Custom Heading

ಭಕ್ತರ ಮೇಲಿನ ಸಿದ್ಧಾರೂಢರ ಪ್ರೀತಿ ಅವಳನ್ನು ಮೂಕಳನ್ನಾಗಿಸಿತು...
1890ರ ಕಾಲ ಇರಬೇಕು. ಎಂ.ಕೆ. ಹುಬ್ಬಳ್ಳಿಯ ಶ್ರೀ ಇಂಡಿಸೆಟ್ಟರು ಬೆಲ್ಲ ಮಾರುವದಕ್ಕೆಂದು ಹುಬ್ಬಳ್ಳಿ ಪೇಟೆಗೆ ಬರುತ್ತಿದ್ದ
ಭಕ್ತರ ಮೇಲಿನ ಸಿದ್ಧಾರೂಢರ ಪ್ರೀತಿ ಅವಳನ್ನು ಮೂಕಳನ್ನಾಗಿಸಿತು...


1890ರ ಕಾಲ ಇರಬೇಕು. ಎಂ.ಕೆ. ಹುಬ್ಬಳ್ಳಿಯ ಶ್ರೀ ಇಂಡಿಸೆಟ್ಟರು ಬೆಲ್ಲ ಮಾರುವದಕ್ಕೆಂದು ಹುಬ್ಬಳ್ಳಿ ಪೇಟೆಗೆ ಬರುತ್ತಿದ್ದರು, ಶಾಸ್ತ್ರ, ಪುರಾಣ ಪ್ರವಚನಗಳಲ್ಲಿ ಅತಿಶಯ ಆಸಕ್ತಿ ಇದ್ದುದರಿಂದ ಅವರು ಸಿದ್ದಾರೂಢರ ಮಠದಲ್ಲಿ ವಾರಗಟ್ಟಲೆ ಉಳಿದು ಸಿದ್ದರ ಪ್ರವಚನ ಆಲಿಸುತ್ತಿದ್ದರು.

ಅವರ ಅನುಭವಾಮೃತ ಇಂಡಿಶೆಟ್ಟರಿಗೆ ತಮ್ಮ ಮನೆಮಾರು ಪ್ರಪಂಚವನ್ನೇ ಮರೆಸುತ್ತಿತ್ತು. ಹೀಗೆ ಹಲವಾರು ವರ್ಷ ಉರುಳಿದವು. ಇಂಡಿಶೆಟ್ಟರು ತಮ್ಮ ಪತ್ನಿ ಶ್ರೀಮತಿ ಸಾತವೀರಮ್ಮನವರನ್ನು 1906ನೆಯ ಶಿವರಾತ್ರಿ ಜಾತ್ರೆಗೆ ಕರೆದುಕೊಂಡು ಚಕ್ಕಡಿಯಲ್ಲಿ ಬಂದರು. ದೊಡ್ಡ ಫರಸಿ ಸೇರಿತ್ತು. ಮಠದಿಂದ ದೂರದಲ್ಲಿ ಚಕ್ಕಡಿ ನಿಲ್ಲಿಸಿದರು.

ಶ್ರೀಮತಿ ಸಾತವೀರಮ್ಮ ಬಲು ವಿಲಕ್ಷಣ ಸ್ವಭಾವದ ತುಂಬ ನಿಷ್ಟುರ ಪ್ರಕೃತಿಯ, ಕಠೋರ ಮನಸ್ಸಿನ, ಬಿಗುಮಾನ ಸ್ವಭಾವದ ಹೆಣ್ಣು ಮಗಳಾಗಿದ್ದಳು. ಅವಳಿಗೆ ಸಾಧು ಸಂತ ಶರಣದಲ್ಲಿ ಗೌರವ ಇತ್ತು. ಪೂಜೆ ಪುನಸ್ಕಾರಗಳಲ್ಲಿ ಭಕ್ತಿಯಿತ್ತು. ಅವಳು ತಾನಾಯಿತು, ತನ್ನ ಮನೆತನ ಸಂಸಾರವಾಯಿತು. ಮನೆಬಿಟ್ಟು ಕದಲಿದವಳಲ್ಲ. ಎಂದೂ ಎಲ್ಲಿಗೂ ಹೋದವಳಲ್ಲ.

