದರ್ಶಕತೆ ಕಾಪಾಡದೇ ಖರೀದಿಸಿ ನೂರಾರು ಕೋಟಿ ಭ್ರಷ್ಟಚಾರ ನಡೆಸಿದ್ದಾರೆ. ಇದಕ್ಕಾಗಿ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಕರ್ನಾಟಕ ಖರೀದಿಯಲ್ಲಿನ ಪಾರದರ್ಶಕ ಕಾಯ್ದೆಗಳನ್ನು ಉಲ್ಲಂಘಿಸಿದ್ದಾರೆ. ಇದು ಸುಪ್ರೀಂ ಕೋರ್ಟ್ ನಿರ್ದೇಶನ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ ೨೦೨೧ ರ ಮಾರ್ಚ ನಲ್ಲಿ ಹೊರಡಿಸಿರುವ ನಿರ್ದೇಶನದ ಸ್ಷಷ್ಟ ಉಲ್ಲಂಘನೆಯಾಗಿದೆ ಈ ಹಿನ್ನಲೆಯಲ್ಲಿ ಹಣ ನಕಲಿ ಫಲಾನುಭವಿಗಳ ಪಾಲಾಗದಂತೆ ಕೂಡಲೇ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಮುಖಂಡರಾದ ಮಂಜುನಾಥ್, ನಾಗರಾಜಪ್ಪ, ಪೆರುಮಾಳಪ್ಪ, ನಾರಾಯಣಪ್ಪ, ಗುರುಸ್ವಾಮಿ, ದಶರಥ್, ನಾಗವೇಣಮ್ಮ, ಜಯಮ್ಮ, ಅರುಣ್ ಕುಮಾರ್, ಮುನಿರಾಜು, ಉಮೇಶ್, ರಾಜೇಶ್, ಮಹದೇವ್, ಸುನೀತಾ, ವಿಜಯ್ ಕುಮಾರ್, ಆಂತೋನಿ ಭಾಷಾ, ಮುಂತಾದವರು ಇದ್ದರು.

ಚಿತ್ರ : ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ನಡೆದಿರುವ ಅವ್ಯವಹಾರದ ತನಿಖೆಗೆ ಒತ್ತಾಯಿಸಿ ಕೋಲಾರ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಕಟ್ಟಡ ಕಾರ್ಮಿಕರ ಸಂಘಟನೆಯಿ0ದ ಪ್ರತಿಭಟನೆ ನಡೆಸಲಾಯಿತು.


 rajesh pande