ಮೈಸೂರು, 19 ಜುಲೈ (ಹಿ.ಸ.) :
ಆ್ಯಂಕರ್ : ಕರ್ನಾಟಕ ಕಾಂಗ್ರೆಸ್ ಸರ್ಕಾರವು ಉಚಿತ ಗ್ಯಾರಂಟಿ ಯೋಜನೆಗಳನ್ನು ಸಾಮಾನ್ಯ ಜನರಿಗಾಗಿ ರೂಪಿಸಿದೆ, ಜನರು ಅವುಗಳ ಪ್ರಯೋಜನ ಪಡೆದ ನಂತರ ಸರ್ಕಾರವನ್ನು ದೂರುವ ಕೆಲಸ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳನ್ನು ನಮಗಾಗಿ ನಾವು ರೂಪಿಸಿಲ್ಲ. ಜನಸಾಮಾನ್ಯರಿಗಾಗಿ ರೂಪಿಸಲಾಗಿದೆ. ಎಲ್ಲರು ಇದರ ಪ್ರಯೋಜನ ಪಡೆಯುತ್ತಿದ್ದೀರಿ. ಎಲ್ಲ ಪಕ್ಷದವರು ಪ್ರಯೋಜನ ಪಡೆಯುತ್ತಾರೆ. ಆಮೇಲೆ, ಅಭಿವೃದ್ಧಿ ಆಗುತ್ತಿಲ್ಲ. ರಾಜ್ಯ ಹಾಳಾಗುತ್ತಿದೆ ಎಂದು ಟೀಕಿಸುತ್ತಾರೆ. ನಮ್ಮ ಪಕ್ಷದವರೇ ಕೆಲವರು ಆಗಾಗ ನನ್ನನ್ನು ಭೇಟಿಯಾದಾಗ ಹೇಳುತ್ತಿರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳನ್ನು ನಾವು ಕಾಂಗ್ರೆಸ್‌ನವರಿಗಷ್ಟೇ ನೀಡುತ್ತಿಲ್ಲ. ಎಲ್ಲ ವರ್ಗದ ಜನ, ಎಲ್ಲ ಪಕ್ಷದವರು ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರದ ಬೊಕ್ಕಸ ಖಾಲಿ ಆಗಿಲ್ಲ ಎಂದು ಖರ್ಗೆ ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿದೆ ಎಂಬ ಪ್ರತಿಪಕ್ಷದವರ ಆರೋಪ ಸುಳ್ಳಿನಿಂದ ಕೂಡಿದೆ.
ಸರ್ಕಾರದ ಬಳಿ ದುಡ್ಡಿಲ್ಲ ಎಂದಾದರೆ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಹೇಗೆ ಸಾಧ್ಯ ಎಂದು ಖರ್ಗೆ ಪ್ರಶ್ನಿಸಿದರು. ಅದೃಷ್ಟವಶಾತ್, ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಕರ್ನಾಟಕದಲ್ಲಿ ದುಡ್ಡಿಗೆ ಬರ ಉಂಟಾಗುವುದಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಸರ್ಕಾರದಲ್ಲಿ ಹಣ ಇರುವುದಿಲ್ಲ ಎಂದು ಖರ್ಗೆ ಟೀಕಿಸಿದರು.
ಗ್ಯಾರಂಟಿ ಯೋಜನೆಗಳನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಬಹಳ ಚೆನ್ನಾಗಿ, ಮಾದರಿಯಾಗಿ ಅನುಷ್ಠಾನಗೊಳಿಸಿದೆ.
ದೇಶದ ವಿವಿಧ ಕಡೆಗಳಿಗೆ ನಾನು ಪ್ರವಾಸ ಮಾಡುತ್ತಿರುತ್ತೇನೆ. ಎಲ್ಲಿಯೂ ಈ ರೀತಿ ಯೋಜನೆಗಳು ಅನುಷ್ಠಾನವಾಗಿರುವುದನ್ನು ಕಂಡಿಲ್ಲ. ಕೆಲವು ರಾಜ್ಯಗಳಲ್ಲಿ ಬಿಜೆಪಿ ಕೂಡ ಗ್ಯಾರಂಟಿಗಳನ್ನು ನೀಡಿದೆ. ಆದರೆ ಎಲ್ಲಿಯೂ ಸರಿಯಾಗಿ ಅನುಷ್ಠಾನವಾಗಿಲ್ಲ ಎಂದು ಖರ್ಗೆ ದೂರಿದರು.
ದೇಶದ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಸೋತಿರಬಹುದು. ಆದರೆ ದೇಶದ ಕೋಟ್ಯಂತರ ಜನರು ನಮ್ಮ ಪರ ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜನ ನಮಗೆ ಇನ್ನೂ 10 ಸ್ಥಾನಗಳನ್ನು ಕೊಟ್ಟಿದ್ದರೆ ಮೋದಿ ಎಲ್ಲಿ ಅಧಿಕಾರಕ್ಕೆ ಬರುತ್ತಿದ್ದರು ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
ಅಲ್ಲದೆ, ಸಂವಿಧಾನ ಬದಲಾವಣೆ ಮಾಡಲು ಬಿಜೆಪಿ, ಆರ್‌ಎಸ್‌ಎಸ್ ಹುನ್ನಾರ ಮಾಡುತ್ತಿವೆ. ಅದಕ್ಕೆ ಅವಕಾಶ ನೀಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅಹಂಕಾರ, ದುರಹಂಕಾರ ಇರುವ ಮನುಷ್ಯ. ಒಂದಲ್ಲ ಒಂದು ದಿನ ಕೆಳಗೆ , ಬೀಳಲಿದ್ದಾರೆ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa