ದೆಹಲಿ, 30 ಜೂನ್ (ಹಿ.ಸ):ಆ್ಯಂಕರ್ :ಪ್ರಾಥಮಿಕ ಕೃಷಿ ಸಾಲ ಸಂಸ್ಥೆ-ಪಿಎಸಿಎಸ್ಗಳನ್ನು ಕಂಪ್ಯೂಟರೀಕರಣಗೊಳಿಸಲು ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ಸಚಿವ ಸಂಪುಟ ಸಭೆಯ ನಂತರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾರ್ತಾ ಹಾಗೂ ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್, ೬೩ ಸಾವಿರ ಪಿಎಸಿಎಸ್ಗಳನ್ನು ಕಂಪ್ಯೂಟರೀಕರಣಗೊಳಿಸಲು ಹಣಕಾಸು ವ್ಯವಹಾರಗಳ ಕುರಿತು ಸಂಪುಟ ಸಮಿತಿ-ಸಿಸಿಇಎ ನಿರ್ಧರಿಸಿದೆ ಎಂದು ಹೇಳಿದರು. ಕಂಪ್ಯೂಟರೀಕರಣಗೊಳಿಸಲು ೨ ಸಾವಿರದ ೫೧೬ ಕೋಟಿ ರೂಪಾಯಿ ವೆಚ್ಚ ತಗುಲಲಿದೆ. ಇದರಿಂದ ೧೩ ಕೋಟಿ ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು. ದೇಶದಲ್ಲಿ ೩ ಹಂತದ ಅಲ್ಪಕಾಲಾವಧಿಯ ಸಾಲ-ಸೌಲಭ್ಯ ಕಲ್ಪಿಸುವ ಸಂಸ್ಥೆಗಳಿದ್ದು, ಇವು ಪಿಎಸಿಎಸ್ ವ್ಯಾಪ್ತಿಗೊಳಪಟ್ಟಿವೆ. ಇವುಗಳಲ್ಲಿ ಸುಮಾರು ೧೩ ಕೋಟಿ ರೈತರು ಸದಸ್ಯರಾಗಿದ್ದು, ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಅವರು ಹೇಳಿದರು. ಪಿಎಸಿಎಸ್ಗಳಲ್ಲಿ ಶೇಕಡ ೪೧ರಷ್ಟು ಕಿಸಾನ್ ಕ್ರೆಡಿಟ್ ಕಾರ್ಡುದಾರರು ಸಾಲ ಸೌಲಭ್ಯ ಪಡೆದಿದ್ದಾರೆ. ಈ ಸಂಸ್ಥೆಗಳ ಮೂಲಕ ಶೇಕಡ ೯೫ರಷ್ಟು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಗಳನ್ನು ಸಣ್ಣ ಮತ್ತು ಅತಿಸಣ್ಣ ರೈತರು ಪಡೆದಿದ್ದಾರೆ. ಇನ್ನುಳಿದ ಎರಡು ಹಂತದ ಸಂಸ್ಥೆಗಳಾದ ರಾಜ್ಯ ಸಹಕಾರಿ ಬ್ಯಾಂಕುಗಳು ಮತ್ತು ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು ನಬಾರ್ಡ್ ವ್ಯಾಪ್ತಿಗೆ ಒಳಪಟ್ಟಿದ್ದು, ಇವುಗಳಲ್ಲಿ ಕಾಮನ್ ಬ್ಯಾಂಕಿಂಗ್ ಸಾಫ್ಟ್ವೇರ್ ಸೌಲಭ್ಯ ಈಗಾಗಲೇ ಚಾಲ್ತಿಯಲ್ಲಿವೆ ಎಂದು ತಿಳಿಸಿದ್ದಾರೆ. ದೇಶೀಯವಾಗಿ ಉತ್ಪಾದಿಸಿದ ಅಡುಗೆ ಎಣ್ಣೆ ಮೇಲಿನ ನಿಯಂತ್ರಣವನ್ನು ತೆಗೆದು ಹಾಕಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ. ಈ ನಿರ್ಧಾರದಿಂದ ಅಡುಗೆ ಎಣ್ಣೆ ತಯಾರಕರು ಮುಕ್ತವಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್