ಹೊರಜಗತ್ತಿನ ವಿಶೇಷ ಸಂಪರ್ಕವಿಲ್ಲದ ಹೆಂಡತಿಯನ್ನು ಇಂಡಿಶೆಟ್ರು ಹುಬ್ಬಳ್ಳಿಗೆ ಸಿದ್ಧಾರೂಢರ ಬಳಿಗೆ ಕರೆತರಲು ಪ್ರಯತ್ನಿಸಿದ್ದರು. ಆದರೂ ಅವಳು ಬಂದಿರಲಿಲ್ಲ. ಬಲು ಮುಂಗೋಪಿಯಾದ ಅವಳನ್ನು ಆ ವರ್ಷ ಬಲು ಜೋರಾಜುಲುವೆಯಿಂದ, ನಾ ಬರಲು ಒಲ್ಲೆ, ಒಲ್ಲೆಂದರೂ, ಅವಳನ್ನು ಜಾತ್ರೆಗೆ ಕರೆತಂದರು. ಒತ್ತಾಯದಿಂದ ಕರೆತಂದುದಕ್ಕೆ ಅವಳು ಧುಮು ಧುಮು ಉರಿಯುತ್ತಿದ್ದಳು.

ಗಂಡನ ಬಲವಂತಕ್ಕೆ ಅವಳು ಹುಬ್ಬಳ್ಳಿಗೆ ಬಂದಳು. ಅವಳು ಸಿದ್ಧಾರೂಢರ ಪೋಟೋ ಕೂಡ ನೋಡಿರಲಿಲ್ಲ. ಸಿದ್ಧಾರೂಢ ಒಬ್ಬ ಮನುಷ್ಯ. ಅಂವ ಹ್ಯಾಂಗ ದೇವರಾಗತಾನ. ದೇವರು ಅಂವ ಬ್ಯಾರೆ ಇರತಾನ ಎಂಬ ಭಾವ ಅವಳಲ್ಲಿ ಬಲಿತಿತ್ತು. ಇಂಥ ಮಹಾತಾಯಿ ಸಿದ್ಧರ ಜಾತ್ರೆಗೆ ಬಂದಳು.

ದೂರದಲ್ಲಿ ಚಕ್ಕಡಿ ಬಿಟ್ಟಿದ್ದರು. ಒಂದೆಡೆ ಏರಿಯ ಮೇಲೆ ಒಲೆ ಹೂಡಿದರು. ಶ್ರೀಮತಿ ಸಾತವೀರಮ್ಮನೇ ಅಡಿಗೆ ಮಾಡಿದಳು. ಅನ್ನವನ್ನು ಬಸಿಯಲು ಅವಳು ದೊಡ್ಡ ಪಾತ್ರೆಯನ್ನು ಎತ್ತಿದಳು. ವೇಳೆ ಸುಮಾರ ಇತ್ತೇನೋ! ಕೈ ಜಾರಿತು. ಕುದಿಯುವ ಅನ್ನ, ಹೊಯ್ದಾಡುವ ನೀರು ಅವಳ ಕಾಲ ಮೇಲೆ ಬಿದ್ದಾಗ ಅವಳ ಜೀವ ತಲ್ಲಣಿತು. ದೇಹ ಅಯ್ಯೋ ಎಂದು ಚೀರಿತು. ಕಾಲಿನ ಚರ್ಮ ಸುಟ್ಟು ಬುರಕಿ ಹಿರಿಯಿತು. ಗುಳ್ಳೆಗಳಿದ್ದವು. ಅವಳು ನೋವಿನಿಂದ ಕುಸಿದು ಕುಳಿತಳು.

ಅವಳ ನರಳಾಟ, ಅವಳು ಪಡುವ ದೈಹಿಕ ಯಾತನೆ ಕಂಡು ಗಂಡನಿಗೂ ಮರಕ ಉಂಟಾಯಿತು. ಕಾಲ ಸುಟ್ಟ ನೋವನ್ನು ತಾಳದ ಅವಳು, "ಮೊದಲೇ ನಾ ಬರಲು ಒಪ್ಪ ಒಲ್ಲೆ ಅಂದಿದ್ದೆ. ಜೋರಾಜುಲಮಿ ಮಾಡಿ ಕರಕೊಂಡು ಬಂದಿ. ಆ ಪುಣ್ಯಾತ್ಮನು ಇಲ್ಲಿ ನೋಡಿದರ ನನ್ನ ಕಾಲ ಸುಟ್ಟ ಬಿಟ್ಟ. ನನಗೆ ಮುಂದ ಹೆಜ್ಜೆ ಎತ್ತಿ ಇಡುವದಕ್ಕೆ ಆಗದು ನನ್ನ ಕಾಲ ಸುಟ್ಟ ಅವನ ದರ್ಶನಕ್ಕೆ ನಾ ಮರೇ ಅಂದರ ಒಲ್ಲೆ. ನೀವೇ ಎಡಿ ತಕ್ಕೊಂಡು ಹೋಗ್ರಿ. ನಾ ಇಲ್ಲಿ ಚಕ್ಕಡಿ ಬಳಿ ಕುಳಿತಿರುತ್ತೇನೆ” ಎಂದಳು. ಅವಳೊಬ್ಬಳನ್ನೇ ಬಿಟ್ಟು ಎಲ್ಲರೂ ಎಡೆ ತಕ್ಕೊಂಡು ಸಿದ್ದಾರೂಢರ ದರ್ಶನಕ್ಕೆ ಹೋದರು.

