ಕೊಪ್ಪಳ, 20 ಜುಲೈ (ಹಿ.ಸ.) :
ಆ್ಯಂಕರ್ : ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಡಾ. ಎಂ.ವಿ.ರವಿ ಮತ್ತು ವಾಮನಮೂರ್ತಿರವರು ಕೊಪ್ಪಳ ತಾಲೂಕಿನ ಹೊರತಟ್ಟನಾಳ, ಮಂಗಳಾಪೂರ ಮತ್ತು ಅಳವಂಡಿ ಭಾಗಗಳಲ್ಲಿ ಮೆಕ್ಕೆ ಜೋಳ ತಾಕುಗಳಿಗೆ ಇತ್ತೀಚೆಗೆ ಭೇಟಿ ನೀಡಿ ಸೂಕ್ತ ಸಲಹೆ ನೀಡಿರುತ್ತಾರೆ.
ಕೊಪ್ಪಳ ಜಿಲ್ಲೆಯಾದ್ಯಂತ ಪೂರ್ವ ಮುಂಗಾರು ಮಳೆ ನಂತರರೈತರು ಮೆಕ್ಕೆ ಜೋಳ ಬಿತ್ತನೆ ಮಾಡಿದ್ದು, ಈಗ 30 ರಿಂದ 40 ದಿನಗಳ ಬೆಳೆ ಇರುತ್ತದೆ. ಸತತವಾಗಿ ಒಣ ಹವೆ ಮತ್ತುತೇವಾಂಶಕೊರತೆಯಿಂದ ಮೆಕ್ಕೆ ಜೋಳದಲ್ಲಿ ಅನೇಕ ರೋಗ ಮತ್ತು ಕೀಟಗಳು ಕಾಣಿಸಿಕೊಂಡಿದ್ದು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ಹತೋಟಿ ಕ್ರಮಗಳ ಕುರಿತು ಮಾಹಿತಿ ನೀಡಿರುತ್ತಾರೆ.
ರೈತರು ಮೆಕ್ಕೆ ಜೋಳವನ್ನು ಪ್ರತಿ ವರ್ಷಒಂದೇಜಮೀನಿನಲ್ಲಿ ಬೆಳೆಯದೇ ಬೆಳೆ ಪರಿವರ್ತನೆ ಮಾಡಬೇಕು. ಕಡ್ಡಾಯವಾಗಿ ಟ್ರೈಕೋಡರ್ಮಾ ಶಿಲೀಂದ್ರದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಶಿಫಾರಿತ ರಾಸಾಯನಿಕ ಗೊಬ್ಬರಗಳನ್ನು ಕೊಡುವುದರಜೊತೆಗೆ ಸೂಕ್ತ ಪ್ರಮಾಣದ ಪೊಟ್ಯಾಷ್ (26 ಕಿ.ಗ್ರಾಂ.) ಮತ್ತು ಲಘು ಪೋಷಕಾಂಶವಾದ ಸತುವಿನ ಸಲ್ಫೇಟನ್ನು (10 ಕಿ.ಗ್ರಾಂ.) ಮಣ್ಣಿನಲ್ಲಿ ಸೇರಿಸಬೇಕು. ಇದಲ್ಲದೇ ಎಳ್ಳು ಬೆಳೆಯನ್ನು ಮಿಶ್ರಣ ಮಾಡಿ ಬಿತ್ತುವುದರಿಂದ ರೋಗಗಳನ್ನು ನಿಯಂತ್ರಣದಲ್ಲಿಡಬಹುದು.
ಉರಿಜಿಂಗಿರೋಗ : ಬಿತ್ತಿದ 25 ರಿಂದ 30 ದಿನಗಳಿಗೆ ಈ ರೋಗಕಂಡು ಬಂದು ಗಿಡಗಳು ಸಾಯುತ್ತವೆ. ಎಲೆಗಳ ಮೇಲೆ ಬೂದು ಮಿಶ್ರಿತ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ರೋಗ ಉಲ್ಬಣವಾದಾಗ ಬೆಳೆಗೆ ಬೆಂಕಿ ಬಿದ್ದಂತೆ ಕಾಣುತ್ತದೆ. ಈ ರೋಗಾಣುಗಳು ಬಿತ್ತನೆ ಬೀಜ, ಹೊಲದಲ್ಲಿರುವ ರೋಗ ಪೀಡಿತ ಎಲೆಗಳು ಮತ್ತು ಗಾಳಿಯ ಮೂಲಕ ಪ್ರಸಾರವಾಗುತ್ತವೆ.
