ಪೇಸಿಎಂ ೨ ಸದನಗಳಲ್ಲಿ ಕೋಲಾಹಲ
ಬೆಂಗಳೂರು, 22ಸೆಪ್ಟೆಂಬರ್ (ಹಿ.ಸ): ಆ್ಯಂಕರ್ : ಪೇಸಿಎಂ ಪೋಸ್ಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ ಕಾಂಗ್ರೆಸ
Pandemonium in 2 Houses of Pacm


ಬೆಂಗಳೂರು, 22ಸೆಪ್ಟೆಂಬರ್ (ಹಿ.ಸ):

ಆ್ಯಂಕರ್ :

ಪೇಸಿಎಂ ಪೋಸ್ಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿರುವ ವಿಷಯ ವಿಧಾನಪರಿಷತ್ ಹಾಗೂ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ, ಪರಸ್ಪರ ಧಿಕ್ಕಾರ ಘೋಷಣೆ ಮತ್ತು ಪರಸ್ಪರ ಪ್ಲೇಕಾರ್ಡ್ ಪ್ರದರ್ಶಿಸಿ ಕಲಾಪ ರಣರಂಗದಂತಾಯಿತು.

ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆಯೇ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಪ್ರಶ್ನೋತ್ತರ ಕೈಗೆತ್ತಿಕೊಳ್ಳಲು ಮುಂದಾಗುತ್ತಿದ್ದಂತೆಯೇ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಎದ್ದು ನಿಂತು, ನಿನ್ನೆ ತಡ ರಾತ್ರಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಏಕಪಕ್ಷೀಯವಾಗಿ ಸರ್ಕಾರ ನಡೆದುಕೊಂಡಿದೆ. ಬಿಜೆಪಿ ಪಕ್ಷದವರೂ ಕೂಡಾ ಪೋಸ್ಟರ್ ಹಾಕಿದ್ದಾರೆ. ಅವರನ್ನು ಬಂಧಿಸಿಲ್ಲ. ಕಾಂಗ್ರೆಸ್ ಕಾರ್ಯಕರ್ತರನ್ನು ಮಾತ್ರ ಬಂಧಿಸಿ, ಬಿಜೆಪಿ ಪಕ್ಷದವರನ್ನು ಸುಮ್ಮನೆ ಬಿಟ್ಟಿದ್ದಾರೆ. ಇದು ನ್ಯಾಯವೇ ಎಂದು ಪ್ರಶ್ನಿಸಿದರು.ಹರಿಪ್ರಸಾದ್ ಅವರ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಎದ್ದು ನಿಂತು ಉತ್ತರ ನೀಡಲು ಮುಂದಾಗುತ್ತಿದ್ದಂತೆಯೇ ಅವರ ಬೆಂಬಲಕ್ಕೆ ನಿಂತ ಸಚಿವರಾದ ಕೋಟಾಶ್ರೀನಿವಾಸಪೂಜಾರಿ, ಆರ್. ಅಶೋಕ್, ಅರಗಜ್ಞಾನೇಂದ್ರ ಸೇರಿದಂತೆ ಆಡಳಿತರೂಢಾ ಹಲವು ಸದಸ್ಯರು ಪ್ರತಿ ಆಕ್ಷೇಪಿಸಿದರು.ಈ ಆಕ್ಷೇಪಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ, ವಾಗ್ದಾಳಿ ನಡೆಸಿದರು.ಇದರಿಂದ ಆರೋಪ-ಪ್ರತ್ಯಾರೋಪ, ಧಿಕ್ಕಾರಗಳ ವಿನಿಮಯ ಯತೇಚ್ಛವಾಗಿ ನಡೆಯಿತು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಕಾಂಗ್ರೆಸ್ಗೆ ಪ್ರತ್ಯೇಕವಾದ ಕಾನೂನು ಇಲ್ಲ. ಎಲ್ಲರಿಗೂ ಒಂದೇ ಕಾನೂನು ಎಂದರು.ಅದಕ್ಕೆ ಹರಿಪ್ರಸಾದ್ ಆಕ್ಷೇಪಿಸಿ, ಕಾನೂನು ಎಲ್ಲರಿಗೂ ಒಂದೇ. ಬಿಜೆಪಿ ಸದಸ್ಯರು ಪೋಸ್ಟರ್ ಹಾಕಿದ್ದರೂ ಅವರನ್ನು ಯಾಕೆ ಬಂಧಿಸಿಲ್ಲ. ಕಾನೂನು ಒಂದೆಯಾದರೆ ಅವರನ್ನು ಬಂಧಿಸಿ, ತಾರತಮ್ಯ ಯಾಕೆ ಮಾಡುತ್ತಿರೀ ಎಂದು ಆಗ್ರಹಿಸಿದರು.

ನಿಮಗೆ ಧಮ್ಮು, ತಾಕತ್ತು ಇದ್ದರೆ ಪೋಸ್ಟರ್ ಹಾಕಿರುವ ಬಿಜೆಪಿಯವರನ್ನು ಬಂಧಿಸಿ, ಹೇಡಿಗಳು, ರಣಹೇಡಿಗಳು, ಸಿಬಿಐ, ಆದಾಯ ತೆರಿಗೆ ಸೇರಿದಂತೆ ಇನ್ನಿತರೆ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ. ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ನೀವೇನು ಧೀರರಾ, ಶೂರರಾ. ಒಬ್ಬರಿಗೊಂದು, ಮತ್ತೊಬ್ಬರಿಗೊಂದು ಮಾಡುತ್ತೀರಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಆಗ ಆಡಳಿತ ಪಕ್ಷದ ಸದಸ್ಯರು ಭ್ರಷ್ಟಾಚಾರಕ್ಕೆ ನೀವೇ ಕಾರಣ(ಕಾಂಗ್ರೆಸ್) ನಿಮಗೆ ಧಿಕ್ಕಾರ ಎಂದು ಏರಿದ ಧ್ವನಿಯಲ್ಲಿ ಘೋಷಣೆಗಳನ್ನು ಕೂಗಿದರು.ಸದನದ ಬಾವಿಯಲ್ಲಿದ್ದ ಕಾಂಗ್ರೆಸ್ ಸದಸ್ಯರು ನಿಮ್ಮದು ಶೇ. ೪೦ ಪರ್ಸೆಂಟ್ ಸರ್ಕಾರ ಎಂದು ಪ್ರತಿಯಾಗಿ ಧಿಕ್ಕಾರ, ಘೋಷಣೆ ಕೂಗುತ್ತಿದ್ದಂತೆಯೇ ಆರೋಪ-ಪ್ರತ್ಯಾರೋಪ ನಡೆಯಿತು.

ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಯಾರು, ಏನು ಮಾತನಾಡುತ್ತಿದ್ದಾರೆ ಎನ್ನುವುದೇ ಕೇಳದ ಪರಿಸ್ಥಿತಿ ನಿರ್ಮಾಣವಾಗಿತ್ತು.ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅವರು, ವಿರೋಧ ಪಕ್ಷದ ನಾಯಕರೇ ನೀವೇನಾದರೂ ಹೇಳುವುದಿದ್ದರೆ ನೋಟಿಸ್ ಕೊಡಿ. ತಾವು ಚರ್ಚೆಗೆ ಅನುವು ಮಾಡಿಕೊಡುವುದಾಗಿ ಹೇಳಿದರು.

ಅದಕ್ಕೆ ಹರಿಪ್ರಸಾದ್, ನಿನ್ನೆ ಬಿಜೆಪಿ ಸದಸ್ಯರು ಏಕಾಏಕಿ ವಿಷಯ ಪ್ರಸ್ತಾಪಿಸಿ ಗದ್ದಲ ಮಾಡಿದ್ದಾಗ ಅವರು ನೋಟಿಸ್ ಕೊಟ್ಟಿದ್ದರೇ, ನಮಗೆ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಸಭಾಪತಿಗಳಿಗೆ ಮನವಿ ಮಾಡಿದರು.

ಈ ಹಂತದಲ್ಲಿ ಆಡಳಿತ ಪಕ್ಷದ ಹಲವು ಸದಸ್ಯರು ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಿ ಎಂದು ಸಭಾಪತಿಗಳಿಗೆ ಮತ್ತೆ ಮತ್ತೇ ಮನವಿ ಮಾಡಿದರು.ಕಂದಾಯ ಸಚಿವ ಆರ್ ಅಶೋಕ್ ಮಧ್ಯ ಪ್ರವೇಶಿಸಿ, ಏಕಪಕ್ಷೀಯವಾಗಿಯೇನೂ ನಡೆದುಕೊಳ್ಳುತ್ತಿಲ್ಲ. ಕಾನೂನು ಪ್ರಕಾರವೇ ನಡೆದುಕೊಳ್ಳುತ್ತೇವೆ ಎಂದರು.ಇದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮತ್ತೆ ಮಾತಿನ ಚಕಮಕಿ, ಗಲಾಟೆ, ಗದ್ದಲ ನಡೆದಿದ್ದರಿಂದ ಕಲಾಪವನ್ನು ಸುಗಮ ರೀತಿಯಲ್ಲಿ ತರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಭಾಪತಿ ರಘುನಾಥ್ ರಾಮ್ ಮಲ್ಕಾಪುರೆ ಅವರು ಕೆಲ ಕಾಲ ಮುಂದೂಡಿದರು.ಕಲಾಪ ೧೧.೫೦ರ ವೇಳೆಗೆ ಆರಂಭವಾಗುತ್ತಿದ್ದಂತೆಯೇ ಈ ಹಂತದಲ್ಲಿ ಎದ್ದು ನಿಂತ ಜೆಡಿಎಸ್ ನಾಯಕ ಎಸ್.ಎಲ್. ಬೋಜೇಗೌಡ, ಪೇಸಿಎಂ ಎಂದು ಹಾಕಿರುವುದು ತಪ್ಪು, ಅದೇ ರೀತಿ ಸಿದ್ಧಱಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ವಿರುದ್ಧವೂ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ಗಂಭೀರ ವಿಷಯ. ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರ ಮೇಲೆ ಕಿಡಿಗೇಡಿಗಳು ಈ ರೀತಿ ಮಾಡುವುದು ಸಲ್ಲದು. ಯಾರೇ ಮಾಡಿದ್ದರೂ ಕಾನೂನು ಒಂದೇ. ಅವರನ್ನು ಬಂಧಿಸಿ, ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಹಿಂದೂಸ್ತಾನ್ ಸಮಾಚಾರ್


 rajesh pande