ನಟ ಸುದೀಪ್ ಹೆಸರಲ್ಲಿ ಕುರಕುಂದಲ್ಲಿ ದೇವಸ್ಥಾನ ; ಮುಂದಿನ ಹುಟ್ಟುಹಬ್ಬಕ್ಕೆ ಅವರಿಂದಲೇ ಉದ್ಘಾಟನೆ
ರಾಯಚೂರು, 30 ನವೆಂಬರ್ (ಹಿ.ಸ): ಚಲನಚಿತ್ರ ನಟರನ್ನು ಆರಾಧಿಸುವುದು ಸಹಜ. ಅಷ್ಟೇ ಅಲ್ಲ, ಚಿತ್ರನಟ - ನಟಿಯರ ಹೆಸರಿನಲ್ಲ
ನಟ ಸುದೀಪ್ ಹೆಸರಲ್ಲಿ ಕುರಕುಂದಲ್ಲಿ ದೇವಸ್ಥಾನ ; ಮುಂದಿನ ಹುಟ್ಟುಹಬ್ಬಕ್ಕೆ ಅವರಿಂದಲೇ ಉದ್ಘಾಟನೆ


ರಾಯಚೂರು, 30 ನವೆಂಬರ್ (ಹಿ.ಸ):

ಚಲನಚಿತ್ರ ನಟರನ್ನು ಆರಾಧಿಸುವುದು ಸಹಜ. ಅಷ್ಟೇ ಅಲ್ಲ, ಚಿತ್ರನಟ - ನಟಿಯರ ಹೆಸರಿನಲ್ಲಿ ಹೊಸ ಸಿನಿಮಾ ಪ್ರದರ್ಶನದ ದಿನದಂದು ಹಲವಾರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವುದು ಸಹಜ.

ಆದರೆ, ರಾಯಚೂರು ಜಿಲ್ಲೆಯ ಸಿರಿವಾರ ಸಮೀಪದ ಕುರಕುಂದಲ್ಲಿ ಗ್ರಾಮಸ್ಥರು ಹಣ ಸಂಗ್ರಹ ಮಾಡಿ ತಮ್ಮ ನೆಚ್ಚಿನ ಚಿತ್ರನಟನಾದ ಕಿಚ್ಚ ಸುದೀಪ್ನ ದೇವಾಲಯವನ್ನು ನಿರ್ಮಾಣ ಮಾಡಿ, ನಿತ್ಯ ಪೂಜೆ ಆರಂಭಿಸುವ ಸಂಕಲ್ಪ ಮಾಡಿರುವ ಅಭಿಮಾನಿಗಳೂ ಇದ್ದಾರೆ. ಈ ದೇವಸ್ಥಾನದ ನಿರ್ಮಾಣಕ್ಕಾಗಿ ಗ್ರಾಮದ ಶರಣಬಸವ ಅವರು ಭೂಮಿಯನ್ನು ಉಚಿತವಾಗಿ ನೀಡಿ ಅನೇಕರ ಮೆಚ್ಚುಗೆ ಪಡೆದಿದ್ದಾರೆ.

ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಾಲ್ಕೂವರೆ ಅಡಿ ಎತ್ತರದ ಬಂಗಾರದ ಬಣ್ಣದ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ಸಿದ್ಧಪಡಿಸಿರುವ ಅವರ ಅಭಿಮಾನಿಗಳು ಅವರಿಗಾಗಿ ದೇವಾಲಯವನ್ನೂ ನಿರ್ಮಾಣ ಮಾಡುತ್ತಿದ್ದಾರೆ.

ಕಿಚ್ಚ ಸುದೀಪ್ ಅವರು `ಮೊದಲು ಮಾನವನಾಗು' ಎಂಬ ಸಂಘಟನೆ ಹುಟ್ಟುಹಾಕಿ ಆ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದರಂತೆ ಅವರ ಅಭಿಮಾನಿಗಳು ಕೂಡ ಸ್ವಯಂ ಪ್ರೇರಿತರಾಗಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ವಿಶೇಷ.

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕುರಕುಂದ ಗ್ರಾಮದಲ್ಲಿ ಸುದೀಪ್ ಅವರ ದೇವಾಲಯ ನಿರ್ಮಾಣ ಆಗುತ್ತಿದೆ. ಮುಂದಿನ ವರ್ಷ ಸುದೀಪ್ ಅವರ ಹುಟ್ಟುಹಬ್ಬದಂದೇ ಈ ದೇವಸ್ಥಾನವನ್ನು ಉದ್ಘಾಟಿಸಲು ಸುದೀಪ್ ಅವರನ್ನೇ ಆಹ್ವಾನಿಸಲು ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ.


 rajesh pande