ಹತೋಟಿ ಕ್ರಮಗಳು : ಪ್ರತಿಕಿ.ಗ್ರಾಂ. ಬೀಜಕ್ಕೆ 6 ಗ್ರಾಂ. ಟ್ರೈಕೋಡರ್ಮಾ ಮತ್ತು 25 ಗ್ರಾಂ. ಅಝೋಸ್ಪಿರಿಲಂ ಜೈವಿಕ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ರೋಗ ಕಾಣಿಸಿಕೊಂಡಾಗ ತಕ್ಷಣ 2.5 ಗ್ರಾಂ. ಮ್ಯಾಂಕೋಜೆಬ್ 75 ಡ.ಬ್ಲ್ಯೂ.ಪಿ. ಅಥವಾ 1 ಮಿಲಿ ಹೆಕ್ಸಾಕೋನಾಜೋಲ್ 5 ಇ.ಸಿ. ಶಿಲೀಂದ್ರನಾಶಕಗಳನ್ನು ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು. 15 ದಿನಗಳ ನಂತರ ಮತ್ತೊಮ್ಮೆ ಸಿಂಪರಣೆ ಕೈಗೊಳ್ಳಬೇಕು.
ಕಾಂಡಕಪ್ಪು ಕೊಳೆ ರೋಗ : ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿ ತಾಪಮಾನ 30 ಡಿಗ್ರಿ ಸೆಲ್ಸಿಯಸ್‍ಕ್ಕಿಂತ ಹೆಚ್ಚಾದಾಗ ರೋಗ ಉಲ್ಬಣಗೊಂಡು ತೀವ್ರ ಹಾನಿ ಉಂಟಾಗುತ್ತದೆ. ಮಣ್ಣು, ನೀರು, ಬೇರು ಹಾಗೂ ಕಾಂಡಗಳ ಮುಂಖಾಂತರ ಈ ರೋಗ ಹರಡುತ್ತದೆ. ಪ್ರತಿ ಕಿ.ಗ್ರಾಂ. ಬೀಜಕ್ಕೆ 6 ಗ್ರಾಂ. ಟ್ರೈಕೋಡರ್ಮಾ ಮತ್ತು 25 ಗ್ರಾಂ. ರಂಜಕ ಕರಗಿಸುವ ಅಣುಜೀವಿಗಳಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಸಮತೋಲನ ಗೊಬ್ಬರ ಬಳಸಬೇಕು. ಅದರಲ್ಲೂ ಮುಖ್ಯವಾಗಿ ಶಿಫಾರಿತ ಪ್ರಮಾಣದಷ್ಟು ಪೋಟ್ಯಾಷ್‍ಗೊಬ್ಬರ ಕೊಡಬೇಕು. ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಇರುವಂತೆ ನೋಡಿಕೊಳ್ಳಬೇಕು.
ಮಳೆ ಹೆಚ್ಚಾದಾಗ ಮತ್ತು ತೇವಾಂಶ ಇರುವ ಪ್ರದೇಶದಲ್ಲಿ ಕೇದಿಗೆ ರೋಗ ಕಂಡುಬರುತ್ತದೆ. ಇದರ ಲಕ್ಷಣಗಳೆಂದರೆ, ಬಿಳಿ ಬಣ್ಣದ ಹತ್ತಿಯಂತಹ ಶಿಲೀಂದ್ರದ ಬೂಷ್ಟು ಹಾಗೂ ಪುಡಿ ಕಾಣಿಸಿಕೊಳ್ಳುತ್ತದೆ. ಎಲೆಗಳು ಹಳದಿ ಬಣ್ಣಕ್ಕೆತಿರುಗಿ ನಂತರಕಂದು ಬಣ್ಣದ ಗೆರೆಗಳು ಕಾಣಿಸಿಕೊಳ್ಳುತ್ತವೆ. ಈ ರೋಗಬೀಜ, ಮಣ್ಣು, ನೀರು ಮತ್ತು ಗಾಳಿಯ ಮೂಲಕ ಪಸರಿಸುತ್ತದೆ.
ಹತೋಟಿ ಕ್ರಮಗಳು : ಪ್ರತಿಕಿ.ಗ್ರಾಂ. ಬೀಜಗಳಿಗೆ 2 ಗ್ರಾಂ. ಮೆಟಾಲಾಕ್ಸಿಲ್ (4%) + ಮ್ಯಾಂಕೋಜೆಬ್ (64%) ಎನ್ನುವ ಸಂಯುಕ್ತ ಶಿಲೀಂದ್ರನಾಶಕದಿಂದ ಉಪಚರಿಸಬೇಕು. ರೋಗ ಕಾಣಿಸಿಕೊಂಡಾಗ 2 ಗ್ರಾಂ. ಮ್ಯಾಂಕೋಜೆಬ್ (75%) ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕಡ್ಡಾಯವಾಗಿ ಬೆಳೆ ಪರಿವರ್ತನೆ ಮಾಡಬೇಕು.
ಸೈನಿಕ ಹುಳುವಿನ ನಿರ್ವಹಣೆ ಬಾಧೆಯ ಲಕ್ಷಣಗಳು : ಈ ಕೀಡೆಗಳು ಹಗಲು ಹೊತ್ತಿನಲ್ಲಿ ಸುಳಿಯಲ್ಲಿ ಅಡಗಿಕೊಂಡಿದ್ದು ರಾತ್ರಿ ಸಮಯದಲ್ಲಿ ಸುಳಿಯ ಎಲೆಗಳನ್ನು ತಿಂದು ಹಾನಿ ಮಾಡುತ್ತವೆ. ಬೆಳೆಯು 20 ರಿಂದ 50 ದಿನಗಳಿದ್ದಾಗ ಎಲೆಯ ಮೇಲೆ ನಂತರದ ದಿನಗಳಲ್ಲಿ ತೆನೆಯ ಮೇಲೆ ಹಾನಿ ಮಾಡುತ್ತವೆ.
ಬಾಧೆಗೊಳಗಾದ ಗಿಡದ ಸುಳಿಯ ಎಲೆಯ ಮೇಲೆ ಕೀಡೆಯ ಲದ್ದೆಕಾಣುತ್ತೆ. ಬಾಧೆ ಹೆಚ್ಚಾದಂತೆ ಬೆಳೆ ಸಂಪೂರ್ಣ ನಾಶವಾಗುವ ಸಾಧ್ಯತೆಗಳಿವೆ.
ಹತೋಟಿ ಕ್ರಮಗಳು : 0.2 ಗ್ರಾಂ. ಎಮಾಮೆಕ್ಟೀನ್ ಬೆಂಜೋಯೆಟ್ (5 ಎಸ್.ಜಿ.) ಪ್ರತಿ ಲೀಟರ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವ ಹಾಗೆ ಸಿಂಪರಣೆ ಮಾಡಬೇಕು ಅಥವಾ ಕ್ಲೋರಾನಟ್ರಿಪ್ರೋಲ್ (ಶೆ. 0.4 ಜಿ.ಆರ್.) 2 ರಿಂದ 3 ಹರಳನ್ನು ಸುಳಿಯಲ್ಲಿ ಬೀಳುವ ಹಾಗೆ ಹಾಕಬೇಕು (ಎಕರೆಗೆ 4 ಕಿ.ಗ್ರಾಂ.) ಅವಶ್ಯವಿದ್ದಲ್ಲಿ ಕೀಟನಾಶಕಗಳ ಸಿಂಪರಣೆಯನ್ನು ಪುನರಾವರ್ತಿಸಬೇಕು ಅಥವಾ ಮೇಲ್ಕಾಣಿಸಿದ ಕೀಟನಾಶಕಗಳ ಬದಲಾಗಿ ಜೈವಿಕ ಕೀಟನಾಶಕವಾದ ಮೆಟಾರೈಜಿಯಂರಿಲೇಯಿ 2 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಯ ಸುಳಿಯ ಒಳಗೆ ಬೀಳುವಂತೆ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದ ವಿಜ್ಞಾನಿಗಳು ಹಾಗೂ ವಿಸ್ತರಣಾ ಮುಂದಾಳು ಡಾ. ಎಂ.ವಿ.ರವಿ ಮೊ.ನಂ. 9480247745 ಮತ್ತು ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ ಮೊ.ನಂ. 8217696837ಗೆ ಸಂಪರ್ಕಿಸಬಹುದು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್