ಟೀಕೆಗಳಿಗೆ ಸೆಂಚುರಿ ಮೂಲಕ ಉತ್ತರ ಕೊಟ್ಟ ರಿಷಭ್, ಸಾಥ್ ನೀಡಿದ ಜಡೇಜಾ!
ಬರ್ಮಿಂಗ್ ಹ್ಯಾಮ್, 2 ಜುಲೈ (ಹಿ.ಸ):ಆ್ಯಂಕರ್ : ಕಳೆದ ಕೆಲವು ತಿಂಗಳುಗಳಿಂದ ತಮ್ಮ ಮೇಲೆ ಬರುತ್ತಿದ್ದ ಸಾಲು ಸಾಲು
ಟೀಕೆಗಳಿಗೆ ಸೆಂಚುರಿ ಮೂಲಕ ಉತ್ತರ ಕೊಟ್ಟ ರಿಷಭ್, ಸಾಥ್ ನೀಡಿದ ಜಡೇಜಾ!


ಬರ್ಮಿಂಗ್ ಹ್ಯಾಮ್, 2 ಜುಲೈ (ಹಿ.ಸ):ಆ್ಯಂಕರ್

: ಕಳೆದ ಕೆಲವು ತಿಂಗಳುಗಳಿಂದ ತಮ್ಮ ಮೇಲೆ ಬರುತ್ತಿದ್ದ ಸಾಲು ಸಾಲು ಟೀಕೆಗಳಿಗೆ ದಿಟ್ಟ ಬ್ಯಾಟಿಂಗ್ ಮೂಲಕ ಉತ್ತರ ನೀಡಿದ ರಿಷಭ್ ಪಂತ್ (146 ರನ್, 111 ಎಸೆತ, 20 ಬೌಂಡರಿ, 6 ಸಿಕ್ಸರ್), ಆತಿಥೇಯ ಇಂಗ್ಲೆಂಡ್ ವಿರುದ್ಧದ ಮರುನಿಗದಿಯಾದ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಅಬ್ಬರಿಸಿದ್ದಾರೆ. ಇವರಿಗೆ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜಾ ಆಕರ್ಷಕ ಅರ್ಧಶತಕ ಸಿಡಿಸಿದರು.

ಎಜ್ ಬಾಸ್ಟನ್ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ನಾಯಕ ಜಸ್ಪ್ರೀತ್ ಬುಮ್ರಾ ತಮ್ಮ ಮೊದಲ ಟೆಸ್ಟ್ನಲ್ಲಿಯೇ ಟಾಸ್ ಸೋಲು ಕಂಡರು. ಮೊದಲು ಬ್ಯಾಟಿಂಗ್ ಆರಂಭಿಸಿದ ತಂಡ ಒಂದು ಹಂತದಲ್ಲಿ 98 ರನ್ಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಈ ಹಂತದಲ್ಲಿ ಜೊತೆಯಾದ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ದಾಖಲೆಯ ಜೊತೆಯಾಟವಾಡುವ ಮೂಲಕ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 73 ಓವರ್ ಗಳಲ್ಲಿ 7 ವಿಕೆಟ್ಗೆ 338 ರನ್ ಪೇರಿಸಿತು. 83 ರನ್ ಬಾರಿಸಿರುವ ರವೀಂದ್ರ ಜಡೇಜಾ ಹಾಗೂ 11 ಎಸೆತ ಎದುರಿಸಿರುವ ಮೊಹಮದ್ ಶಮಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

6ನೇ ವಿಕೆಟ್ಗೆ ದಾಖಲೆಯ 222 ರನ್ಗಳ ದಾಖಲೆಯ ಜೊತೆಯಾಟವನ್ನು ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಆಡಿದರು. ಇದು ವಿದೇಶದ ನೆಲದಲ್ಲಿ 6ನೇ ವಿಕೆಟ್ಗೆ ಭಾರತದ ಜಂಟಿ ಗರಿಷ್ಠ ರನ್ ಜೊತೆಯಾಟವಾಗಿದೆ. ಇದಕ್ಕೂ ಮುನ್ನ 1997 ರಲ್ಲಿ ಸಚಿನ್ ತೆಂಡುಲ್ಕರ್ ಹಾಗೂ ಮೊಹಮದ್ ಅಜರುದ್ದೀನ್ 6ನೇ ವಿಕೆಟ್ಗೆ ಇಷ್ಟೇ ರನ್ಗಳ ಮೊತ್ತದ ಜೊತೆಯಾಟವಾಡಿದ್ದರು. ಅದಲ್ಲದೆ, ಇಂಗ್ಲೆಂಡ್ ನೆಲದಲ್ಲಿ 6ನೇ ವಿಕೆಟ್ಗೆ ಭಾರತದ ಗರಿಷ್ಠ ರನ್ ಜೊತೆಯಾಟ ಎನಿಸಿದೆ. ಇದಕ್ಕೂ ಮುನ್ನ 2018ರಲ್ಲಿ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಓವಲ್ ಟೆಸ್ಟ್ ಪಂದ್ಯದಲ್ಲಿ 204 ರನ್ಗಳ ಜೊತೆಯಾಟವಾಡಿದ್ದರು. ಎದುರಿಸಿದ ಮೊದಲ ಎಸೆತಗಳಿಂದಲೂ ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿದ ರಿಷಭ್ ಪಂತ್, ಇಂಗ್ಲೆಂಡ್ನ ಅಗ್ರ ಬೌಲರ್ಗಳೆಲ್ಲರನ್ನೂ ದಯನೀಯವಾಗಿ ದಂಡಿಸಿದರು. ಅದರಲ್ಲೂ ಅನುಭವಿ ಅಂಡರ್ಸನ್ ಎಸೆತಗಳಲ್ಲಿ ಸಲೀಸಾಗಿ ಬೌಂಡರಿ ಬಾರಿಸುತ್ತಿದ್ದದ್ದು ಸ್ವತಃ ಇಂಗ್ಲೆಂಡ್ ವೇಗಿಗೆ ಅಚ್ಚರಿ ಉಂಟು ಮಾಡಿತ್ತು.

ಹಿಂದೂಸ್ತಾನ್ ಸಮಾಚಾರ್


 rajesh pande