ಬೆಂಗಳೂರು, 19 ಜುಲೈ (ಹಿ.ಸ.) :
ಆ್ಯಂಕರ್ : ಭಾರತದ ಆರ್ಥಿಕತೆಯಲ್ಲಿ ಮಧ್ಯಮವರ್ಗ ಪ್ರಮುಖ ಪಾತ್ರ ವಹಿಸುತ್ತಿದ್ದು, ದೇಶದ ಅಭಿವೃದ್ಧಿಗೆ ಶಕ್ತಿ ತುಂಬುತ್ತಿರುವ ಕೇಂದ್ರಬಿಂದು. ಕಳೆದೊಂದು ದಶಕದಲ್ಲಿ ಮಧ್ಯಮ ವರ್ಗದ ವ್ಯಾಪ್ತಿ ವಿಸ್ತೃತವಾಗಿದೆ. ರಾಷ್ಟ್ರೀಯ ಆದಾಯ ವೃದ್ಧಿ, ಸೇವಾ ಕ್ಷೇತ್ರದ ಅಭಿವೃದ್ಧಿ, ನಿರಂತರ ಜಾಗೃತಿ ಹಾಗೂ ಸರ್ಕಾರದ ನೀತಿಗಳೆಲ್ಲ ಮಧ್ಯಮ ವರ್ಗದ ಬೆಳವಣಿಗೆಯನ್ನು ಸಾಕಾರಗೊಳಿಸಿದೆ.
2015ರಲ್ಲಿ ಮಧ್ಯಮವರ್ಗದ ಜನಸಂಖ್ಯೆ 57.9 ಕೋಟಿ ಇದ್ದದ್ದು ಈಗ 65 ಕೋಟಿ ದಾಟಿರುವುದು ದೇಶದಲ್ಲಿ ಮದ್ಯಮ ವರ್ಗದ ಬೆಳವಣಿಗೆಗೆ ಸ್ಪಷ್ಟ ನಿದರ್ಶನ. ಹತ್ತೇ ವರ್ಷದಲ್ಲಿ 27 ಕೋಟಿ ಜನ ಬಡತನ ರೇಖೆಯಿಂದ ಹೊರ ಬಂದಿದ್ದು, ಮಧ್ಯಮವರ್ಗವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ.
ಅಂಕಿ-ಅಂಶಗಳ ಪ್ರಕಾರ 2011-12ರಿಂದ 2022-23ರ ಅವಧಿಯಲ್ಲಿ ಬಡ ವರ್ಗದ ಪ್ರಮಾಣ ಶೇ.36.7ರಿಂದ 32.7ಕ್ಕೆ ಇಳಿದರೆ, ಮಧ್ಯಮವರ್ಗ ಶೇ.47.6ರಿಂದ 52.9ಕ್ಕೆ ಏರಿಕೆಯಾಗಿದೆ. ಇದು ನವಭಾರತದ ಸಾಮಾಜಿಕ–ಆರ್ಥಿಕ ಚಲನೆಗೆ ದಿಕ್ಸೂಚಿಯಾಗಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ಉಚಿತ ಗ್ಯಾಸ್ ಸಂಪರ್ಕ, ಆಯುಷ್ಮಾನ್ ಯೋಜನೆಯಡಿ ಉಚಿತ ಆರೋಗ್ಯ ಸೇವೆ, ಪಿಎಂ-ಆವಾಸ್ ಮೂಲಕ ವಸತಿ ಸೌಲಭ್ಯ, ಪಿಎಂ-ಸ್ವನಿಧಿ ಮೂಲಕ ಸಣ್ಣ ಉದ್ಯೋಗ ಹೀಗೆ ನಾನಾ ಪ್ರಯೋಜನಕಾರಿ ಯೋಜನೆಗಳು ಬಡ ವರ್ಗವನ್ನು ಮೇಲೆತ್ತಿದರೆ ಮಧ್ಯಮ ವರ್ಗಕ್ಕೆ ವಿಶಿಷ್ಠ ಕೊಡುಗೆ ನೀಡಿದೆ.
ಗ್ರಾಮೀಣ ಪ್ರದೇಶದಲ್ಲಿ ಮಧ್ಯಮ ವರ್ಗದ ಬೆಳವಣಿಗೆ ಸಹ ಗಮನಾರ್ಹವಾಗಿದೆ. ನಬಾರ್ಡ್ ನಡೆಸಿದ ಅಧ್ಯಯನ ಪ್ರಕಾರ ಗ್ರಾಮೀಣ ಕುಟುಂಬಗಳ ಮಾಸಿಕ ಆದಾಯ 2016-17ರಲ್ಲಿ ₹8,059 ಇದ್ದು, ಅದೀಗ ಬಹುತೇಕ ಡಬಲ್ ಆಗಿದೆ. ₹15000 ಸನಿಹಕ್ಕೆ ಏರಿಕೆಯಾಗಿದೆ. ಇದು ಭಾರತದ ಗ್ರಾಮೀಣ ಆರ್ಥಿಕತೆಯ ಪಯಣವನ್ನು ಬಿಂಬಿಸುವ ಜತೆಗೆ ಮಧ್ಯಮವರ್ಗದ ಚಟುವಟಿಕೆಗಳು ನಗರಗಳಾಚೆ ಗ್ರಾಮಾಂತರ ಬದುಕಿಗೂ ವ್ಯಾಪಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
*ಡಿಮ್ಯಾಟ್, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಹೆಚ್ಚಳ:* ಈ ಆರ್ಥಿಕ ಬದಲಾವಣೆಯ ಮತ್ತೊಂದು ರೂಪ ಡಿಮ್ಯಾಟ್ ಖಾತೆಗಳ ಹೆಚ್ಚಳ. 2013ರಲ್ಲಿ ಕೇವಲ 2.1 ಕೋಟಿ ಇದ್ದ ಡಿಮ್ಯಾಟ್ ಖಾತೆಗಳು 2024ರ ವೇಳೆಗೆ ಬರೋಬ್ಬರಿ 18.5 ಕೋಟಿ ತಲುಪಿದೆ. 2024ರ ಡಿಸೆಂಬರ್ ವೇಳೆಗೆ ಮ್ಯೂಚುವಲ್ ಫಂಡ್‌ಗಳಲ್ಲಿ ₹26,459 ಕೋಟಿ ಹೂಡಿಕೆಯಾಗಿದ್ದು, ಮದ್ಯಮ ವರ್ಗದವರ ಆರ್ಥಿಕ ಶಿಸ್ತಿನ ಸಂಕೇತವಾಗಿದೆ.
ಇದಕ್ಕೆ ಇನ್ನೊಂದು ಬಲ JAM ತಂತ್ರಜ್ಞಾನ—ಜನಧನ್, ಆಧಾರ್, ಮೊಬೈಲ್ ಮೂಲಕ ಹಣಕಾಸು ಸಮಾವೇಶ. ಇದರಿಂದ ಸಣ್ಣ ಮಟ್ಟದ ಜನರು ಬ್ಯಾಂಕಿಂಗ್ ವ್ಯವಸ್ಥೆಗೆ ಸೇರಿದ್ದು, ನೇರವಾಗಿ ಹಣದ ವರ್ಗಾವಣೆ ಸಾಧ್ಯವಾಗಿದೆ. 2025ರ ಜೂನ್ ನಲ್ಲಿ 55 ಕೋಟಿ ಜನಧನ್ ಖಾತೆಗಳನ್ನು ಹೊಂದಿದ್ದು, ಈ ಯೋಜನೆಯಿಂದಾಗಿ 2023ರ ಮಾರ್ಚ್ ವೇಳೆಗೆ ₹3.48 ಲಕ್ಷ ಕೋಟಿ ಉಳಿತಾಯವಾಗಿದೆ. ಇದರಿಂದ ಮಧ್ಯಮವರ್ಗದ ಕುಟುಂಬಗಳು ಸಾಲದ ಸಂಕಟದಿಂದ ಮುಕ್ತವಾಗಿ ಯೋಜನೆಗಳ ನೇರ ಫಲಾನುಭವಿಗಳಾಗುತ್ತಿದ್ದಾರೆ.
*ಮಹಿಳಾ ಸಬಲೀಕರಣಕ್ಕೆ ಲಕ್‌ಪತಿ ದೀದಿ:* ಈ ನಡುವೆ ‘ಲಕ್‌ಪತಿ ದೀದಿ’ಯಂತಹ ಯೋಜನೆ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ್ದು, ಗ್ರಾಮೀಣ ಮತ್ತು ಮಧ್ಯಮವರ್ಗದ ಮಹಿಳೆಯರ ಸ್ವಾವಲಂಬಿ, ಸ್ವ ಉದ್ಯಮಕ್ಕೆ ಹೊಸ ದಾರಿಯಾಗಿದೆ. ಈಗಾಗಲೇ 3 ಕೋಟಿ ಮಹಿಳೆಯರು ಸ್ವ ಸಹಾಯ ಸಂಘಗಳ ಮೂಲಕ ಸಣ್ಣ ಉದ್ಯಮ ಆರಂಭಿಸಿ, ಕುಟುಂಬದ ಆರ್ಥಿಕ ಭದ್ರತೆಯಲ್ಲಿ ಭಾಗಿಯಾಗಿದ್ದಾರೆ.
ಆಯುಷ್ಮಾನ್ ಯೋಜನೆಯಂತಹ ಆರೋಗ್ಯ ಬದ್ಧತೆ ಯೋಜನೆಗಳು ಮಧ್ಯಮವರ್ಗದ ಕುಟುಂಬಗಳಿಗೆ ದೊಡ್ಡ ಆರ್ಥಿಕ ರಕ್ಷಣೆ ನೀಡಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸಾಮರ್ಥ್ಯ ಇಲ್ಲದವರಿಗೆ ₹5 ಲಕ್ಷದ ಆರೋಗ್ಯ ವಿಮೆ ಬದುಕಿಗೆ ಪುನರ್ಜೀವ ಕಲ್ಪಿಸಿದೆ. ಮನೆ, ವಿದ್ಯುತ್, ನೀರಿನಂತಹ ಮೂಲಭೂತ ಸೌಕರ್ಯಗಳು ಮಧ್ಯಮವರ್ಗದ ಅಭಿವೃದ್ಧಿಗೆ ನೆರವಾಗಿದೆ.
ಪಿಎಂ–ಆವಾಸ್ ಯೋಜನೆಯಡಿಯಲ್ಲಿ 4 ಕೋಟಿಗೂ ಅಧಿಕ ಮನೆಗಳು ನಿರ್ಮಾಣಗೊಂಡಿವೆ. ಸೌಭಾಗ್ಯ ಯೋಜನೆಯಡಿ 2.86 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಲಭಿಸಿದೆ. ಜಲ್ ಜೀವನ ಮಿಷನ್‌ನಡಿ 14 ಕೋಟಿಗೂ ಅಧಿಕ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಲಾಗಿದೆ. ಇದು ಕೋಟ್ಯಂತರ ಭಾರತೀಯರ ಆರೋಗ್ಯವಂತ, ಸಮೃದ್ಧ ಜೀವನದ ಅಡಿಪಾಯವಾಗಿದೆ.
*ವಿಕಸಿತ ಭಾರತಕ್ಕೆ ಮಧ್ಯಮ ವರ್ಗದ ಶಕ್ತಿ:* ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಕಸಿತ ಭಾರತ 2047 ದೃಷ್ಟಿಕೋನದಲ್ಲಿ ಮಧ್ಯಮ ವರ್ಗವನ್ನೇ ಆರ್ಥಿಕ ಶಕ್ತಿಯಾಗಿ ಗುರುತಿಸಿದ್ದು, ವಿದ್ಯಾಭ್ಯಾಸ, ಉದ್ಯಮಶೀಲತೆ, ಉತ್ತಮ ಬದುಕು ನೀಡುವ ಸಂಕಲ್ಪ ಇವೆಲ್ಲವೂ ನವ ಭಾರತ ನಿರ್ಮಾಣಕ್ಕೆ ಪಥವಾಗಿವೆ. ಮಧ್ಯಮ ವರ್ಗ ಭಾರತವನ್ನು ವಿಶ್ವದ ಅಗ್ರಗಣ್ಯ ಆರ್ಥಿಕ ಶಕ್ತಿಯಾಗಿ ರೂಪಿಸುವಲ್ಲಿ ಸ್ಫಟಿಕದಂತಿದೆ ಎನ್ನುತ್ತಾರೆ ತಜ್ಞರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa