ನಾಲ್ಕು ಗುಂಟೆ ಜಮೀನಿನಲ್ಲಿ 265 ಬಗೆಯ ಪಾರಂಪರಿಕ ತಳಿಯ ಭತ್ತ ಬೆಳೆದ ಶಿರಸಿ ರೈತ
ಶಿರಸಿ, 14 ಸೆಪ್ಟೆಂಬರ್ (ಹಿ.ಸ): ವಿಭಿನ್ನ ತಳಿಯ ಭತ್ತವನ್ನು ಹಿಂದಿನ ಕಾಲದಲ್ಲಿ ಬೆಳೆಯುತ್ತಿದ್ದರು. ಆದರೆ, ಇತ್ತೀಚಿನ
ಪಾರಂಪರಿಕ ತಳಿಯ ಭತ್


ಶಿರಸಿ, 14 ಸೆಪ್ಟೆಂಬರ್ (ಹಿ.ಸ): ವಿಭಿನ್ನ ತಳಿಯ ಭತ್ತವನ್ನು ಹಿಂದಿನ ಕಾಲದಲ್ಲಿ ಬೆಳೆಯುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವೇ ಕೆಲ ತಳಿಯನ್ನು ಮಾತ್ರ ಬೆಳೆಯುತ್ತಿದ್ದಾರೆ. ಹೀಗಾಗಿ ಪಾರಂಪರಿಕ ತಳಿಗಳನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರೈತರೊಬ್ಬರು ಕೇವಲ ನಾಲ್ಕು ಗುಂಟೆ ಜಮೀನಿನಲ್ಲಿ ಬರೋಬ್ಬರಿ 265 ತಳಿಯ ಭತ್ತವನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.

ತಾಲೂಕಿನ ದೇವತೆಮನೆ ಗ್ರಾಮದ ರಾಮಕೃಷ್ಣ ಭಟ್ ತಮ್ಮ ನಾಲ್ಕು ಗುಂಟೆ ಜಮೀನಿನಲ್ಲಿ ಭತ್ತದ ತಳಿಗಳ ಪ್ರಯೋಗ ಶಾಲೆಯನ್ನೇ ತೆರೆದಿದ್ದು, ಸುಮಾರು 265 ಬಗೆಯ ಪಾರಂಪರಿಕ ತಳಿಯ ಭತ್ತಗಳನ್ನು ಬೆಳೆಸಿದ್ದಾರೆ.

ಪ್ರತಿ ತಳಿಯ ಸಸಿಗಳಿಗೆ ಪ್ರತ್ಯೇಕ ಸಂಖ್ಯೆ ನೀಡಿ ಅವುಗಳ ಪಕ್ಕ ಅಂಟಿಸಿಡುತ್ತಾರೆ. ಈ ಸಂಖ್ಯೆ ಆಧರಿಸಿ ನೋಂದಣಿ ಪುಸ್ತಕದಲ್ಲಿ ಮಾಹಿತಿ ದಾಖಲಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ 200 ಭತ್ತ ತಳಿಗಳ ಮಾಹಿತಿ ಸದ್ಯಕ್ಕೆ ಲಭ್ಯವಿದೆ. 65 ತಳಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.

ಗದ್ದೆಯಲ್ಲಿ ಕಳವೆ, ಮಟ್ಟಳಗ, ಹೊನ್ನಕಟ್ಟು, ಜೇನುಗೂಡು, ಗೌಡರ ಭತ್ತ, ದೊಡ್ಡ ಭತ್ತ, ಜಿಗ್ಗ ವರಟಿಗ, ನೀರ ಮುಳುಗ, ಕರಿ ಕಂಟಕ, ಲಿಂಬೆ ಮೊಹರಿ ಸೇರಿದಂತೆ ಹಲವು ಸ್ಥಳೀಯ ತಳಿಯ ಮತ್ತು ನೇಪಾಳ, ಥಾಯ್ಲೆಂಡ್ ಭಾಗದಲ್ಲಿ ಬೆಳೆಯುವ ವಿದೇಶಿ ತಳಿಯ ಭತ್ತವೂ ಸಹ ಇವೆ.

ಭತ್ತವನ್ನು ಬೆಳೆಯುವ ರೈತರು ಹಾಗೂ ಇರುವ ಭತ್ತದ ಗದ್ದೆಗಳನ್ನು ತೆಗೆದು ಕೆಲ ಲಾಭದಾಯಕ ಬೆಳೆಯ ತೋಟಗಳನ್ನು ಮಾಡುವವರ ನಡುವೆ ಲಾಭದಾಯಕ ಅಲ್ಲದೇ ಹೋದರೂ ಪಾರಂಪರಿಕ ತಳಿಗಳನ್ನು ಉಳಿಸಬೇಕು ಎನ್ನುವ ಉದ್ದೇಶದಿಂದ ಭತ್ತ ಬೆಳೆಯುತ್ತಿರುವುದು ಶ್ಲಾಘನೀಯ ಎನ್ನುವುದು ಕೃಷಿ ವಿಜ್ಞಾನ ಕೇಂದ್ರದ ಮಾತಾಗಿದೆ.

ಇದೇ ಕಾರಣಕ್ಕಾಗಿ ಇವರಿಗೆ ಈ ಹಿಂದೆ ಕೃಷಿ ಮೇಳದಲ್ಲಿ ಇನ್ನೊವೇಟಿವ್ ಫಾರ್ಮರ್ ಅವಾರ್ಡ್ ಸಹ ನೀಡಲಾಗಿದೆ. ಕೃಷಿಯನ್ನು ಕೇವಲ ಲಾಭದ ದೃಷ್ಟಿಯಲ್ಲಿ ನೋಡುವವರ ನಡುವೆ ರಾಮಕೃಷ್ಣ ಭಟ್ ಅವರ ಕಾರ್ಯ ಮಾದರಿಯಾಗಿದೆ.

ಹಿಂದೂಸ್ತಾನ್ ಸಮಾಚಾರ್.ಎಂ.ಎಸ್.ಯ.ಮ


 rajesh pande