ಭಕ್ತರ ಬಂದು, ದಯಾಸಿಂಧು ಎನಿಸಿದ ಸಿದ್ದಾರೂಡರು ಲಕ್ಷ ಲಕ್ಷ ಜನ ಸಮೂಹದ ಮಧ್ಯ ತಾವು ಒಬ್ಬರೇ ಚಕ್ಕಡಿಯ ಬಳಿಯಲ್ಲಿ ಬಂದರು. ತಾಯೇ, ''ನನಗೆ ಬಹಳ ಹಸಿವಾಗಿದೆ. ತಿನ್ನಲು ಏನನ್ನಾದರೂ ನೀಡು ತಾಯಿ' ಎಂದು ಬೇಡಿದರು. ಕಾಲ ಸುಟ್ಟ ಸಂಕಟ ಪಡುತ್ತಿದ್ದ ಶ್ರೀಮತಿ ಸಾತವೀರಮ್ಮ ಯಾರೋ ಸಾಧು ಸನ್ಯಾಸಿ ಬಂದಿದ್ದಾರೆಂದು ತಿಳಿದು, “ಯಪ್ಪಾ! ನನ್ನ ಕಾಲು ಸುಟ್ಟು ನನಗೆ ಎದ್ದು ಬರುವದು ಆಗುವದಿಲ್ಲ. ಎಲ್ಲಾ ಅಡಿಗಿ ಅಲ್ಲಿ ಚಕ್ಕಡಿ ಕೆಳಗೆ ಮಾಡಿ ಇಟ್ಟನಿ. ನಿನಗೆ ಏನೇನು ಬೇಕೋ, ನೀನೇ ತಕ್ಕೊಳ ಬಾ' ಎಂದಳು. ''ನಾ ನನ್ನ ಗೋಳ ಏನ ಹೇಳಲಿ ? ಯಾರ ಮುಂದ ಹೇಳಲಿ? ನಾ ಒಲ್ಲೆ ಅಂತ ಚಾಲಿವರೆದೆ. ನನ್ನ ಗಂಡ ನನಗೆ ಕರೆದುಕೊಂಡು ಬಂದ. ಗುರು ಅನುಗ್ರಹ ಆಗುವ ತನಕ ನಾವೆಲ್ಲ ಹಸೀಬೀಜ ಇದ್ದಂಗ ಇರತೀಂವಿ. ದೇವರ ಅನುಗ್ರಹ ಆಯಿತು ಅಂದರ ಹುರದ ಬೀಜ ಆದಂಗ ಆಗತೀಂವಿ. ನಮಗ ಮತ್ತೆ ಹುಟ್ಟು ಸಾವು ಇಲ್ಲ. ಭವಬಂಧನ ಇಲ್ಲ ಎಂದು ಹೇಳಿ ನನಗ ಆ ಸಿದ್ಧಾರೂಢರ ಜಾತ್ರೆಗೆ ಕರೆದುಕೊಂಡು ಬಂದ. ಹಸೀ ಬೀಜ ಹುರಿದ ಬೀಜ ಆಗುವದು ಒತ್ತಟ್ಟಿಗಿರಲಿ, ಇಲ್ಲಿ ನೋಡಿದರ ಆ ಪುಣ್ಯಾತ್ಮ, ನನ್ನ ಕಾಲ ಸುಟ್ಟ ಬಿಟ್ಟ. ನನಗೆ ಎದ್ದು ನಿಲ್ಲಾಕ ಬರೂದಿಲ್ಲ. ನೀನೇ ಹಚಗೊಳೋ ನನ್ನಪ್ಪ” ಎಂದಳು.

ಆಗ ಸಿದ್ಧಾರೂಢರು, ತಾಯಿ ನೀ ಕುಂತಲ್ಲೇ ಕೂಡ್ರು, ಎಲ್ಲಾ ಪಾತ್ರೆ, ಪಗಡಿ ನಾನೇ ನಿನ್ನ ಮುಂದ ತಂದ ಇಡತೀನಿ. ನೀನೇ ನಿನ್ನ ಕೈಯಾರೆ ಪ್ರಸಾದ ಕೊಟ್ಟರೆ ಮಾತ್ರ ನಾನು ಉಣತೀನಿ'' ಎಂದು ಎಲ್ಲ ಅಡಿಗೆ ಮಾಡಿದ ಭಾಂಡೆಗಳನ್ನು ತಾವೇ ಕೈಯಾರೆತಂದು ಅವಳ ಮುಂದೆ ಇಟ್ಟರು.

ಅವಳೇ ಪ್ರಸಾದ ಹಚ್ಚಿಕೊಟ್ಟಳು. ಪ್ರಸಾದ ಸ್ವೀಕರಿಸುತ್ತ, “ಸಾತವೀರಮ್ಮ ನೋಡು! ಈ ಶರೀರವು ಪ್ರಾರಬ್ದಕ್ಕೆ ಅಧೀನವಾಗಿದೆ. ಅದಕ್ಕೆ ಬರುವ ಸುಖದುಃಖಗಳು ಅದು ಹಿಂದೆ ಮಾಡಿದ ಪಾಪ ಪುಣ್ಯಗಳ ಆಧಾರದ ಮೇಲೆ ಆಧರಿಸಿರುತ್ತವೆ. ಆದ್ದರಿಂದ ನಮ್ಮ ಶರೀರಕ್ಕೆ ಬರುವ ನೋವಿಗೆ ನಾವು ಯಾರ ಮೇಲೆಯೂ ಅಪವಾದ ಕೊಡಬಾರದು. ಬಂದುದನ್ನು ಶಾಂತವಾಗಿ ಭೋಗಿಸುವದರಲ್ಲಿಯೇ ನಮ್ಮ ಶ್ರೇಯಸ್ಸಿದೆ. ನಮ್ಮ ಎಲ್ಲ ಆಗು ಹೋಗುಗಳಿಗೆ ನಾವೇ ಕಾರಣರು. ಅನ್ಯರಲ್ಲ'' ಎಂದು ಹೇಳಿದರು.

ಆ ತಾಯಿಯ ಬಾಯಿಯಲ್ಲಿ ಒಂದು ತುತ್ತು ಪ್ರಸಾದವನ್ನು ಹಾಕಿ ಆಶೀರ್ವಾದದ ವರ ಹಸ್ತವನ್ನು ಅವಳ ತಲೆಯ ಮೇಲಿಟ್ಟರು. ""ನಿನ್ನ ಪ್ರಸಾದದಿಂದ ನಾನು ತೃಪ್ತಿಪಟ್ಟೆ. ನಿನ್ನ ಕುಲಕೋಟಗಳು ಉದ್ಧಾರವಾಗಲಿ'' ಎಂದು ಹರಸಿ ಹೋದರು.

ಸಿದ್ಧಾರೂಢರ ಹಸ್ತ ಅವಳ ತಲೆಯ ಮೇಲೆ ಊರಿದಾಗಲೇ ಅವಳ ನೋವು ಕ್ಷಣರ್ಧದಲ್ಲಿ ಮಾಯವಾಯಿತು. ಉರುಪು ಇಲ್ಲವಾಯಿತು. ಸುಟ್ಟ ಕಾಲಿಗೆ ಶ್ರೀಗಂಧ ಲೇಪಿಸಿದಂತಾಯಿತು. ಸಾತವೀರಮ್ಮನ ನೋವು ಅಡಗಿತ್ತು. ಸಂತಸ ಮೈ ತುಂಬಿತ್ತು.

ಅತ್ತ ಅವಳ ಪತಿ ಇಂಡಿಸೆಟ್ಟರು ಸಿದ್ದಾರೂಢರಿಗೆ ಪ್ರಸಾದ ಉಣಬಡಿಸಲು ಹೋದವರು ಮಠದಲ್ಲಿ ಸಿದ್ದಾರೂಢರು ಇಲ್ಲದುದನ್ನು ಕಂಡು ನಿರಾಸೆ ಹೊಂದಿ, ಅಪ್ಪನವರು ಈ ದೊಡ್ಡ ಜಾತ್ರೆಯಲ್ಲಿ ಯಾವ ದಾಸೋಹದ ಕಡೆಗೆ ಹೋದರೋ ಏನೋ? ಅವರನ್ನು ಎಲ್ಲಿ ಹುಡುಕುವದೆಂದು ಚಿಂತಿಸುತ್ತ ಹೊರಗೆ ಬರುವಾಗಲೇ ಸಿದ್ದಾರೂಢರು ಬಂದರು.

ಇಂಡಿಸೆಟ್ಟರು ಸಿದ್ಧಾರೂಢರ ಪಾದಕ್ಕೆ ಬಿದ್ದು, “ದೇವಾ ನಿಮಗಾಗಿ ಎಡ ತಂದಿದ್ದೇವೆ. ಪ್ರಸಾದ ಸ್ವೀಕರಿಸಬೇಕು' ಎಂದು ಪ್ರಾರ್ಥಿಸಿದರು. ಆಗ ಸಿದ್ಧರು. “ನಾನು ಇದೇ ಪ್ರಸಾದವನ್ನು ಅಲ್ಲಿ ತಕ್ಕೊಂಡೇ ಬಂದಿದ್ದೇನೆ. ಇದೆಲ್ಲವನ್ನು ದಾಸೋಹಕ್ಕೆ ಕೊಡಿರಿ” ಎಂದು ಹೇಳಿದರು.

ಎಲ್ಲರೂ ಮರಳಿ ಚಕ್ಕಡಿಗೆ ಬಂದರು. ಸಾತವೀರಮ್ಮ ಹಸನ್ಮುಖಿಯಾಗಿ, ಪ್ರಸನ್ ಚಿತ್ರದಿಂದ ಕುಳಿತಿದ್ದಳು. ಸಿಡುಕತನ ಇರಲಿಲ್ಲ, ಆಗ ಗಂಡನಿಗೆ ಆಶ್ಚರ್ಯವಾಗಿ, “ಈಗ ಕಾಲ ಸುಟ್ಟ ನೋವು ಹೇಗಿದೆ? ಎಂದು ಕೇಳಿದ. ಆಗ ಅವಳು, “ಯಾರೋ ಒಬ್ಬರು ಸಾಧುಗಳು ಬಂದಿದ್ದರು. ಅವರಿಗೆ ಪ್ರಸಾದ ನೀಡಿದೆ. ಅವರೇ ನನ್ನನ್ನು ಹರಸಿ ಹೋದರು. ಈಗ ಏನೇನೂ ನೋವಿಲ್ಲ ಎಂದರು.

ಇಂಡಿಶೆಟ್ರರಿಗೆ ಪರಮಾನಂದ, ಸಿದ್ಧಾರೂಢರೇ ಇಲ್ಲಿಗೆ ಬಂದಿರಲಿಕ್ಕೆ ಬೇಕೆಂದು ನಿರ್ಧರಿಸಿ, ಹೆಂಡತಿಯನ್ನು ಕರೆದುಕೊಂಡು ಮಠಕ್ಕೆ ಬಂದರು. ಸಾತವೀರಮ್ಮ ಸಿದ್ಧಾರೂಢರತ್ತ ಕೈ ಮಾಡಿ, ಇವರೇ ಸಾಧುಗಳು ನಮ್ಮ ಚಕ್ಕಡಿ ಹತ್ತಿರ ಬಂದವರು. ಅಯ್ಯೋ ! ದೇವಾ! ನನ್ನ ಅಪರಾಧವನ್ನು ಮನ್ನಿಸು, ನೀವಾಗಿ ಚಕ್ಕಡಿಯ ಬಳಿ ಬಂದಿರಿ. ನೀವೇ ಸಿದ್ದಾರೂಢರು ಎಂದು ಗುರುತಿಸಲಾರದ ನನ್ನ ಕಣ್ಣಿಗೆ ಮೆತ್ತಿದ್ದ ಕತ್ತಲೆಯನ್ನು ಕಳೆದಿರಿ, ದೇವಾ! ಮನ್ನಿಸು ಎಂದು ಪಾದ ಹಿಡಿದು ಅವರಡಿಗಳಲ್ಲಿ ಹೊರಳಾಡಿದಳು. ಸಿದ್ಧಾರೂಢರ ಭಕ್ತರ ಮೇಲಿನ ಪ್ರೀತಿ ಅವಳನ್ನು ಮೂಕಳನ್ನಾಗಿಸಿತು. ಸಿದ್ಧಾರೂಢರ ಬಗೆಗಿನ ಅವಳ ಭಕ್ತಿ ವಜ್ರಗಟ್ಟಿಯಾಯಿತು.

ಕೆಳಗಿನ ಲಿಂಕ್ ಮೂಲಕ app ಹಾಕಿಕೊಂಡು ಇನ್ನು ಅದ್ಭುತ ಲೀಲಾಕಥೆಗಳನ್ನು ಓದಿ

https://play.google.com/store/apps/details?id=com.wSIDDHARUDHABHAGAVATAPURANA_14016060


 rajesh pande