ಹಾಸನ, 19 ಜುಲೈ (ಹಿ.ಸ.) :
ಆ್ಯಂಕರ್ : ಹಾಸನ ತಾಲೂಕಿನಲ್ಲಿ ಶುಂಠಿಯು ಪ್ರಮುಖ ವಾಣಿಜ್ಯ ಸಾಂಬಾರು ಬೆಳೆಯಾಗಿರುತ್ತದೆ. ಹಲವಾರು ರೈತರು ಅಂದಾಜು 3850 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯನ್ನು ಬಿತ್ತನೆ ಮಾಡಿದ್ದು, ಪ್ರಸ್ತುತ ಬೆಳೆಗೆ 3-4 ತಿಂಗಳುಗಳಾಗಿರುತ್ತದೆ. ಶುಂಠಿ ಬೆಳೆಗೆ ಎಲೆ ಚುಕ್ಕೆ ರೋಗ, ಗಡ್ಡೆ ಕೊಳೆ ರೋಗ ಮತ್ತು ದುಂಡಾಣು ಸೊರಗು ರೋಗಗಳು ಪ್ರಮುಖವಾಗಿ ಬಾಧಿಸುತ್ತವೆ. ಭತ್ತ, ಗೋದಿ ಮತ್ತು ಬಾರ್ಲಿಯಂತಹ ಬೆಳೆಗಳಲ್ಲಿ ಕಾಣಿಸುವ ಬೆಂಕಿ ರೋಗದಂತೆಯೇ ಇತ್ತೀಚಿಗೆ ಶುಂಠಿ ಬೆಳೆಗೆ ಪೈರಿಕ್ಯುಲೇರಿಯಾ ಎಂಬ ಶಿಲೀಂದ್ರದಿಂದ ಬೆಂಕಿ ರೋಗವು ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ವಿಜ್ಞಾನಿಗಳು ಮತ್ತು ಅಧಿಕಾರಿಗಳ ತಂಡವು ವಿವಿಧ ತಾಲೂಕು ಗಳನ್ನು ಪರಿಶೀಲಿಸಿದ್ದು, ಕೆಲವೊಂದು ಭಾಗಗಳಲ್ಲಿ ರೋಗ ಲಕ್ಷಣಗಳು ಕಂಡುಬಂದಿರುತ್ತವೆ.
ರೋಗದ ಲಕ್ಷಣಗಳು: ಪ್ರಾರಂಭದಲ್ಲಿ ಗಿಡದ ಎಲೆಗಳ ಮೇಲೆ ಕಪ್ಪು ಅಥವಾ ಆಲಿವ್-ಹಸಿರು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಚುಕ್ಕೆಗಳ ಮಧ್ಯಭಾಗವು ಬೂದಿ ಬಣ್ಣಕ್ಕೆ ತಿರುಗಿ ಸುತ್ತಲು ಕಂದು ಬಣ್ಣ ದಿಂದ ಕೂಡಿರುತ್ತದೆ. ಚುಕ್ಕೆಗಳು ಒಂದಕ್ಕೊAದು ಕೂಡಿಕೊಂಡು ಗಿಡದ ಎಲೆಗಳು ಹಳದಿಯಾಗಿ ಸುಟ್ಟಂತೆ ಕಂಡುಬರುತ್ತವೆ. ಪೈರಿಕ್ಯುಲೇರಿಯಾ ಶಿಲೀಂದ್ರದ ರೋಗಾಣುವಿನ ಬೀಜಕಣಗಳು ಗಾಳಿಯ ಮುಖಾಂತರ ಇತರ ಗಿಡಗಳಿಗೂ ವೇಗವಾಗಿ ಹರಡುತ್ತದೆ ಮತ್ತು ಕೆಲವೇ ಗಂಟೆಗಳಲ್ಲಿ ಇಡೀ ಪ್ರದೇಶವನ್ನು ಆವರಿಸುತ್ತದೆ. ರೋಗ ಹೆಚ್ಚಾಗಲು ಹೆಚ್ಚು ಆರ್ದ್ರತೆ (ಶೇ. 86-98), ಕಡಿಮೆ ರಾತ್ರಿ ಉಷ್ಣಾಂಶ (20 ಸೆಲ್ಸಿಯಸ್) ಮತ್ತು ಸಾರಜನಕ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿದಾಗ ತೀವ್ರವಾಗಿ ಕಂಡುಬರುತ್ತದೆ.
ಬೆಳಗ್ಗಿನ ಇಬ್ಬನಿ, ಮೋಡ ಕವಿದ ವಾತಾವರಣ, ತುಂತುರು ಮಳೆ ಹನಿ ಹಾಗೂ ಬಿಟ್ಟು ಬಿಟ್ಟು ಬರುವ ಬಿಸಿಲು ಮತ್ತು ಮಳೆ ಈ ರೋಗ ತೀವ್ರವಾಗಿ ಹರಡಲು ಕಾರಣಗಳಾಗಿವೆ. ರೋಗ ತೀವ್ರವಾದಾಗ ಶುಂಠಿಯ ಎಲೆ ಮತ್ತು ಕಾಂಡ ಒಣಗಿ ಗೆಡ್ಡೆಗಳ ಬೆಳವಣಿಗೆಯು ಕುಂಠಿತಗೊಂಡು ಗಡ್ಡೆಗಳ ತೂಕದಲ್ಲಿ ಶೇ.30 ರಷ್ಟು ನಷ್ಟವನ್ನು ಕಾಣಬಹುದಾಗಿದೆ. ರೋಗ ಲಕ್ಷಣಗಳು ಈಗಾಗಲೇ ಕಂಡುಬಂದಿದ್ದಲ್ಲಿ, ರೋಗವು ವೇಗವಾಗಿ ಹರಡುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪ್ರೊಪಿಕೋನಜೋಲ್ 1 ಮಿ.ಲಿ ಅಥವಾ ಟೆಬುಕೋನಜೋಲ್ 1 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಅಂಟು ದ್ರಾವಣದೊಂದಿಗೆ ಮಿಶ್ರಣ ಮಾಡಿ ಸಿಂಪಡಿಸುವುದು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ವಿಸ್ತರಣಾ ಮತ್ತು ಸಂಶೋಧನಾ ಕೇಂದ್ರ, ಸೋಮನಹಳ್ಳಿ ಕಾವಲು/ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರು ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa