ನವದೆಹಲಿ, 18 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಮತದಾರರ ಪಟ್ಟಿಯಲ್ಲಿ ನಡೆದಿರುವ ವಂಚನೆ ಕುರಿತು ಗಂಭೀರ ಆರೋಪ ಮಾಡಿದ್ದಾರೆ.
ಇಂದು ರಾಜಧಾನಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕರ್ನಾಟಕದ ಕಲಬುರಗಿ ಜಿಲ್ಲೆಯ ಆಳಂದ ವಿಧಾನ ಸಭಾ ಕ್ಷೇತ್ರದಲ್ಲಿ 6,018 ಮತಗಳನ್ನು ಅಳಿಸುವ ಯತ್ನ ನಡೆದಿದೆ ಎಂದು ಆರೋಪಿಸಿದರು.
ಮಹದೇವಪುರದಲ್ಲಿ ನಡೆದ ಮತ ಅಳಿಸುವ ಘಟನೆಗೆ ಹೋಲಿಕೆ ನೀಡಿದ ಅವರು, “ಕೆಲವು ಗುಂಪುಗಳು ವ್ಯವಸ್ಥಿತವಾಗಿ ದಲಿತರು, ಒಬಿಸಿಗಳು, ಆದಿವಾಸಿಗಳು, ಅಲ್ಪಸಂಖ್ಯಾತರು ಹಾಗೂ ಕಾಂಗ್ರೆಸ್ ಬೆಂಬಲಿಗರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಉದ್ದೇಶ ಸ್ಪಷ್ಟವಾಗಿದೆ” ಎಂದರು.
ಆಳಂದದಲ್ಲಿ ನಡೆದ ಘಟನೆ ಕುರಿತು ವಿವರಿಸುತ್ತಾ, ಬೂತ್ ಮಟ್ಟದ ಮಹಿಳಾ ಅಧಿಕಾರಿಯೊಬ್ಬರ ಸಂಬಂಧಿಯ ಮತ ಅಳಿಸಲ್ಪಟ್ಟಿರುವುದು ಪತ್ತೆಯಾದ ಬಳಿಕ, ಪರಿಶೀಲನೆ ನಡೆಸಿದಾಗ ಸಾವಿರಾರು ಜನರ ಹೆಸರುಗಳನ್ನು ಸಾಫ್ಟ್‌ವೇರ್ ಬಳಸಿ ಹೊರ ರಾಜ್ಯದ ಮೊಬೈಲ್ ಸಂಖ್ಯೆಗಳ ಮೂಲಕ ಅಳಿಸಲು ಅರ್ಜಿ ಸಲ್ಲಿಸಲಾಗಿತ್ತು ಎಂದು ಅವರು ತಿಳಿಸಿದರು.
“ಈ ಅರ್ಜಿಗಳನ್ನು ನಿಜವಾದ ಮತದಾರರು ಸಲ್ಲಿಸಿಲ್ಲ, ಬೇರೆಯವರಿಂದ ಕೃತಕವಾಗಿ ಸಲ್ಲಿಕೆ ಮಾಡಲಾಗಿದೆ” ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಇದೇ ಸಂದರ್ಭದಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧವೂ ರಾಹುಲ್ ಗಾಂಧಿ ಗಂಭೀರ ಟೀಕೆ ನಡೆಸಿದರು.
“ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿರುವವರನ್ನು ಮುಖ್ಯ ಚುನಾವಣಾ ಆಯುಕ್ತರು ರಕ್ಷಿಸುತ್ತಿದ್ದಾರೆ. ಭಾರತೀಯ ಚುನಾವಣಾ ಆಯೋಗವು ಬಿಜೆಪಿ ಜೊತೆಗೂಡಿ ಮತದಾರರ ಪಟ್ಟಿಗಳನ್ನು ತಿರುಚುತ್ತಿದೆ” ಎಂದು ದೂರಿದರು.
“ನಾನು ದೇಶ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಪ್ರೀತಿಸುವವನಾಗಿ, 100ರಷ್ಟು ಸಾಕ್ಷಿಯೊಂದಿಗೆ ಮಾತ್ರವೇ ಜನರ ಮುಂದೆ ಹೇಳುತ್ತಿದ್ದೇನೆ. ಈ ವಂಚನೆಯ ಮೂಲಕ ಜನತಾಂತ್ರಿಕ ವ್ಯವಸ್ಥೆಯನ್ನೇ ಹಾಳು ಮಾಡಲಾಗುತ್ತಿದೆ” ಎಂದು ರಾಹುಲ್ ಗಾಂಧಿ ಖಂಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa