Custom Heading

ಕೃಷಿಗೂ ಕಾಲಿಟ್ಟ ಡ್ರೋನ್..! ಕಳೆನಾಶಕ, ಔಷಧ ಸಿಂಪಡಣೆಗೆ ಸಮರ್ಥ ಬಳಕೆ..!
• ದೊಡ್ಡ ದೊಡ್ಡ ಸಭೆಗಳಲ್ಲಿ ದೃಶ್ಯ ಚಿತ್ರೀಕರಿಸಲು ಹಾಗೂ ಭದ್ರತೆಗೆ ಬಳಸುವ ಸಾಧನವಾಗಿದ್ದ ಈ ಡ್ರೋನ್, ಈಗ ರೈತರ ಹೊಲ ಗ
ಕೃಷಿಗೂ ಕಾಲಿಟ್ಟ ಡ್ರೋನ್


• ದೊಡ್ಡ ದೊಡ್ಡ ಸಭೆಗಳಲ್ಲಿ ದೃಶ್ಯ ಚಿತ್ರೀಕರಿಸಲು ಹಾಗೂ ಭದ್ರತೆಗೆ ಬಳಸುವ ಸಾಧನವಾಗಿದ್ದ ಈ ಡ್ರೋನ್, ಈಗ ರೈತರ ಹೊಲ ಗದ್ದೆಗಳ ಮೇಲೆ ಹಾರಾಡುತ್ತಾ ರಾಸಾಯನಿಕ ಸಿಂಪಡಿಸುತ್ತಿದೆ.

• ಕಾರ್ಮಿಕರ ಕೊರತೆ, ಸಮಯದ ಅಭಾವ ಹಿನ್ನೆಲೆಯಲ್ಲಿ ಇತ್ತೀಚೆಗೆ ರೈತರು ಡ್ರೋನ್ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಹಲವೆಡೆ ಪ್ರಾತ್ಯಕ್ಷಿಕೆಯನ್ನೂ ನಡೆಸಲಾಗಿದೆ'

• ಕೃಷಿ ಚಟುವಟಿಕೆಗಳಿಗೆ ಕೂಲಿ ಕೆಲಸಗಾರರ ಅವಲಂಬನೆ ಕಡಿಮೆ ಮಾಡಲು ಹಾಗೂ ಕೃಷಿ ಕ್ಷೇತ್ರದಲ್ಲಿಯೂ ಹೊಸ ಆವಿಷ್ಕಾರಗಳನ್ನು ಬಳಸುವ ಸಲುವಾಗಿ ನಬಾರ್ಡ್ ಸಹಯೋಗದಿಂದ ರೈತರು ನೂತನ ಇಸ್ರೇಲ್ ಮಾದರಿ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದಾರೆ.

ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ): ಭದ್ರತೆ ಕಾರ್ಯಕ್ಕೆ ಬಳಸುತ್ತಿದ್ದ ಡ್ರೋಣ್ ಕ್ಯಾಮೆರಾವನ್ನು ಇದೀಗಾ ಡ್ರೋಣ್ ತಂತ್ರಜ್ಞಾನದ ಸಹಾಯದ ಮೂಲಕ ಬೆಳೆಗಳಿಗೆ ಔಷಧಿ ಸಿಂಪಡಿಸುವ ಹೊಸ ವಿಧಾನವನ್ನು ರಾಜ್ಯದ ಹಲವು ಕಡೆಗಳಲ್ಲಿ ಪರಿಚಯಿಸಲಾಗಿದೆ.ಆ ಮೂಲಕ ಔಷಧ ಸಿಂಪರಣೆಗೆ ವೈಜ್ಞಾನಿಕ ರೂಪ ದೊರತಿದೆ.

ರಾಜ್ಯದ ರಾಯಚೂರು, ಮೈಸೂರು, ಚಾಮರಾಜನಗರ, ತುಮಕೂರು ಸೇರಿದಂತೆ ಹಲವು ಕಡೆಗಳಲ್ಲಿ ಗ್ರಾಮಗಳ ಕೃಷಿ ವಿಜ್ಞಾನ ಕೇಂದ್ರದಲ್ಲಿ ಚೆನ್ನೈ ಮೂಲದ ಗರುಡ ಏರೋಸ್ಪೇಸ್ ಎಂಬ ಖಾಸಗಿ ಕಂಪನಿ, ಡ್ರೋಣ್ ಮೂಲಕ ಔಷಧಿ ಸಿಂಪಡಿಸುವ ಪ್ರಾತ್ಯಕ್ಷಿಕೆಯನ್ನು ರಸಗೊಬ್ಬರ ವ್ಯಾಪಾರಿಗಳು ಮತ್ತು ರೈತರಿಗೆ ಪರಿಚಯ ಮಾಡಿಕೊಟ್ಟಿದೆ. ಈ ಬಗ್ಗೆ ಒಂದು ವರದಿ.

ಕಳೆದ ಒಂದು ದಶಕದಿಂದ ರಕ್ಷಣಾ ಕ್ಷೇತ್ರ, ಮದುವೆ, ಅದ್ಧೂರಿ ಕಾರ್ಯಕ್ರಮಗಳು, ದೊಡ್ಡ ಸಮಾವೇಶಗಳು ಮತ್ತು ಸಿನಿಮಾಗಳಲ್ಲಿ ಮಾತ್ರ ಡ್ರೋನ್ಗಳನ್ನು ಬಳಕೆ ಮಾಡಲಾಗುತ್ತಿದೆ. ಮುಂದುವರಿದ ದೇಶಗಳಲ್ಲಿ ಕೃಷಿ ಮತ್ತು ತೋಟಗಾರಿಕೆಯಲ್ಲಿ ಡ್ರೋನ್ ಬಳಕೆ ಈಗಾಗಲೇ ಚಾಲ್ತಿಯಲ್ಲಿದೆ. ಡ್ರೋನ್ಗಳ ಮೂಲಕ ಕಳೆನಾಶಕ, ಔಷಧ ಸಿಂಪಡಣೆ ಮಾಡುವುದರಿಂದ ರೋಗ ನಿಯಂತ್ರಿಸಬಹುದು ಎಂಬುದನ್ನು ಅಭಿವೃದ್ಧಿ ಹೊಂದಿದ ದೇಶಗಳು ಈಗಾಗಲೇ ಸಾಬೀತುಪಡಿಸಿವೆ.

ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿದ್ದರೂ ಔಷಧ ಸಿಂಪರಣೆ ಮಾತ್ರ ಬಹುತೇಕ ಕಡೆ ಇನ್ನೂ ಹಳೆಯ ಪದ್ಧತಿಯಲ್ಲೇ ಮುನ್ನಡೆಯುತ್ತಿದೆ. ಈ ಪದ್ಧತಿಯಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಜೊತೆಗೆ ಕೂಲಿಯಾಳುಗಳ ಕೊರತೆ ಮತ್ತು ಹೆಚ್ಚಿನ ಕೂಲಿ ನೀಡಬೇಕಾಗಿದ್ದು, ಇದರಿಂದ ಮುಕ್ತಿಗೊಳಿಸುವ ಸಲುವಾಗಿ ಡ್ರೋಣ್ ಮೂಲಕ ಹೊಲಕ್ಕೆ ಔಷಧಿ ಸಿಂಪಡಿಸುವ ಹೊಸ ತಂತ್ರಜ್ಞಾನ ರೈತರಿಗೆ ವರದಾನವಾಗಲಿದೆ. ಡ್ರೋಣ್' ಬಳಸಿ ಕೀಟನಾಶಕವನ್ನು ನಾನಾ ಬೆಳೆಗಳ ಮೇಲೆ ಸಿಂಪಡಣೆ ಮಾಡಬಹುದಾಗಿದೆ ಎಂದು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಲಾಯಿತು.

ಡ್ರೋಣ್ ಅನ್ನು ಒಮ್ಮೆ ಸೆಟ್ ಮಾಡಿ ಬಿಟ್ಟರೆ ಇಡೀ ಹೊಲಕ್ಕೆ ತಾನೇ ಔಷಧ ಸಿಂಪಡಿಸಿಕೊಂಡು ಬರುತ್ತದೆ. ರಿಮೋಟ್ ಕಂಟ್ರೋಲ್ ಮೂಲಕ ಅದನ್ನು ನಿಯಂತ್ರಿಸಬಹುದಾಗಿದೆ. ಭತ್ತ, ಕಡಲೆ, ತೊಗರಿ ಮಾತ್ರವಲ್ಲದೆ ತೋಟಗಾರಿಕೆ ಬೆಳೆಗಳಾದ ನಿಂಬೆ, ಮಾವು, ಸಪೋಟ ಸೇರಿ ಎತ್ತರದ ಮರಗಳಿಗೂ ಸುಲಭವಾಗಿ ಕ್ರಿಮಿನಾಶಕ ಸಿಂಪಡಿಸಬಹುದು.

ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಹಲವು ಕೃಷಿ ಅಧಿಕಾರಿಗಳು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿ, ೧೦ ಹಾಗೂ ೨೦ ಲೀಟರ್ ಸಾಮರ್ಥ್ಯದ ಟ್ಯಾಂಕ್ ಅನ್ನು ಈ ಡ್ರೋಣ್ ಹೊಂದಿದ್ದು,ಬೆಳೆ ಬೆಳೆಯಲು ತಗಲುವ ವೆಚ್ಚದಲ್ಲಿ ಶೇ.50ರಷ್ಟು ಹಣ ಕ್ರಿಮಿನಾಶಕ ಸಿಂಪರಣೆಗಾಗಿ ಖರ್ಚಾಗುತ್ತಿದೆ. ಜೊತೆಗೆ ಕೃಷಿನಾಶಕ ಸಿಂಪರಣೆ ವೇಳೆ ಸೂಕ್ತ ಸುರಕ್ಷತೆ ಕ್ರಮ ಕೈಗೊಳ್ಳದೆ ಕೃಷಿಕಾರ್ಮಿಕರು ನಾನಾ ಅನಾಹುತಗಳು ಸಂಭವಿಸುತ್ತಿವೆ. ಈ ಹೊಸ ಡ್ರೋಣ್ ಬಳಸುವುದರಿಂದ ರೈತರಿಗೆ, ಅಧಿಕ ವೆಚ್ಚ, ಕೃಷಿ ಕಾರ್ಮಿಕರ ಅಭಾವ ನೀಗುವುದಲ್ಲದೆ, ಸಮಯವೂ ಉಳಿತಾಯವಾಗಲಿದೆ . ಕೃಷಿ ಯಂತ್ರಧಾರೆ ಯೋಜನೆಯಡಿ ಸರ್ಕಾರ ಡ್ರೋಣ್ ಯಂತ್ರವನ್ನು ಇಲಾಖೆಗೆ ಒದಗಿಸಿದರೆ, ರೈತರಿಗೆ ಬಾಡಿಗೆ ನೀಡಲಾಗುವುದು ಎಂದರು.

ಹಿಂದೂಸ್ತಾನ್ ಸಮಾಚಾರ್


 rajesh pande