ಸ್ಥಿರ ಸರ್ಕಾರ ಇದ್ದರೂ ಬಿಜೆಪಿಗೆ ಅಗ್ನಿಪರೀಕ್ಷೆಯಾದ ಉಪಸಮರ
27 ಅಕ್ಟೋಬರ್ (ಹಿ.ಸ): ಆ್ಯಂಕರ್ : ರಾಜ್ಯದಲ್ಲಿ ಸ್ಥಿರ ಸರ್ಕಾರಕ್ಕೆ ಬೇಕಾದ ಸಂಖ್ಯಾಬಲವನ್ನು ಬಿಜೆಪಿ ಹೊಂದಿದ್ದರೂ ಹಾನಗ
The ordeal of the ordeal for the BJP despite a stable government


27 ಅಕ್ಟೋಬರ್ (ಹಿ.ಸ): ಆ್ಯಂಕರ್ :

ರಾಜ್ಯದಲ್ಲಿ ಸ್ಥಿರ ಸರ್ಕಾರಕ್ಕೆ ಬೇಕಾದ ಸಂಖ್ಯಾಬಲವನ್ನು ಬಿಜೆಪಿ ಹೊಂದಿದ್ದರೂ ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳ ಉಪ ಚುನಾವಣೆ ಮಹತ್ವದ್ದಾಗಿದೆ. ಸರ್ಕಾರಕ್ಕೆ ಜನಮನ್ನಣೆ ಇದೆಯಾ? ಬಸವರಾಜ ಬೊಮ್ಮಾಯಿ ನಾಯಕತ್ವ ಗಟ್ಟಿಯಾಗಿದೆಯಾ ಎಂಬುದು ಉಪ ಕದನದ ಫಲಿತಾಂಶದಿಂದ ಸ್ಪಷ್ಟವಾಗಲಿದೆ. ಹೀಗಾಗಿ ಮೂರೂ ಪಕ್ಷಗಳು ಉಪ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಬಿರುಸಿನ ಪ್ರಚಾರದಲ್ಲಿ ನಿರತವಾಗಿವೆ.

ಮೈತ್ರಿ ಸರ್ಕಾರ ಪತನದ ನಂತರ 105 ಸಂಖ್ಯಾ ಬಲವಿದ್ದ ಬಿಜೆಪಿ, ಸರ್ಕಾರ ರಚನೆ ಮಾಡಿ ನಂತರ ನಡೆದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ 12 ಸ್ಥಾನ ಗೆದ್ದು, ಅಗತ್ಯ ಬಹುಮತ ಪಡೆದುಕೊಳ್ಳುವಲ್ಲಿ ಸಫಲವಾಗಿತ್ತು. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ನಂತರ ನಡೆದ ಚುನಾವಣೆಯಲ್ಲಿ ಆರ್.ಆರ್.ನಗರ ಮತ್ತು ಶಿರಾ ಕ್ಷೇತ್ರಗಳೂ ಬಿಜೆಪಿ ಪಾಲಾದವು, ಮಸ್ಕಿ, ಬಸವ ಕಲ್ಯಾಣ ಕ್ಷೇತ್ರದ ಅಖಾಡದಲ್ಲಿ ಮಸ್ಕಿಯಲ್ಲಿ ಪರಾಭವಗೊಂಡರೂ ಕಲ್ಯಾಣದಲ್ಲಿ ಗೆದ್ದು ಬೀಗಿತು.

ಬೆಳಗಾವಿ ಲೋಕಸಭಾ ಕ್ಷೇತ್ರವನ್ನೂ ಉಪ ಸಮರದಲ್ಲಿ ಉಳಿಸಿಕೊಂಡಿತು. ಯಡಿಯೂರಪ್ಪ ನಾಯಕತ್ವದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಬಹುತೇಕ ಸ್ಥಾನಗಳನ್ನು ಗೆದ್ದಿದೆ. 20 ಕ್ಷೇತ್ರಗಳಿಗೆ ನಡೆದಿರುವ ಉಪಚುನಾವಣೆಯಲ್ಲಿ ಕೇವಲ 4 ಸ್ಥಾನಗಳಲ್ಲಿ ಮಾತ್ರ ಬಿಜೆಪಿ ಸೋತಿದೆ. ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿ ಬಿಜೆಪಿ ಸರ್ಕಾರ ಹಿಂಬಾಗಿಲ ಮೂಲಕ ಸರ್ಕಾರ ರಚಿಸಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ವಾಗ್ದಾಳಿ ನಡೆಸಿದ್ದರು.

ಇದಕ್ಕೆ ಉಪ ಸಮರದಲ್ಲಿ 15 ರಲ್ಲಿ 12 ಸ್ಥಾನ ಗೆದ್ದು ಯಡಿಯೂರಪ್ಪ ನೇತೃತ್ವದ ಸರ್ಕಾರ ತಕ್ಕ ಉತ್ತರ ನೀಡಿ ಬಹುಮತ ಮತ್ತು ಜನಾಶೀರ್ವಾದವಿದೆ ಎಂದು ಸಾಬೀತುಪಡಿಸಿತ್ತು. ಎರಡು ಕ್ಷೇತ್ರಗಳಲ್ಲಿ ಪ್ರಾಬಲ್ಯ ಮೆರದಿದ್ದ ಕೇಸರಿ ಪಡೆ ನಂತರ ನಡೆದ ಎರಡು ಕ್ಷೇತ್ರಗಳಲ್ಲಿ ಎರಡನ್ನೂ ತನ್ನ ತೆಕ್ಕೆಗೆ ಹಾಕಿಕೊಂಡು ಸರ್ಕಾರದ ವರ್ಷದ ಸಾಧನೆಗೆ ಜನ ಬೆಂಬಲವಿದೆ ಎಂದು ಘೋಷಿಸಿತ್ತು. ನಂತರ ನಡೆದ ಮಸ್ಕಿ, ಬಸವಕಲ್ಯಾಣದಲ್ಲಿ ಒಂದು ಸ್ಥಾನ ಸೋತರೂ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಫಲಿತಾಂಶವನ್ನೇ ಜನರು ನೀಡಿದ್ದರು.

ಕೋವಿಡ್ ಎದುರಿಸುವಲ್ಲಿ ಸರ್ಕಾರ ಸೋತಿಲ್ಲ ಎಂದು ಬಿಜೆಪಿ ಪ್ರತಿಪಾದಿಸಿತ್ತು. ಬಿಎಸ್ವೈ ಜÁಗದಲ್ಲಿ ಈಗ ಬೊಮ್ಮಾಯಿ ಇದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಿದೆ. ಯಡಿಯೂರಪ್ಪ ಸರ್ಕಾರದಲ್ಲಿ ಗೃಹ ಖಾತೆ ನಿರ್ವಹಿಸುತ್ತಿದ್ದ ಬಸವರಾಜ ಬೊಮ್ಮಾಯಿ ಈಗ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ನೂತನ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಉಪ ಚುನಾವಣೆ ಇದಾಗಿದೆ.

ಸರ್ಕಾರದ ಆಡಳಿತಕ್ಕೆ ಜನತೆ ನೀಡುವ ತೀರ್ಪು ಈ ಉಪಸಮರದ ಫಲಿತಾಂಶದಿಂದ ಗೊತ್ತಾಗಲಿದೆ. ಹಾಗಾಗಿ ಯಾವ ಕಾರಣಕ್ಕೂ ಉಪ ಚುನಾವಣೆಯಲ್ಲಿ ಹಿನ್ನಡೆಯಾಗಬಾರದು ಎಂದು ಆಡಳಿತಾರೂಢ ಪಕ್ಷ ಬಿಜೆಪಿ ಟೊಂಕ ಕಟ್ಟಿ ಪ್ರಚಾರದಲ್ಲಿ ನಿತರವಾಗಿದೆ.

ಬೊಮ್ಮಾಯಿಗೆ ಇದು ಅಗ್ನಿ ಪರೀಕ್ಷೆ:

2023ಕ್ಕೆ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಎದುರಾಗಲಿದ್ದು, ಅದಕ್ಕೆ ಮೊದಲು ನಡೆಯುತ್ತಿರುವ ಉಪಚುನಾವಣೆ ಒಂದು ರೀತಿಯಲ್ಲಿ ಪೂರ್ವ ಪರೀಕ್ಷೆಯಂತಿದೆ. ಮತದಾರರ ಒಲವು ಯಾವ ಕಡೆ ಇದೆ ಎನ್ನುವ ದಿಕ್ಸೂಚಿ ಈ ಉಪಸಮರದಲ್ಲಿ ಅನಾವರಣಗೊಳ್ಳಲಿದೆ. ಹಾಗಾಗಿ ಆಡಳಿತಾರೂಢ ಪಕ್ಷಕ್ಕೆ ಈ ಉಪಸಮರ ಬಹಳ ಮುಖ್ಯವಾಗಿದೆ. ಈಗಾಗಲೇ ಮುಂದಿನ ಚುನಾವಣೆಗೆ ಬಸವರಾಜ ಬೊಮ್ಮಾಯಿ ನಾಯಕತ್ವ ವಹಿಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದು, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಖಚಿತಪಡಿಸಿದ್ದಾರೆ.

ಈ ಹಿನ್ನಲೆಯಲ್ಲಿ ಬೊಮ್ಮಾಯಿ ನಾಯಕತ್ವಕ್ಕೆ ಎಷ್ಟರಮಟ್ಟಿಗೆ ಜನಬೆಂಬಲ ಇದೆ ಎನ್ನುವುದು ಈ ಉಪಸಮರದಲ್ಲಿ ಸ್ಪಷ್ಟವಾಗಲಿದೆ. ಬಿಜೆಪಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲಿಗೆ ಈ ಚುನಾವಣೆಯ ಗೆಲುವು ಅನಿವಾರ್ಯವಲ್ಲದೇ ಇದ್ದರೂ ಅತ್ಯಗತ್ಯವಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande